ತುಮಕೂರು: ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಲಾಕ್ ತೆರವಿನ ಬದಲಿಗೆ ನಿರ್ಬಂಧಿತ ಲಾಕ್ ಡೌನ್ ಗೆ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಜಿಲ್ಲೆಯ ವಿವಿಧ ಶಾಸಕರ ಜೊತೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತಲ್ಲದೆ ಕೆಲವು ವರ್ಗದ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ತಾಲೂಕುವಾರು ಕೋವಿಡ್ ಪ್ರಮಾಣ ಪರಿಗಣನೆಗೆ ತೆಗೆದುಕೊಂಡು ಶಾಸಕರು ಮತ್ತು ಅಧಿಕಾರಿಗಳಿಂದ ಲಾಕ್ ಡೌನ್ ತೆರವಿನ ಬಗ್ಗೆ ಮಾಹಿತಿ ಪಡೆದ ಸಚಿವರು ಜಿಲ್ಲೆಯ ಕೋವಿಡ್ ಪರಿಸ್ಥಿತಿ ಅವಲೋಕಿಸಿ ನಿರ್ಬಂಧಿತ ಲಾಕ್ ಡೌನ್ ಗೆ ಕ್ರಮ ವಹಿಸಲು ನಿರ್ದೇಶಿಸಿದರು.
ಸರ್ಕಾರ ಈ ಹಿಂದೆ ಜಾರಿಗೊಳಿಸಿರುವ ಮಾರ್ಗಸೂಚಿ ಪ್ರಕಾರ ಅಗತ್ಯ ವಸ್ತು ಖರೀದಿಗಾಗಿ ಬೆಳಗ್ಗೆ 6 ರಿಂದ 10 ಗಂಟೆಯವರಗೆ ನಿಗದಿಗೊಳಿಸಿದ್ದ ಸಮಯವನ್ನು ಸರ್ಕಾರದ ನಿರ್ದೇಶನದಂತೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ನಿಗದಿಗೊಳಿಸಿದ ಸಮಯದಲ್ಲಿ ಬಟ್ಟೆ ಅಂಗಡಿ, ಜ್ಯೂವೆಲರಿ ಶಾಪ್, ಮೋಟಾರ್ ಸೈಕಲ್ ಹಾಗೂ ಕಾರು ವಾಹನ ಸೇವೆ, ಸರ್ವೀಸ್ ಅಂಗಡಿಗಳು ತೆರೆಯುವುದಕ್ಕೆ ಅನುಮತಿಯಿದೆ ಎಂದು ತಿಳಿಸಿದರು.
ಹೋಟೆಲ್ ನಲ್ಲಿ ಎಂದಿನಂತೆ ಪಾರ್ಸೆಲ್ ಗೆ ಅವಕಾಶವಿದೆ. ಆದರೆ ಕಲ್ಯಾಣ ಮಂಟಪ, ಸೇಲ್ಸ್ ಅಂಗಡಿಗಳಿಗೆ ಅನುಮತಿಯಿಲ್ಲ. ವಾರಾಂತ್ಯದ ಭಾನುವಾರ ಮಾಮೂಲಿಯಂತೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಅಗತ್ಯ ಸೇವೆಗೆ ಅವಕಾಶವಿರಲಿದೆ. ಪೊಲೀಸ್ ಇಲಾಖೆ ಈ ನಿರ್ಬಂಧಿತ ಲಾಕ್ ಡೌನ್ ಅನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ಎಂದಿನಂತೆ ಎಲ್ಲಾ ಕೈಗಾರಿಕೆಗಳು ಶೇ.50 ರಷ್ಟು ನೌಕರರೊಂದಿಗೆ ಕಾರ್ಯ ನಿರ್ವಹಿಸಬಹುದು. ಗಾರ್ಮೇಂಟ್ಸ್ ನೌಕರರು ಶೇ.30 ರಷ್ಟು ನೌಕರರೊಂದಿಗೆ ಕೆಲಸ ಮಾಡಬಹುದು. ನೌಕರರಿಗೆ ಸಾರಿಗೆ ವ್ಯವಸ್ಥೆ ತಾವೇ ಮಾಡಿಕೊಳ್ಳಬೇಕು ಎಂದು ಮಾಲೀಕರಿಗೆ ಸೂಚನೆ ನೀಡಿದರು.
ವಾರಾಂತ್ಯದ ಭಾನುವಾರದಂದು ಎಲ್ಲಾ ವಲಯಗಳೂ ರಜೆ ನೀಡಿ ನಿರ್ಬಂಧ ಮಾಡಬೇಕು, ಜಿಲ್ಲೆಯ ಯಾವುದೇ ಭಾಗದಲ್ಲಿ ಸಂತೆ, ಜಾತ್ರೆ, ದೇವತಾ ಕಾರ್ಯಕ್ಕೆ ಅವಕಾಶವಿಲ್ಲ, ಅಧಿಕಾರಿಗಳು ಇದಕ್ಕೆ ಕಟ್ಟುನಿಟ್ಟಾದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಮದುವೆಗಳಿಗೆ ಈ ಹಿಂದಿನ ನೀತಿ ನಿಯಮಗಳೇ ಜಾರಿಯಲ್ಲಿರಲಿವೆ, ಮದುವೆ ಸಂಭ್ರಮಕ್ಕೆ ಕೇವಲ 40 ಜನಕ್ಕೆ ಮಾತ್ರ ಅವಕಾಶವಿದೆ. ಮಾರ್ಗಸೂಚಿ ಮೀರಿದವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಲಾಕ್ ಡೌನ್ ಸಮಯದಲ್ಲಿ ಅನಾವಶ್ಯಕವಾಗಿ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಸೀಜ್ ಮಾಡಲಾಗಿದ್ದ ವಾಹನಗಳನ್ನು ಪೊಲೀಸ್ ಇಲಾಖೆಯಿಂದ ಬಿಡಿಸಬೇಕು ಎಂದು ಶಾಸಕರು ಕೇಳಿಕೊಂಡಾಗ ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ರಾಜ್ಯ ಹೈಕೋರ್ಟ್ ನ ನಿರ್ದೇಶನದಂತೆ ಸೀಜ್ ಮಾಡಲಾದ ವಾಹನಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ದಂಡ ವಿಧಿಸಿ ಮೂರು ದಿನಗಳ ಅವಧಿಯೊಳಗೆ ಬಿಡುಗಡೆಗೊಳಿಸತಕ್ಕದ್ದು ಎಂದು ಜಿಲ್ಲಾ ನೂತನ ಎಸ್ಪಿ ರಾಹುಲ್ ಕುಮಾರ್ ಅವರಿಗೆ ನಿರ್ದೇಶಿಸಿದರು.
ಈ ವೇಳೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ನ್ಯಾಯಾಲಯದ ಆದೇಶದಂತೆ ಸಂಬಂಧಪಟ್ಟ ಎಲ್ಲಾ ತಾಲ್ಲೂಕು ನ್ಯಾಯಾಲಯಗಳ ಮುಂದೆ ವಾಹನ ಮಾಲೀಕರು ಹಾಜರಾಗಿ ನಿಗದಿತ ದಂಡವನ್ನು ಮಾರ್ಗಸೂಚಿಯಂತೆ ಪಾವತಿಸಿದ ಬಳಿಕ ವಾಹನ ನೀಡಲಾಗುವುದು. ಇದಕ್ಕೆ ಶಾಸಕರು ಸಾರ್ವಜನಿಕರು ಸಹಕಾರ ನೀಡಬೇಕೆಂದು ತಿಳಿಸಿದರು.
ಕೋವಿಡ್ ಲಸಿಕೆ ಸಂಬಂಧ ಮಾತನಾಡಿದ ಸಚಿವರು, ಸರ್ಕಾರದಿಂದ ಪೂರೈಕೆಯಾಗುತ್ತಿರುವ ಲಸಿಕೆಯನ್ನು ಜನಸಂಖ್ಯೆ ಆಧಾರದಲ್ಲಿ ನೀಡಲಾಗುತ್ತಿದೆ. ಪ್ರಸ್ತುತ 45+ ನವರಿಗೆ ಲಸಿಕೆ ನೀಡಲಾಗುತ್ತಿದೆ, ಮುಂದಿನ ದಿನಗಳಲ್ಲಿ 18+ ಮೇಲ್ಪಟ್ಟವರಿಗೆ ನೀಡಲು ಕ್ರಮ ವಹಿಸಲಾಗುವುದು. ಶಾಸಕರು, ತಾಲ್ಲೂಕು ಅಧಿಕಾರಿಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರತಿ ಗ್ರಾಮಕ್ಕೆ ತೆರಳಿ ಆ ಗ್ರಾಮದಲ್ಲಿ ಲಸಿಕೆ ಕಾರ್ಯಕ್ಕೆ ಚಾಲನೆ ನೀಡಬೇಕು. ಈ ಸಂಬಂಧ ಈಗಾಗಲೇ ಎಲ್ಲಾ ಪಿಡಿಓಗಳಿಗೆ ನಿರ್ದೇಶನ ನೀಡಲಾಗಿದೆ. ರೆಡ್ ಜೋನ್, ಹಾಟ್ ಸ್ಪಾಟ್ ಗಳಿಗೆ ಮೊದಲ ಆದ್ಯತೆ ನೀಡಿ ನಂತರ ಉಳಿದ ಗ್ರಾಮಗಳಲ್ಲಿ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ ಎಂದರು.
ಕೈಗಾರಿಕೆಗಳು, ಗಾರ್ಮೇಂಟ್ಸ್ ಗಳ ಮಾಲೀಕರು ತಮ್ಮ ನೌಕರರಿಗೆ ತಾವೇ ಲಸಿಕೆ ಖರೀದಿಸಿ ನೀಡುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಶಾಸಕರು ತಮ್ಮ ವ್ಯಾಪ್ತಿಯಲ್ಲಿನ ಕೈಗಾರಿಕೆ ಮತ್ತು ಗಾರ್ಮೇಂಟ್ಸ್ ಮಾಲೀಕರಿಗೆ ಮನವೊಲಿಸಬೇಕು ಎಂದು ಸಲಹೆ ನೀಡಿದರು.
ಶಾಸಕರಾದ ಜಯರಾಮ್, ಬಿ.ಸಿ.ನಾಗೇಶ್, ಡಾ.ರಂಗನಾಥ್ ಮಾತನಾಡಿ, ಜಿಲ್ಲೆಯಲ್ಲಿ ಸೂಕ್ತ ರೀತಿಯಲ್ಲಿ ಬ್ಲಾಕ್ ಫಂಗಸ್ ಗೆ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಬ್ಲಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂಬಂಧ ಕ್ರಮ ವಹಿಸಲಾಗಿದೆ. ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ಕ್ರಮ ವಹಿಸುವುದಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಎಸ್.ಆರ್.ಶ್ರೀನಿವಾಸ್, ರಾಜೇಶ್ ಗೌಡ, ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಪಂಚಾಯತ್ ಸಿಇಓ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್ ಇತರರು ಇದ್ದರು.
ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ: ಮಾಧುಸ್ವಾಮಿ
ತುಮಕೂರು: ಜಿಲ್ಲೆಯಲ್ಲಿರುವ ಬಟ್ಟೆ, ಜ್ಯೂಯಲರಿ, ಕೈಗಾರಿಕೆ, ಗಾರ್ಮೇಂಟ್ಸ್ ಮಾಲೀಕರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಟ್ಟೆ, ಕೈಗಾರಿಕೆ, ಗಾರ್ಮೇಂಟ್ಸ್, ಜ್ಯೂಯಲರಿ ಮಾಲೀಕರೊಂದಿಗೆ ಸಭೆ ನಡೆಸಿ ಮಾತನಾಡಿದ ಸಚಿವರು, ಸೋಮವಾರದಿಂದ ಹೊಸ ಮಾರ್ಗಸೂಚಿ ಜಾರಿಗೆ ಬರಲಿದ್ದು, ಇದರನ್ವಯ ಜಿಲ್ಲೆಯಲ್ಲಿರುವ ಕ್ಲಾತ್, ಜ್ಯೂಯಲರಿ, ಕೈಗಾರಿಕೆ, ಗಾರ್ಮೇಂಟ್ಸ್ ಮಾಲೀಕರು ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿ ಪಾಲಿಸಿ ವ್ಯಾಪಾರ ವಹಿವಾಟು ನಡೆಸಬೇಕು ಎಂದು ಹೇಳಿದರು.
ಮೊಬೈಲ್ ಷೋ ರೂಂ ಸೇರಿದಂತೆ ಇತರೆ ಸೇಲ್ಸ್ ಅಂಗಡಿಗಳಿಗೆ ಅವಕಾಶ ಇಲ್ಲ. ಅಧಿಕಾರಿಗಳು ನೀಡಿರುವ ಸಮಯ ಪಾಲನೆ ಮಾಡಬೇಕು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಕೆಲ ಮಾಲೀಕರು ಕಲ್ಯಾಣ ಮಂಟಪ, ಫರ್ನಿಚರ್ಸ್ ಅಂಗಡಿ ತೆರೆಯಲು ಅನುಮತಿ ನೀಡಬೇಕೆಂದು ಕೇಳಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸರ್ಕಾರದ ಮಾರ್ಗಸೂಚಿಯಲ್ಲಿ ಇವುಗಳಿಗೆ ಅವಕಾಶವಿಲ್ಲ, ಸ್ವಲ್ಪ ದಿನದ ಮಟ್ಟಿಗೆ ಕಾಯಲೇಬೇಕು ಎಂದರು.
ಸಭೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸಿಇಓ ಡಾ.ಕೆ.ವಿದ್ಯಾಕುಮಾರಿ, ಜ್ಯೂಯಲರಿ, ಬಟ್ಟೆ, ಕೈಗಾರಿಕೆ, ಗಾರ್ಮೇಂಟ್ಸ್ ಮಾಲೀಕರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Comments are closed.