ರೈತರು ಬೆಳೆ ವಿಮೆಯಿಂದ ವಂಚಿತವಾಗಬಾರದು: ಸಿಇಒ

469

Get real time updates directly on you device, subscribe now.

ತುಮಕೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆ ಬಗ್ಗೆ ರೈತರಿಗೆ ವಿಮಾ ಕಂಪನಿಗಳು ಹಾಗೂ ಇಲಾಖೆಗಳು ಜಾಗೃತಿ ಮೂಡಿಸಬೇಕಲ್ಲದೆ ಅರ್ಹನಿರುವ ಯಾವುದೇ ರೈತನೂ ವಿಮಾ ಯೋಜನೆಯಿಂದ ವಂಚಿತವಾಗದಂತೆ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್‌ ಸಿಇಓ ಡಾ.ಕೆ.ವಿದ್ಯಾಕುಮಾರಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆಯಿಂದ ರೈತರಿಗಾಗುವ ಅನುಕೂಲದ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು. ರೈತರಿಗೆ ಸಮಸ್ಯೆ ಉಂಟಾಗದಂತೆ ವಿಮಾ ಮೊತ್ತ ಪಾವತಿಗೆ ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶಿಸಿದರು.
ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ವಿಮಾ ಯೋಜನೆಯಡಿ ಎಲ್ಲಾ ರೈತರು ಬೆಳೆ ವಿಮೆ ಮಾಡಿಸಿ ಗರಿಷ್ಟ ಪ್ರಯೋಜನ ಪಡೆಯಬೇಕು. ಹವಾಮಾನ ಆಧಾರಿತ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಲು ರೈತರು ಹೆಚ್ಚು ಆಸಕ್ತಿ ತೋರಬೇಕು. ಅಂತೆಯೇ ತೋಟಗಾರಿಕೆ ಇಲಾಖೆಯ ವ್ಯಾಪ್ತಿಗೊಳಪಡುವ ಬೆಳೆಗಳ ವಿಮಾ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ರೈತರು ವಿಮಾ ಮೊತ್ತ ಪಾವತಿಸಿದ ತಕ್ಷಣವೇ ಬ್ಯಾಂಕ್‌ ಗಳು ವಿಮಾ ಯೋಜನೆಗೆ ನೋಂದಣಿ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ವಿಳಂಬದಿಂದ ವಿಮಾ ಮೊತ್ತ ಪಾವತಿಸಿದ ರೈತನಿಗೆ ಮೋಸ ಆದರೆ ಅದಕ್ಕೆ ಬ್ಯಾಂಕ್‌ ಗಳನ್ನೇ ನೇರ ಹೊಣೆ ಮಾಡಲಾಗುವುದು. ಅಂತೆಯೇ ವಿಮಾ ಕಂಪನಿಗಳು ಸಹ ಸಮರ್ಪಕವಾಗಿ ವಿಮಾ ಮೊತ್ತ ಪಾವತಿಸಬೇಕು. ಎಲ್ಲಾ ದಾಖಲೆಗಳು ಸರಿಯಿದ್ದು ಅಧಿಕಾರಿಗಳ ತಪ್ಪಿನಿಂದ ರೈತನಿಗೆ ಮೋಸವಾದರೆ ರೈತನಿಗೆ ಸಿಗಬೇಕಾದ ವಿಮಾ ಮೊತ್ತವನ್ನು ಅಧಿಕಾರಿಗಳೇ ಭರಿಸಬೇಕು ಎಂದು ಎಚ್ಚರಿಕೆ ನೀಡಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ವಿಮಾ ಮೊತ್ತ ಒದಗಿಸದೆ ರೈತರಿಗೆ ಅನ್ಯಾಯ ಮಾಡಿದ ವಿಮಾ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಕಳೆದ ಬಾರಿಗಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ರೈತರು ವಿಮಾ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ಅದರಲ್ಲೂ ಕಡಿಮೆ ನೋಂದಣಿಯಾಗಿರುವ ಕುಣಿಗಲ್‌ ತಾಲೂಕಿನಲ್ಲಿ ಹೆಚ್ಚು ನೋಂದಣಿ ಮಾಡಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಅವರಿಗೆ ಸೂಚಿಸಿದರು.
ರೈತರು ಕೊನೆ ಅವಧಿಯಲ್ಲಿ ವಿಮಾ ಮೊತ್ತ ಪಾವತಿಗೆ ಬರುತ್ತಾರೆ. ಬಹುತೇಕ ಎಲ್ಲಾ ರೈತರು ಒಮ್ಮೆಲೆ ಬರುವುದರಿಂದ ವಿಳಂಬದಂತಹ ಸಮಸ್ಯೆಯಾಗುತ್ತದೆ. ಹಾಗಾಗಿ ರೈತರು ಆರಂಭದಲ್ಲೇ ವಿಮಾ ಕಂತು ಪಾವತಿಸಬೇಕು. ಈ ನಿಟ್ಟಿನಲ್ಲಿಯೂ ಜಾಗೃತಿ ಮೂಡಿಸಬೇಕೆಂದು ಸಭೆಯಲ್ಲಿದ್ದ ಬ್ಯಾಂಕ್‌ ಅಧಿಕಾರಿಗಳು ಮನವಿ ಮಾಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಮಾತನಾಡಿ, ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆಯಡಿ 2021ರ ಮುಂಗಾರು ಹಂಗಾಮಿನಲ್ಲಿ ಸ್ಥಳ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆಯಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರ ನೀಡಲಾಗುವುದು. ವಿಮೆ ಮಾಡಿಸಿರುವ ರೈತರು ಬೆಳೆ ನಷ್ಟದ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಚೇರಿಗಳಿಗೆ ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 72 ಗಂಟೆಗಳೊಳಗಾಗಿ ತಿಳಿಸಬೇಕು. ನಷ್ಟದ ಬಗೆಗಿನ ಮಾಹಿತಿ ಸ್ವೀಕರಿಸಿದ ಮೇಲೆ ವಿಮಾ ಸಂಸ್ಥೆಗಳು 48 ಗಂಟೆಯೊಳಗಾಗಿ ಬೆಳೆ ನಷ್ಟದ ಪ್ರದೇಶಕ್ಕೆ ಭೇಟಿ ನೀಡಿ ನಷ್ಟ ನಿರ್ಧರಿಸುತ್ತಾರೆ. ಇದಲ್ಲದೆ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇಕಡಾ 25 ರಷ್ಟು ಬೆಳೆ ವಿಮಾ ನಷ್ಟ ಪರಿಹಾರ ನೀಡಲಾಗುವುದು. ಹಾಗೂ ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇಕಡಾ 25ರಷ್ಟು ಹಣವನ್ನು ಪರಿಹಾರವಾಗಿ ಒದಗಿಸಲಾಗುವುದು. ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಎರಡು ವಾರದೊಳಗೆ ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರ ಒದಗಿಸಲಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಫ್ಯೂಚರ್‌ ಜನರಲಿ ಜನರಲ್‌ ಇನ್ಸೂರೆನ್ಸ್ ಕಂಪನಿಯನ್ನು ಜಿಲ್ಲೆಯಲ್ಲಿ ವಿಮಾ ಯೋಜನೆ ಅನುಷ್ಠಾನ ಮಾಡಲು ನಿಗದಿಪಡಿಸಲಾಗಿದೆ. ಈ ಯೋಜನೆಯಡಿ ರೈತರು ಪಹಣಿ, ಆಧಾರ್‌ ಕಾರ್ಡ್, ಬ್ಯಾಂಕ್‌ ಪಾಸ್‌ ಪುಸ್ತಕದ ಜೆರಾಕ್ಸ್ ಪ್ರತಿ ಒದಗಿಸಿ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಸೇರಿದಂತೆ ಕೃಷಿ, ತೋಟಗಾರಿಕೆ, ವಿಮಾ ಸಂಸ್ಥೆ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!