ದಲಿತ ಕುಟುಂಬಕ್ಕೆ ರಕ್ಷಣೆ ನೀಡುವಲ್ಲಿ ಪೊಲೀಸ್‌ ನಿರ್ಲಕ್ಷ್ಯ

580

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ಹಂಚಿಹಳ್ಳಿ ಗ್ರಾಮದಲ್ಲಿ ಸವರ್ಣೀಯ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ದಲಿತ ಕುಟುಂಬವೊಂದರ ಮೇಲೆ ಆಗಾಗ್ಗೆ ಹಲ್ಲೆ ನಡೆಸುತ್ತಿದ್ದು, ಈ ಬಗ್ಗೆ ದೂರು ನೀಡಿದರೂ ಆತನ ಬಗ್ಗೆ ಕ್ರಮ ವಹಿಸದೆ ತುರುವೇಕೆರೆ ಪಿ ಎಸ್ ಐ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಡಿ ಎಸ್ ಎಸ್‌ ಸಂಚಾಲಕ ದಂಡಿನಶಿವರ ಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ.
ಪಟ್ಟಣದಲ್ಲಿ ಮಾತನಾಡಿ, ತಾಲೂಕಿನ ಹಂಚಿಹಳ್ಳಿ ಗ್ರಾಮದ ವಾಸಿ ಹುಚ್ಚಯ್ಯನ ಕುಟುಂಬ ಸರ್ವೇನಂ 135 ರಲ್ಲಿ ಸುಮಾರು 30 ವರ್ಷಗಳಿಂದ ಅನುಭವದಲ್ಲಿದ್ದಾರೆ. ಪಕ್ಕದಲ್ಲೇ ಜಮೀನು ಹೊಂದಿರುವ ಬೆಂಗಳೂರು ಮೂಲದ ಕಿರಣ್ ಕುಮಾರ್‌ ಎಂಬುವರು ದಲಿತ ಕುಟುಂಬವನ್ನು ಒಕ್ಕಲೆಬ್ಬಿಸಿ ಭೂಮಿ ಕಬಳಿಸಲು ದಲಿತ ಕುಟುಂಬದ ಮೇಲೆ ಆಗಾಗ್ಗೆ ಹಲ್ಲೆ ನಡೆಸುತ್ತಾ ಬಂದಿದ್ದಾರೆ. ಈ ಬಗ್ಗೆ ತುರುವೇಕೆರೆ ಪೊಲೀಸರಿಗೆ ದೂರು ನೀಡಿದರೆ ಆತನನ್ನು ಕರೆದು ವಿಚಾರಿಸುವ ಗೋಜಿಗೆ ಹೋಗುತ್ತಿಲ್ಲ, ಬದಲಿಗೆ ದಲಿತ ಕುಟುಂಬದ ಧ್ವನಿ ದಮನ ಮಾಡುವ ನೀತಿ ಅನುಸರಿಸುತ್ತಿದ್ದಾರೆ. ದಲಿತ ಮೇಲೆ ಹಲ್ಲೆ ನಡೆಸುವ ರಕ್ಷಣೆಗೆ ನಿಂತ ತುರುವೇಕೆರೆ ಪೊಲೀಸರ ನಡೆ ಅನುಮಾನಸ್ಪದವಾಗಿದೆ ಎಂದರು.
ದಲಿತ ಕುಟುಂಬವು ತಮ್ಮ ಜಮೀನಿನಲ್ಲಿದ್ದ ತಗಡಿನ ಶೀಟ್ ನ ಮನೆಗೆ ಹಾನಿ ಮಾಡಿರುತ್ತಾರೆ, ಈ ಬಗ್ಗೆ ಇದೇ ತಿಂಗಳ 15 ರಂದು ರಕ್ಷಣೆ ನೀಡುವಂತೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಆದರೂ ಸಹ ಆರೋಪಿಯನ್ನು ಠಾಣೆಗೆ ಕರೆದು ವಿಚಾರಣೆ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಈ ಬಗ್ಗೆ ಕುಣಿಗಲ್‌ ಡಿವೈಎಸ್‌ಪಿಯವರ ಬಳಿ ತಮ್ಮ ಅಳಲು ತೋಡಿಕೊಂಡರೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮಾತನಾಡುತ್ತಿದ್ದಾರೆ. ಜೀವ ಭಯದಲ್ಲಿರುವ ದಲಿತ ಕುಟುಂಬದ ರಕ್ಷಣೆ ಮಾಡಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಹಾಗಾದರೆ ದಲಿತರ ಹಕ್ಕುಗಳನ್ನು ಸಂರಕ್ಷಿಸುವವರು ಯಾರು ಎಂದು ಪ್ರಶ್ನಿಸಿದರು.
ತಾಲೂಕು ಕಂದಾಯ ಇಲಾಖೆಗೆ ಬಗರ್‌ ಹುಕುಂ ಸಾಗುವಳಿ ಮಂಜೂರಾತಿಗೆ ದಲಿತ ಕುಟುಂಬ 1999 ರಲ್ಲಿ ಅರ್ಜಿ ಸಲ್ಲಿಸಿತ್ತು, ಅಂದಿನ ಶಾಸಕರಾದ ಎಂ.ಟಿ.ಕೃಷ್ಣಪ್ಪನವರು ಭೂ ಮಂಜೂರಾತಿ ನೀಡಲು ಕಡತ ಮಂಡಿಸುವಂತೆ ಸಹಿ ಹಾಕಿದ್ದರು. ಇದಾದ ಕೆಲವೇ ದಿನಗಳಲ್ಲಿ ಕಂದಾಯ ಇಲಾಖೆಯಿಂದ ಶಾಸಕರು ಸಹಿ ಹಾಕಿದ್ದ ಕಡತವೇ ಮಾಯವಾಗಿದೆ ಇದು ತಾಲೂಕು ಕಂದಾಯ ಇಲಾಖೆಯ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗುವ ಮೂಲಕ ತಪ್ಪಿಸ್ಥರೆಲ್ಲರಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಜೀವ ಭಯದಿಂದ ಹಂಚಿಹಳ್ಳಿಯಲ್ಲಿ ನಿತ್ಯ ಬದುಕು ಸಾಗುತ್ತಿರುವ ದಲಿತ ಕುಟುಂಬಕ್ಕೆ ಕೂಡಲೇ ಪೊಲೀಸ್‌ ರಕ್ಷಣೆ ಒದಗಿಸಬೇಕು, ಆರೋಪಿಯನ್ನು ಕರೆಸಿ ವಿಚಾರಣೆ ನಡೆಸಬೇಕು, ವಿಫಲವಾದಲ್ಲಿ ಹಂಚಿಹಳ್ಳಿ ಗ್ರಾಮದ ದಲಿತ ಕುಟುಂಬದ ಅಹವಾಲನ್ನು ಆಲಿಸದೇ ಸವರ್ಣಿಯರ ಪರ ವಕಾಲತ್ತು ವಹಿಸುತ್ತಿರುವ ಪೊಲೀಸ್‌ ಹಾಗೂ ಕಂದಾಯ ಇಲಾಖೆ ವಿರುದ್ಧ ಶೀಘ್ರದಲ್ಲಿ ಜಿಲ್ಲಾ ದಸಂಸ ವತಿಯಿಂದ ಬೃಹತ್‌ ಮಟ್ಟದ ತಮಟೆ ಚಳವಳಿ ನಡೆಸಲಾಗುವುದು. ಅಗತ್ಯ ಬಿದ್ದರೇ ಎಸ್‌ಪಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಸಂಸ ಪದಾಧಿಕಾರಿಗಳಾದ ಮಲ್ಲೂರು ತಿಮ್ಮೇಶ್‌, ಬಡಾವಣೆ ಶಿವರಾಜ್‌, ಟಿ.ಬಿ.ಕ್ರಾಸ್‌ ಮಂಜು, ಪುಟ್ಟರಾಜ್‌, ಮುಳಕಟ್ಟಯ್ಯ, ಜಕ್ಕನಹಳ್ಳಿರವಿ ಹಾಗೂ ಹುಚ್ಚಯ್ಯ ಕುಟುಂಬದ ಸದಸ್ಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!