ಚಿಕ್ಕನಾಯಕನಹಳ್ಳಿ: ತಂದೆಯ ಪೋಷಣೆ, ತಾಯಿಯ ಆರೈಕೆಯಲ್ಲಿ ಬಾಲ್ಯವನ್ನು ಸಂತೋಷದಿಂದ ಅನುಭವಿಸುತ್ತಿದ್ದ ಅದೆಷ್ಟೋ ಮಕ್ಕಳನ್ನು ಕ್ರೂರಿ ಕೊರೊನಾ ಅನಾಥರನ್ನಾಗಿ ಮಾಡಿಬಿಟ್ಟಿದೆ. ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಚಿಂತೆಗಳನ್ನು ತಂದೊಡ್ಡಿದೆ, ಶಿಕ್ಷಣ ಪಡೆಯಬೇಕೊ, ಕೊರೊನಾ ನೀಡಿರುವ ಶಿಕ್ಷೆ ಅನುಭವಿಸಬೇಕೊ ಎಂಬ ನೋವು ಮಕ್ಕಳಲ್ಲಿ ಕಾಡುತ್ತಿದೆ.
ಕೊರೊನಾ ಲಾಕ್ ಡೌನ್ ರಜೆಯಲ್ಲಿ ಖುಷಿ ಖುಷಿಯಾಗಿ ಆಟವಾಡಿಕೊಂಡು ಮನೆಯಲ್ಲಿ ಕಾಲ ಕಳೆಯುತ್ತಿದ್ದ ಮಕ್ಕಳಿಗೆ ಕೊರೊನಾ ಆಘಾತ ನೀಡಿದೆ, ಯೋಗಕ್ಷೇಮ ವಿಚಾರಿಸುತ್ತಿದ್ದ, ಇಷ್ಟವಾದ ವಸ್ತು ಕೊಡಿಸುತ್ತಿದ್ದ, ರುಚಿ ರುಚಿಯಾದ ಊಟ ಬಡಿಸುತ್ತಿದ್ದ, ಅತ್ತಾಗ ಕಣ್ಣೀರು ಒರೆಸುತ್ತಿದ್ದ ಪೋಷಕರೇ ಕಣ್ಮುಂದೆ ಇಲ್ಲವಾದರೆ ಪ್ರಪಂಚದ ಅರಿವೇ ಇಲ್ಲದ ಮಕ್ಕಳ ಗತಿ ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕ ಪೋಷಕರ ಆಶ್ರಯದಲ್ಲಿ ಬೆಳೆಯುವ ಮಕ್ಕಳಿಗೆ ಭದ್ರತೆ ಸಿಗುವುದೆ? ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿ ಇಂತಹ ಮಕ್ಕಳಿಗೆ ಆಸರೆಯಾಗುವ ಅನಿವಾರ್ಯ ಉಂಟಾಗಿದೆ.
ತಾಲೂಕು ಆಡಳಿತ ನೀಡಿರುವ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಕೋವಿಡ್‌ನಿಂದ ಇದುವರೆಗೂ 24 ಜನ ಪುರುಷರು, 17 ಜನ ಮಹಿಳೆಯರು ಒಟ್ಟು 41 ಜನ ಮೃತಪಟ್ಟಿದ್ದು. 1.5 ವರ್ಷ, 5 ವರ್ಷ, 8 ವರ್ಷ, 9 ವರ್ಷ, 11 ಹಾಗೂ 12 ವರ್ಷ ವಯಸ್ಸಿನ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ತಾಲೂಕಿನಲ್ಲಿ ಸುಮಾರು 15ಕ್ಕಿಂತ ಹೆಚ್ಚು ಮಕ್ಕಳು ಕೆಲವರು ತಂದೆ ಇನ್ನೂ ಕೆಲವರು ತಾಯಿಯನ್ನು ಕಳೆದುಕೊಂಡು ಏಕ ಪೋಷಕರ ಆಶ್ರಯದಲ್ಲಿ ಬದುಕುವ ಅನಿರ್ವಾತೆ ಉಂಟಾಗಿದೆ.
ನೆರವು ಅಗತ್ಯವಿದೆ: ಸರ್ಕಾರ ಪ್ರಸ್ತುತ ತಂದೆ ತಾಯಿ ಇಬ್ಬರನ್ನು ಕಳದುಕೊಂಡ ಮಕ್ಕಳಿಗೆ ಮಾತ್ರ ಬಾಲ್ಯ ಸೇವಾ ಯೋಜನೆ ರೂಪಿಸಿದೆ, ಆದರೆ ಕೋವಿಡ್‌ನಿಂದ ಏಕ ಪೋಷಕರನ್ನು ಹೊಂದಿರುವ ಮಕ್ಕಳಿಗೆ ಸರ್ಕಾರದ ಸೌಲಭ್ಯ ಸಿಗದಂತಾಗಿದೆ. ಕೋವಿಡ್ ನಿಂದ ತೀವ್ರ ತೊಂದರೆಯಾಗಿದ್ದು ಏಕ ಪೋಷಕರು ಕಳೆದುಕೊಂಡ ಮಕ್ಕಳಿಗೂ ಸಹ ನೆರವು ಸಿಗಬೇಕು.
ತಾಲೂಕಿನಲ್ಲಿ ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಅಗತ್ಯ ಪೌಷ್ಠಿಕ ಆಹಾರ ನೀಡಲಾಗುತ್ತಿದ್ದು, ಅಂಗನವಾಡಿ ಕಾರ್ಯಕರ್ತರ ಮೂಲಕ ಮಕ್ಕಳಿಗೆ ಧೈರ್ಯ ತುಂಬಲಾಗುತ್ತಿದೆ. ಮಕ್ಕಳ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಕ್ಕಳ ನೆರವಿಗೆ ಇದ್ದು, ಅವರ ವಿದ್ಯಾಭ್ಯಾಸಕ್ಕು ಸಹ ನೆರವು ನೀಡುತ್ತದೆ ಎಂದು ತಾಲೂಕು ಮಕ್ಕಳ ರಕ್ಷಣಾಧಿಕಾರಿ ಹೊನ್ನಪ್ಪ ತಿಳಿಸಿದ್ದಾರೆ.
Comments are closed.