ತುರುವೇಕೆರೆ: ಕೊರೊನಾ ಸೃಷ್ಟಿಸಿರುವ ತಲ್ಲಣದ ನಡುವೆಯೂ ತುಮುಲ್ ಹೈನುಗಾರರ ಹಿತ ಕಾಯಲು ಸದಾ ಸಿದ್ಧವಿದೆ ಎಂದು ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ತಿಳಿಸಿದರು.
ಪಟ್ಟಣದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳ ಸಿಬ್ಬಂದಿಗೆ ಕೋವಿಡ್ ಸುರಕ್ಷತಾ ಸಾಧನಗಳನ್ನು ವಿತರಿಸಿ ಮಾತನಾಡಿ, ಕಳೆದ ಬಾರಿ ಕೂಡ ಕೊರೊನಾ ಸಂಕಷ್ಟಕ್ಕೆ ಸಂಸ್ಥೆ ಸಿಲುಕಿತ್ತು, ಅಂದು ಸಹ ಹೈನುಗಾರರ ಹಿತ ಕಾಯುವಲ್ಲಿ ತುಮುಲ್ ಯಶಸ್ವಿಯಾಗಿತ್ತು. ಇದೀಗ ಮತ್ತೆ ಕೊರೊನಾ ಎರಡನೇ ಅಲೆ ಅಪ್ಪಳಿಸಿದ್ದು ಮಾರುಕಟ್ಟೆಯಲ್ಲಿ ಹಾಲಿನ ಮಾರಾಟ ತೀವ್ರ ಇಳಿಕೆ ಕಂಡಿದೆ, ಇಂತಹ ಸಂದಿಗ್ದತೆಯಲ್ಲಿ ಸಂಸ್ಥೆ ಸಿಲುಕಿರುವ ವೇಳೆ ಹಾಲಿನ ಸಂಗ್ರಹ ನಿತ್ಯ 8.16 ಲಕ್ಷ ಲೀಟರ್ ದಾಟುತ್ತಿದೆ, ಈ ಪೈಕಿ ಕೇವಲ 4 ಲಕ್ಷ ಲೀಟರ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿದೆ, ಆದರೂ ಸಹ ಹೈನುಗಾರರಿಂದ ಹಾಲನ್ನು ನಿರಾಕರಿಸದೆ ಸಂಸ್ಥೆ ಸಂಗ್ರಹ ಮಾಡುತ್ತಿದೆ ಎಂದರು.
ಸಂಸ್ಥೆಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಹೈನುಗಾರರಿಂದ ಖರೀದಿಸುವ ಹಾಲಿನ ದರದಲ್ಲಿ 2 ರೂ. ಕಡಿತಗೊಳಿಸಲಾಗಿದೆ, ಸಂಸ್ಥೆಯ ಆರ್ಥಿಕ ಸಬಲತೆಯಿದ್ದ ದಿನಗಳಲ್ಲಿ ಹೈನುಗಾರರ, ರಾಸುಗಳಿಗಾಗಿ ಅನೇಕ ವಿನೂತನ ಯೋಜನೆ ಜಾರಿಗೊಳಿಸಿದ್ದು ಇಂದಿಗೂ ಮುಂದುವರೆದಿವೆ. ಕೊರೊನಾ ಸಂಕಷ್ಟದ ನಡುವೆಯೂ ಹಾಲಿನ ಸಂಗ್ರಹ ಮಾಡುವಲ್ಲಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸೇವೆ ಅನನ್ಯವಾದುದು. ಸಂಸ್ಥೆ ಸಿಬ್ಬಂದಿ ಸುರಕ್ಷತೆಗಾಗಿ ಕೈಗವುಸು, ಮಾಸ್ಕ್, ಪೇಸ್ ಮಾಸ್ಕ್ ವಿತರಿಸಲಾಗುತ್ತಿದೆ. ಸಂಘದ ಸದಸ್ಯರು ಕೊರೊನಾದಿಂದ ಮೃತಪಟ್ಟರೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಜಿಲ್ಲೆಯಲ್ಲಿ 100 ಮಂದಿ ಸದಸ್ಯರು ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಕೊರೊನಾ ಸಂದರ್ಭದಲ್ಲಿ 5 ವಿಧದ ಹಾಲನ್ನು ಮದರ್ ಡೈರಿಯಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಹರಿಶಿನ, ಶುಂಠಿ, ಏಲಕ್ಕಿ, ಅಶ್ವಗಂಧ ಹಾಗೂ ಕಾಳುಮೆಣಸಿನ ಮಿಶ್ರಣದ ಬಾಟಲಿ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಬಿಸಿ ಅಥವಾ ತಂಪು ಮಾಡಿಯಾದರೂ ಕುಡಿಯಬಹುದಾಗಿದೆ. 100 ರೂ. ಗಳ ಮೌಲ್ಯದ 5 ಬಾಟಲ್ ಹಾಲು ಖರೀದಿಸಿದರೆ ಒಂದು ಬಾಟಲ್ ಉಚಿತವಾಗಿ ನೀಡಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ಮಂಜುನಾಥ್, ದಿವಾಕರ್, ಕಿರಣ್ ಕುಮಾರ್, ಪಶುವೈದ್ಯಾಧಿಕಾರಿಗಳು ಪಾಲ್ಗೊಂಡಿದ್ದರು.
ತುಮುಲ್ ಹೈನುಗಾರರ ಹಿತ ಕಾಯಲಿದೆ: ಸಿ.ವಿ.ಮಹಾಲಿಂಗಯ್ಯ
Get real time updates directly on you device, subscribe now.
Next Post
Comments are closed.