ಶಾಸಕ ಜ್ಯೋತಿಗಣೇಶ್ ರಿಂದ ಜೆ.ಸಿ.ರಸ್ತೆ ಪರಿಶೀಲನೆ

395

Get real time updates directly on you device, subscribe now.

ತುಮಕೂರು: ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ನಗರದ ಜೆ.ಸಿ.ರಸ್ತೆ ಶಾಶ್ವತ ಕಾಂಕ್ರಿಟ್‌ ರಸ್ತೆಯಾಗಿ ಅಭಿವೃದ್ಧಿಯಾಗುತ್ತಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕರು, ಈ ರಸ್ತೆ ಮಾರುಕಟ್ಟೆ ಮಧ್ಯ ಭಾಗದಲ್ಲಿರುವುದರಿಂದ ಮಂಡಿಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಈ ರಸ್ತೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಶಾಶ್ವತವಾಗಿ ಇರುವಂತೆ ಕಾಂಕ್ರಿಟ್ ರಸ್ತೆಯನ್ನಾಗಿ ಮಾಡಲಾಗುತ್ತಿದೆ. ನಗರದ ಅಶೋಕ ರಸ್ತೆ ಹೊರತು ಪಡಿಸಿದರೆ ಇದು ಎರಡನೇ ಕಾಂಕ್ರಿಟ್‌ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಜೆ.ಸಿ.ರಸ್ತೆ ತುಂಬಾ ದೊಡ್ಡ ರಸ್ತೆಯಾಗಿದೆ, ಎರಡೂ ಕಡೆ ಏಳೂವರೆ ಮೀಟರ್‌ ಇರುವ ಈ ರಸ್ತೆ ಸೇರಿದರೆ 1.5 ಕಿ.ಮೀ. ರಸ್ತೆ ಇದಾಗಿದ್ದು, ಜೊತೆಗೆ ಇದಕ್ಕೆ ಹೊಂದಿಕೊಂಡಂತಿರುವ 5 ಕ್ಕಿಂತ ಹೆಚ್ಚು ಮೀಟರ್‌ ಶೋಲ್ಡರ್‌ ಬರಲಿದೆ. ಈ ನಿಟ್ಟಿನಲ್ಲಿ ಕಾಂಕ್ರಿಟ್‌ ರಸ್ತೆಯನ್ನಾಗಿ ಮಾಡಬೇಕೆಂದು ತೀರ್ಮಾನಿಸಿ ಲಾಕ್ ಡೌನ್ ನಲ್ಲಿ ಕಾಮಗಾರಿ ಆರಂಭಿಸಿರುವುದು ನಮಗೆ ಅನುಕೂಲವಾಗಿದೆ ಎಂದರು.
ಆದಷ್ಟು ಬೇಗ ಕಾಮಗಾರಿ ಮುಗಿಸಬೇಕೆಂದು ದೊಡ್ಡ ಯಂತ್ರಗಳನ್ನು ಬಳಸಿ ಕೇವಲ ಮೂರು ದಿನಗಳಲ್ಲಿ ಸ್ಟ್ರೆಚ್‌ ಹಾಕಿದ್ದಾರೆ. ಉಳಿದ ಸ್ಟ್ರೆಚ್ ನ್ನು ಎರಡ್ಮೂರು ದಿನಗಳಲ್ಲಿ ಮುಗಿಸುತ್ತಾರೆ. ಉಳಿದ ಶೋಲ್ಡರ್‌ ಕೆಲಸಕ್ಕೆ ಒಂದು ತಿಂಗಳು ಸಮಯಾವಕಾಶ ಬೇಕಾಗುತ್ತದೆ. ಅಲ್ಲಿಯವರೆಗೂ ನಾಗರಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಸ್ಮಾರ್ಟ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇಂಜಿನಿಯರ್ ಗಳು ಇಲ್ಲಿರುವ ವರ್ತಕರ ಜೊತೆ ಮೂರ್ನಾಲ್ಕು ಸಭೆಗಳನ್ನು ನಡೆಸಿ ಎಂತಹ ರಸ್ತೆ ಬೇಕೆಂದು ಕೇಳಿದಾಗ ವರ್ತಕರು ನಮಗೆ ಶಾಶ್ವತವಾದ ರಸ್ತೆಯನ್ನಾಗಿ ಮಾಡಿ ಎಂಬ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಕಾಂಕ್ರಿಟ್‌ ರಸ್ತೆಯನ್ನಾಗಿ ಮಾಡಲು ತೀರ್ಮಾನಿಸಿ, ಕಾಂಕ್ರಿಟ್‌ ರಸ್ತೆ ಮಾಡಲು ಕಾಮಗಾರಿ ಆರಂಭಿಸಿದ್ದಾರೆ ಎಂದು ಹೇಳಿದರು.
ಇನ್ನೊಂದು ವಾರದೊಳಗೆ ಈ ರಸ್ತೆಗೆ ಕಾಂಕ್ರಿಟ್‌ ಹಾಕುವ ಕೆಲಸ ಮುಗಿಯಲಿದ್ದು, ರಸ್ತೆಯ ಕ್ಯೂರಿಂಗ್‌ ಮತ್ತು ಶೋಲ್ಡರ್‌ ಕೆಲಸ ಮುಗಿಯಲು ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಅಲ್ಲಿಯವರೆಗೂ ಇಲ್ಲಿಯ ನಾಗರಿಕರು, ವರ್ತಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳಾದ ಸಿ.ಇ.ಪಣಿರಾಜು, ನಾಗೇಂದ್ರಪ್ಪ, ಚನ್ನವೀರಯ್ಯ, ಸಿದ್ದರಾಜು, ಶಿವಕುಮಾರ್‌ ಮುಂತಾದವರು ಇದ್ದರು.

Get real time updates directly on you device, subscribe now.

Comments are closed.

error: Content is protected !!