ತುಮಕೂರು: ಸಾಮಾಜಿಕ ಉದ್ಯಮ ಶೀಲತಾ ಯೋಜನೆಯ ಸಮೃದ್ಧಿ ಉಪ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕ ಯುವತಿಯರಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಿಂದ ಜಿಲ್ಲೆಯಲ್ಲಿ 8 ಜನ ಫಲಾನುಭವಿಗಳು ಹಾಗೂ ಆದಿ ಜಾಂಬವ ನಿಗಮದಿಂದ ಇಬ್ಬರು ಫಲಾನುಭವಿಗಳು ಆಯ್ಕೆಯಾಗಿದ್ದು, ಶುಕ್ರವಾರ ತುಮಕೂರು ಹಾಲು ಒಕ್ಕೂಟದ ಸಹಯೋಗದೊಂದಿಗೆ 4 ಜನ ಫಲಾನುಭವಿಗಳ ನಂದಿನಿ ಕ್ಷೀರ ಮಳಿಗೆಗಳನ್ನು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಉದ್ಘಾಟಿಸಿದರು.
ನಗರದ ಕುಣಿಗಲ್ ರಸ್ತೆಯ ಮರಳೂರಿನಲ್ಲಿ ನಾಲ್ಕನೇ ನಂದಿನಿ ಕ್ಷೀರ ಮಳಿಗೆ ಉದ್ಘಾಟಿಸಿ ಮಾತನಾಡಿದ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ಸರ್ಕಾರವು ಪ್ರತಿ ನಂದಿನಿ ಕ್ಷೀರಮಳಿಗೆಗೆ 5 ಲಕ್ಷ ರೂ. ಅನುದಾನ ನೀಡಿದ್ದು, ತುಮಕೂರು ಹಾಲು ಒಕ್ಕೂಟದ ವತಿಯಿಂದ ಸದರಿ ಕ್ಷೀರಮಳಿಗೆಗೆ ಬ್ರಾಂಡಿಂಗ್ ಮಾಡಿಸಿ, ಡೀಪ್ರೀಜರ್ ಮತ್ತು ವಿಸಿಕೂಲರ್ ಗಳನ್ನು ವಿತರಿಸಲಾಗಿದೆ ಹಾಗೂ ಒಕ್ಕೂಟದ ವತಿಯಿಂದ ಕನ್ಸೇಷನ್ ದಾರಿಕೆಯನ್ನು ನೀಡಿ, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಸರಬರಾಜು ಮಾಡಲಾಗುತ್ತಿದೆ. ಈ ಅವಕಾಶವನ್ನು ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಸ್ತುತ ಉದ್ಘಾಟನೆಗೊಂಡಿರುವ ನಾಲ್ಕು ನಂದಿನಿ ಕ್ಷೀರ ಮಳಿಗೆಗಳಿಂದ ಎಲ್ಲೋ ಒಂದು ಕಡೆ ನಂದಿನಿ ಉತ್ಪನ್ನಗಳು ಹೆಚ್ಚಿನದಾಗಿ ಮಾರಾಟಕ್ಕೆ ಅವಕಾಶ ಕಲ್ಪಿಸಿದಂತಾಗಿದೆ. ಜೊತೆಗೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಆರ್ಥಿಕವಾಗಿ ಅಭಿವೃದ್ಧಿಯಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ಮತ್ತು ಒಕ್ಕೂಟದ ಸಹಯೋಗದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ಮಾಡುತ್ತಿದ್ದೇವೆ ಎಂದರು.
ವ್ಯಾಪಕವಾಗಿ ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಮಹತ್ವ ಬರಬೇಕು, ಅಲ್ಲದೇ ನಂದಿನಿ ಉತ್ಪನ್ನಗಳು ಪರಿಶುದ್ಧತೆಗೆ ಹೆಸರುವಾಸಿಯಾಗಿರುವುದರಿಂದ ಇದನ್ನೇ ಹೆಚ್ಚು ಬಳಸಿ ಎಂದು ಹೇಳಿದರು.
ತುಮಕೂರು ಹಾಲು ಒಕ್ಕೂಟದ ಇತಿಹಾಸದಲ್ಲಿ ಇಂದು ಸುಮಾರು 9 ಲಕ್ಷ ಮೂರು ಸಾವಿರ ಲೀಟರ್ ಹಾಲು ಶೇಖರಣೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ತಿಂಗಳಿಗೆ 7 ಲಕ್ಷ 40 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತಿತ್ತು. ಕೋವಿಡ್- 19 ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿರುವುದರಿಂದ ಉದ್ಯೋಗ ಹರಸಿ ವಲಸೆ ಹೋಗಿದ್ದವರು ತಮ್ಮ ಊರುಗಳಿಗೆ ಬಂದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ ಪರಿಣಾಮ ಹಾಲಿನ ಶೇಖರಣೆ ಹೆಚ್ಚಾಗಿದೆ ಎಂದು ತಿಳಿಸಿದರು.
ಹಾಲು ಶೇಖರಣೆ ಹೆಚ್ಚಾಗಿರುವುದು ಒಂದೆಡೆಯಾದರೆ ಮಾರುಕಟ್ಟೆ ವ್ಯವಸ್ಥೆಯೂ ಸ್ವಲ್ಪ ಕುಗ್ಗಿದೆ. ಲಿಕ್ವಿಡ್ ಮಿಲ್ಕ್ 4.25 ಲಕ್ಷ, ಬಲ್ಕ್ ಸೇಲ್ಸ್ 1 ಲಕ್ಷ ಮತ್ತು 4 ಲಕ್ಷ ಕನ್ವರ್ಷನ್ ಗೆ ಹೋಗಿ ಒಂದು ಒಕ್ಕೂಟದಲ್ಲಿ 2300 ಮೆಟ್ರಿಕ್ ಟನ್ ಹಾಲಿನ ಪೌಡರ್, 1300 ಮೆಟ್ರಿಕ್ ಟನ್ ಬೆಣ್ಣೆ ದಾಸ್ತಾನು ಉಳಿದಿದೆ. ಇದರ ಒಟ್ಟು ಮೌಲ್ಯ ಸುಮಾರು 85 ಕೋಟಿ ರೂ.ನಷ್ಟು ಉತ್ಪನ್ನ ದಾಸ್ತಾನು ಹಾಗೇ ಉಳಿದಿದೆ. ಆದರೂ ಸಹ ರೈತರಿಂದ ಎಷ್ಟೇ ಹಾಲು ಬಂದರೂ ಸ್ವೀಕರಣೆ ಮಾಡುತ್ತಿದ್ದೇವೆ. ರೈತರಿಗೆ ಯಾವುದೇ ರೀತಿ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಅಷ್ಟೂ ಹಾಲನ್ನು ಸ್ವೀಕರಣೆ ಮಾಡಿ, ಸಂಸ್ಕರಣೆ ಮಾಡಿ ಮಾರುಕಟ್ಟೆ ಒದಗಿಸಿದ್ದೇವೆ. ಆದರೂ ಎಲ್ಲೋ ಒಂದು ಕಡೆ ಕನ್ವರ್ಷನ್ ಗೆ ಹೆಚ್ಚು ಹೋಗಿ ಒಕ್ಕೂಟಕ್ಕೆ ಕಳೆದ ಎರಡು ತಿಂಗಳಲ್ಲಿ ಸುಮಾರು 19 ಕೋಟಿ ರೂ. ನಷ್ಟ ಆಗಿದೆ ಎಂದು ಹೇಳಿದರು.
ಹಾಗಾಗಿ ರೈತರಿಗೆ ಕೊಡುವ ಹಾಲಿನ ದರವನ್ನು 2 ರೂ. ಕಡಿತಗೊಳಿಸಿದ್ದೇವೆ. ಜೊತೆಗೆ ರೈತರಿಗೆ ಸಕಾಲಕ್ಕೆ ಬಟವಾಡೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆಗೆ ಎನ್‌ಡಿಡಿಬಿ ಸಹಕಾರದೊಂದಿಗೆ ಶೇ.5.7 ರ ಬಡ್ಡಿ ದರದಲ್ಲಿ ಸುಮಾರು 97 ಕೋಟಿ ರೂ. ಸಾಲ ಪಡೆದು ರೈತರಿಗೆ ಸಕಾಲಕ್ಕೆ ಬಟವಾಡೆ ಮಾಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಮಹತ್ವ ಬರಬೇಕು ಎನ್ನುವ ನಿಟ್ಟಿನಲ್ಲಿ ಇಂತಹ ಯಶಸ್ವಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಮರಳೂರಿನ ನಂದಿನಿ ಕ್ಷೀರ ಮಳಿಗೆ ಉದ್ಘಾಟನೆಗೂ ಮುನ್ನ ಸರಸ್ವತಿ ಪುರಂ 1ನೇ ಕ್ರಾಸ್ ಮತ್ತು ಸಪ್ತಗಿರಿ ದಕ್ಷಿಣದ ಟಿ.ಪಿ.ಕೆ.ರಸ್ತೆ ಹಾಗೂ ಬಿ.ಹೆಚ್.ರಸ್ತೆಯ ಮಿರ್ಜಿ ಪೆಟ್ರೋಲ್ ಬಂಕ್ ಹತ್ತಿರ ನೂತನವಾಗಿ ಆರಂಭಗೊಂಡ ನಂದಿನಿ ಪಾರ್ಲರ್‌ಗಳನ್ನು ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಾಲು ಒಕ್ಕೂಟದ ತುಮಕೂರು ತಾಲ್ಲೂಕಿನ ನಿರ್ದೇಶಕ ಹೆಚ್.ಕೆ.ರೇಣುಕಾಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಡಾ.ಸುಬ್ರಾಯ ಭಟ್, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಎನ್.ಸಿ.ಅಶೋಕ್, ಮರಳೂರು ನಂದಿನಿ ಪಾರ್ಲರ್ ಮಾಲೀಕ ಚಂದ್ರಶೇಖರ್ ಇದ್ದರು.
ನಂದಿನಿ ಉತ್ಪನ್ನ ಪರಿಶುದ್ಧತೆಗೆ ಹೆಸರುವಾಸಿ
Get real time updates directly on you device, subscribe now.
Prev Post
Comments are closed.