ರಸ್ತೆಗಳಲ್ಲಿ ಆಟೋಗಳದ್ದೇ ಕಾರುಬಾರು

ಸೆಮಿ ಲಾಕ್ ಡೌನ್‌ ಜಾರಿ- ವ್ಯಾಪಾರ ವಹಿವಾಟು ಜೋರು- ಬಟ್ಟೆ, ಚಿನ್ನದಂಗಡಿಗಳು ಬಂದ್

336

Get real time updates directly on you device, subscribe now.

ತುಮಕೂರು: ರಾಜ್ಯದಲ್ಲಿ ಕೋವಿಡ್‌-19 ಸೋಂಕಿನ ಪ್ರಮಾಣ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಸೆಮಿ ಲಾಕ್ ಡೌನ್‌ ಜಾರಿಗೊಳಿಸಿರುವುದರಿಂದ ಕಲ್ಪತರು ನಾಡು ತುಮಕೂರಿನಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆಯಾದರೂ ರಸ್ತೆಗಿಳಿದಿರುವ ವಾಹನಗಳ ಸಂಚಾರ ಭರಾಟೆ, ಜನರ ಓಡಾಟ ಮತ್ತಷ್ಟು ಆತಂಕ ಸೃಷ್ಟಿದ್ದು, ಮತ್ತೆ ಕೊರೊನಾ ಅಟ್ಟಹಾಸ ನಡೆಸುತ್ತಾ ಎಂಬ ಭಯ ಶುರುವಾಗಿದೆ.
ಸರ್ಕಾರ, ಜಿಲ್ಲಾಡಳಿತಗಳು ಏನೇ ಕಟ್ಟುನಿಟ್ಟಿನ ಕಾನೂನು ಕ್ರಮ ಜಾರಿ ಮಾಡಿದರೂ ಅದಕ್ಕೆ ಕ್ಯಾರೆ ಎನ್ನದೆ ಜನರು ಮಾತ್ರ ತಮಗಿಷ್ಟ ಬಂದಂತೆ ಅಡ್ಡಾಡುತ್ತಿರುವುದರಿಂದ ನಿಯಂತ್ರಣಕ್ಕೆ ಬರುತ್ತಿರುವ ಕೊರೊನಾ ಸೋಂಕು ಮತ್ತೆ ಹಬ್ಬುವ ಲಕ್ಷಣ ಗೋಚರಿಸುತ್ತಿವೆ.
ಬೆಳಗ್ಗೆಯಿಂದಲೇ ಆಟೋ ರಿಕ್ಷಾಗಳು, ಕಾರುಗಳು, ದ್ವಿಚಕ್ರ ವಾಹನಗಳು ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದು, ಯಾರ ಭಯವೂ ಇಲ್ಲದೆ ಸಂಚರಿಸುತ್ತಿದ್ದವು. ಇನ್ನು ಆಟೋ ರಿಕ್ಷಾಗಳಿಗೆ ಇಬ್ಬರು ಪ್ರಯಾಣಿಕರನ್ನು ಮಾತ್ರ ಕೂರಿಸಿಕೊಳ್ಳುವಂತೆ ಆದೇಶ ಮಾಡಿದ್ದರೂ ಕೆಲ ಆಟೋಗಳವರು ಮೂರು, ನಾಲ್ವರನ್ನು ಕೂರಿಸಿಕೊಂಡಿದ್ದರೆ, ಮತ್ತೆ ಕೆಲವರು ನಿಯಮದಂತೆ ಇಬ್ಬರನ್ನು ಕೂರಿಸಿಕೊಂಡು ಅವರಿಂದ ದುಬಾರಿ ಪ್ರಯಾಣ ದರ ವಸೂಲಿ ಮಾಡುತ್ತಿರುವುದು ಕಂಡು ಬಂತು.
ಇನ್ನು ಅಗತ್ಯ ಇರುವ ದಿನಸಿ, ಹಾಲು, ತರಕಾರಿ, ಮಾಂಸದ ಅಂಗಡಿಗಳು ವ್ಯಾಪಾರ ವಹಿವಾಟಿನ ಅವಧಿ ಮಧ್ಯಾಹ್ನ 2 ಗಂಟೆವರೆಗೆ ವಿಸ್ತರಿಸಿರುವುದರಿಂದ ಜನ 10 ಗಂಟೆ ಬಳಿಕವೇ ಅಂಗಡಿ ಮುಂಗಟ್ಟುಗಳಿಗೆ ತೆರಳುತ್ತಿರುವುದು ಕಂಡು ಬಂತು.
ಮೊನ್ನೆವರೆಗೆ ಕಾರು, ದ್ವಿಚಕ್ರ ವಾಹನಗಳಲ್ಲಿ ನಗರ ಪ್ರವೇಶಿಸಿದರೆ ವಾಹನಗಳು ಸೀಜ್‌ ಆಗುತ್ತವೆ ಎಂಬ ಭಯ, ಆತಂಕ ಇತ್ತು, ಆದರೆ ಸೋಮವಾರ ಯಾವುದೇ ಭಯ ಇಲ್ಲದೇ ಇರುವುದರಿಂದ ಕಾರು, ದ್ವಿಚಕ್ರ ವಾಹನಗಳಲ್ಲಿ ಜನ ಮಾರುಕಟ್ಟೆ, ದಿನಸಿ ಅಂಗಡಿಗಳಿಗೆ ಲಗ್ಗೆಯಿಟ್ಟಿದ್ದರಿಂದ ಸಹಜವಾಗಿಯೇ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ.
ಇನ್ನು ತುಮಕೂರಿನಲ್ಲಿ ಜಿಲ್ಲಾ ಸಚಿವರು ಜ್ಯೂಯಲರಿ, ಜವಳಿ ಹಾಗೂ ಗ್ಯಾರೇಜ್ ಗಳನ್ನು ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅವಕಾಶ ನೀಡಿರುವುದಾಗಿ ಘೋಷಿಸಿದ್ದರು. ಆದರೆ ಮತ್ತೆ ರಾತ್ರಿ ಏಕಾಏಕಿ ಈ ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಡಳಿತದ ಗೊಂದಲದ ತೀರ್ಮಾನದಿಂದಾಗಿ ಎಂ.ಜಿ.ರಸ್ತೆ, ಗುಂಚಿ ಸರ್ಕಲ್‌, ಮಂಡಿ ಪೇಟೆಯಲ್ಲಿರುವ ಜವಳಿ, ಜ್ಯೂಯಲರಿ ಅಂಗಡಿಗಳ ಮಾಲೀಕರು ರಾತ್ರಿ ಜಾರಿಗೊಳಿಸಿರುವ ಆದೇಶದ ಮಾಹಿತಿ ಕೊರತೆಯಿಂದಾಗಿ ಬೆಳಗ್ಗೆ ತಮ್ಮ ಅಂಗಡಿ ಮಳಿಗೆಗಳ ಬಾಗಿಲು ತೆರೆದು, ಮತ್ತೆ ಜಿಲ್ಲಾಡಳಿತದ ಆದೇಶವನ್ನು ಪತ್ರಿಕೆಗಳಲ್ಲಿ ಓದಿ ಆಡಳಿತ ವರ್ಗಕ್ಕೆ ಹಿಡಿಶಾಪ ಹಾಕುತ್ತಾ ಮನೆಗಳಿಗೆ ವಾಪಸ್ಸಾದ ಪ್ರಸಂಗವೂ ಕಂಡು ಬಂತು.
ಖಾಸಗಿ, ಸಾರಿಗೆ ಬಸ್ ಗಳು, ನಗರ ಸಾರಿಗೆ ಬಸ್ ಗಳ ಸಂಚಾರ ಇಲ್ಲದಿದ್ದರೂ ಸಹ ಆಟೋರಿಕ್ಷಾಗಳು ಮತ್ತು ಕಾರುಗಳ ಸಂಚಾರದಿಂದ ನಗರದ ಬಹುತೇಕ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಸಂಚಾರ ದಟ್ಟಣೆ ಗಮನಿಸಿದರೆ ನಗರದಲ್ಲಿ ಯಾವುದೇ ರೀತಿಯ ಸೆಮಿ ಲಾಕ್ ಡೌನ್‌ ಸಹ ಜಾರಿ ಇಲ್ಲ ಎಂಬಂತೆ ಭಾಸವಾಗುತ್ತಿದೆ.

Get real time updates directly on you device, subscribe now.

Comments are closed.

error: Content is protected !!