ಪಾರಂಪರಿಕ ವೈದ್ಯ ಪದ್ಧತಿಗೆ ಜಯಚಂದ್ರ ಮೆಚ್ಚುಗೆ

207

Get real time updates directly on you device, subscribe now.

ಶಿರಾ: ಕಣ್ಣಿಗೆ ಕಾಣಿಸದ ವೈರಸ್‌ ಒಂದು ಪ್ರಪಂಚದ 208 ದೇಶದ 780 ಕೋಟಿಗೂ ಹೆಚ್ಚು ಜನರನ್ನು ಮನೆಯಲ್ಲೇ ಇರುವಂತೆ ಮಾಡಿದೆ. ಇಂಥ ಸಂದರ್ಭದಲ್ಲಿ ಭಾರತೀಯ ಪಾರಂಪರಿಕ ವೈದ್ಯ ಪದ್ಧತಿ ಹೆಚ್ಚಿನ ಮಹತ್ವ ಗಳಿಸಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ತಾಲ್ಲೂಕಿನ ಹುಣಸೇಹಳ್ಳಿಯಲ್ಲಿ ದಿವಂಗತ ರಂಗಣ್ಣನವರ ಕುಟುಂಬದವರು ಮತ್ತು ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ದಿನಸಿ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕೋವಿಡ್‌ ಸೋಂಕು ಯಾರಿಂದ ಹೇಗೆ ಹರಡುತ್ತಿದೆ ಎನ್ನುವುದನ್ನು ಕಂಡುಹಿಡಿಯುವುದೇ ಕಷ್ಟವಾಗಿದೆ. ಆದರೆ ಅದನ್ನು ಎದುರಿಸಲು ಭಾರತ ಎರಡು ಬಗೆಯ ವ್ಯಾಕ್ಸಿನ್ ಗಳನ್ನು ಕಂಡು ಹಿಡಿದಿದೆ. ಎಲ್ಲರೂ ವ್ಯಾಕ್ಸಿನೇಷನ್‌ ಮಾಡಿಸಿಕೊಳ್ಳುವ ಮೂಲಕ ರೋಗದ ವಿರುದ್ಧ ಹೋರಾಡುವ ಶಕ್ತಿ ಪಡೆಯಬೇಕು ಎಂದು ಕರೆ ನೀಡಿದರು.
ಆಂಧ್ರದ ಆನಂದಯ್ಯ ಎನ್ನುವವರು ಭಾರತೀಯ ವೈದ್ಯ ಪದ್ಧತಿಯಿಂದ ಸಹಸ್ರಾರು ಕೊರೊನಾ ರೋಗಿಗಳನ್ನು ಗುಣಪಡಿಸಿದ್ದಾರೆ. ಔಷಧಿಗೆ ಏನು ಬಳಸಲಾಗುತ್ತಿದೆ ಎಂದು ಕೋರ್ಟಿ ನಲ್ಲಿ ಬಹಿರಂಗಪಡಿಸಿದ್ದು, ಬಿಲ್ವಪತ್ರೆ, ಮಾವಿನ ಚಿಗುರು, ಶುಂಠಿ ಮೊದಲಾದವುಗಳು ಮತ್ತು ಬಿಳಿ ಎಕ್ಕದ ಹೂವುಗಳನ್ನು ಬಳಸಲಾಗುತ್ತಿದೆ ಎಂದು ವಿವರಿಸಿದ್ದಾರೆ. ಒಂದು ವೇಳೆ ಅವರು ರೋಗಿಗಳನ್ನು ಗುಣಪಡಿಸಿರುವುದು ಖಚಿತವೇ ಆಗಿದ್ದರೆ, ಅವರಿಗೆ ನೊಬೆಲ್‌ ಪ್ರಶಸ್ತಿ ಕೊಡಬೇಕಾಗುತ್ತದೆ. ಇದು ಭಾರತೀಯ ಪಾರಂಪರಿಕ ವೈದ್ಯಪದ್ಧತಿಗೆ ಇರುವ ತಾಕತ್ತು.
ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿಯಂತೆ ಸಾಂಬಾರು ಪದಾರ್ಥಗಳಲ್ಲಿ ಔಷಧದ ಗುಣ ಅಡಗಿದೆಯಂತೆ. ಅದರಂತೆ ನಮ್ಮ ಅಡಿಗೆ ಮನೆಯಲ್ಲಿ ಇರುವ ಸಾಂಬಾರು ಪದಾರ್ಥಗಳನ್ನೇ ಔಷಧಿಯಂತೆ ಉಪಯೋಗಿಸಬಹುದಾಗಿದ್ದು, ಜನರೂ ಕೂಡಾ ತಮ್ಮ ತಮ್ಮ ಮನೆಗಳಲ್ಲಿ ಕಷಾಯ ತಯಾರಿಸಿ ಕುಡಿಯುವ ಮೂಲಕ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಹತ್ವದ ಕಾರ್ಯಕ್ರಮ: ಸ್ವತಂತ್ರ ಬಂದ ನಂತರ ಇದು ಮೊದಲ ಬಾರಿಗೆ ಜನ ಜೀವನ ವ್ಯವಸ್ಥೆ ಇಷ್ಟು ಕಮ್ಮಿ ಮಟ್ಟಕ್ಕೆ ಕುಸಿದಿದೆ. ಹಿಂದೆ ತುತ್ತು ಅನ್ನಕ್ಕಾಗಿ ಬೇಡುವ ಪರಿಸ್ಥಿತಿ ಬಂದಿತ್ತು ಎಂದು ಕೇಳಿದ್ದೆವು. ಈಗಲೂ ಉಳ್ಳವರು ಬಡ ಜನರ ಸಹಾಯಕ್ಕೆ ಬರುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ದಿನಸಿ ಕಿಟ್‌ ವಿತರಣೆ ಕಾರ್ಯಕ್ರಮ ಮಹತ್ವ ಪಡೆದಿದೆ. ಇಂದಿನ ಕಾರ್ಯಕ್ರಮ ಹಲವರಿಗೆ ಮಾದರಿಯಾಗಿ, ನೂರಾರು ಜನಕ್ಕೆ ಅಲ್ಲದೇ ಹೋದರೂ, ಹತ್ತು ಜನಕ್ಕಾದರೂ ಸಹಾಯ ಮಾಡುವ ಮನಸ್ಥಿತಿ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಕ್ರಿಬ್ಕೋ ನಿರ್ದೇಶಕ ಆರ್‌.ರಾಜೇಂದ್ರ, ಸಂಜಯ್‌ ಜಯಚಂದ್ರ ಮಾತನಾಡಿದರು. ಹುಣಸೆಹಳ್ಳಿ ಶಿವಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬರಗೂರು ನಟರಾಜು, ಪಿ.ಆರ್‌.ಮಂಜುನಾಥ್‌, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ರಾಘವೇಂದ್ರ, ಸಮಾಜ ಸೇವಕ ಕಲ್ಕೆರೆ ರವಿಕುಮಾರ್‌, ಗುಳಿಗೇನಹಳ್ಳಿ ನಾಗರಾಜು, ಶಶಿಧರ ಗೌಡ, ದಯಾನಂದ ಗೌಡ, ಜಯಲಕ್ಷ್ಮೀ ಮೊದಲಾದವರು ಇದ್ದರು.

Get real time updates directly on you device, subscribe now.

Comments are closed.

error: Content is protected !!