ತುಮಕೂರು: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚನೆ ನೀಡಿದ್ದಾರೆ.
ಮಾರ್ಗಸೂಚಿಯನ್ವಯ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವಾರಾಂತ್ಯದ ಕರ್ಫೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅಗತ್ಯ ಮತ್ತು ತುರ್ತು ಚಟುವಟಿಕೆ ಹೊರತುಪಡಿಸಿ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆ, ಪಾಲಿಕೆ, ನಿಗಮಗಳು ಸೇರಿದಂತೆ ತುರ್ತು, ಅಗತ್ಯ ಸೇವೆ ಒದಗಿಸುವ ಇಲಾಖೆ, ಕಚೇರಿಗಳು ಕಾರ್ಯ ನಿರ್ವಹಿಸಲು ಅನುಮತಿಸಲಾಗಿದೆ.
ಕೋವಿಡ್ ಗೆ ಸಂಬಂಧಿಸಿದ ಅಗತ್ಯ ಸೇವೆ ಮತ್ತು ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿ ಓಡಾಟಕ್ಕೆ ನಿರ್ಬಂಧ ಇರುವುದಿಲ್ಲ. ತುರ್ತು ಮತ್ತು ಅಗತ್ಯ ಸೇವೆಗಾಗಿ 24/7 ಕಾರ್ಯಾಚರಣೆ ಮಾಡುವ ಎಲ್ಲಾ ಕೈಗಾರಿಕೆಗಳು, ಕಂಪನಿಗಳು, ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು.ಇಂತಹ ಸಂಸ್ಥೆಗಳಿಂದ ನೀಡಲಾದ ಗುರುತಿನ ಚೀಟಿ ಹೊಂದಿರುವ ನೌಕರರ ಚಲನೆಗೆ ಅನುಮತಿಸಲಾಗುವುದು. ಆದರೂ ಸಂಬಂಧಿಸಿದ ಕೈಗಾರಿಕೆ, ಸಂಸ್ಥೆಗಳು ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಪ್ರೋತ್ಸಾಹಿಸಬೇಕು.
ಅಧಿಕೃತ ಗುರುತಿನ ಚೀಟಿ ಹೊಂದಿರುವ ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರ ನೌಕರರು ಮತ್ತು ವಾಹನಗಳ ಓಡಾಟಕ್ಕೂ ಅನುಮತಿ ನೀಡಲಾಗುವುದು.
ಐಟಿ ಮತ್ತು ಐಟಿಇಎಸ್ ಕಂಪನಿಗಳು, ಸಂಸ್ಥೆಗಳ ಅಗತ್ಯವಿರುವ ಸಿಬ್ಬಂದಿ ಹಾಗೂ ನೌಕರರು ಮಾತ್ರ ಕಚೇರಿಯಿಂದ ಕೆಲಸ ಮಾಡತಕ್ಕದ್ದು. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ.
ಕನಿಷ್ಠ ಪುರಾವೆ ಹೊಂದಿರುವ ರೋಗಿಗಳು ಮತ್ತು ಅವರ ಪರಿಚಾರಕರು, ತುರ್ತು ಅಗತ್ಯವಿರುವ ವ್ಯಕ್ತಿಗಳು, ವ್ಯಾಕ್ಸಿನೇಷನ್ ತೆಗೆದುಕೊಳ್ಳುವವರಿಗೆ ಅನುಮತಿಸಲಾಗುವುದು.
ಆಹಾರ, ದಿನಸಿ, ಹಣ್ಣು, ತರಕಾರಿ, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್, ಪ್ರಾಣಿಗಳ ಮೇವು ಮಾರಾಟ ಮಾಡುವ ಅಂಗಡಿಗಳಿಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯ ನಿರ್ವಹಿಸಲು ಅವಕಾಶವಿರುತ್ತದೆ.
ರಸ್ತೆ ಬದಿ ಮಾರಾಟಗಾರರು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿ, ಸ್ವತಂತ್ರ ಮದ್ಯದಂಗಡಿ ಮತ್ತು ಮಳಿಗೆಗಳನ್ನು ತೆರೆದು ಮಾರಾಟ ಮಾಡಲು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶವಿದೆ. ಮನೆಯ ಹೊರಗಿನ ವ್ಯಕ್ತಿಗಳ ಚಲನೆ ಕಡಿಮೆ ಮಾಡುವ ದೃಷ್ಟಿಯಿಂದ ಎಲ್ಲಾ ವಸ್ತುಗಳ ಮನೆ ವಿತರಣೆಯನ್ನು 24/7 ಪ್ರೋತ್ಸಾಹಿಸಲಾಗುತ್ತದೆ.
ರೆಸ್ಟೋರೆಂಟ್ ಮತ್ತು ಹೋಟೆಲ್ ಗಳಿಂದ ತಿನಿಸುಗಳನ್ನು ತೆಗೆದುಕೊಂಡು ಹೋಗಲು ಮತ್ತು ಮನೆಗೆ ತಲುಪಿಸಲು ಮಾತ್ರ ಅನುಮತಿಸಲಾಗುತ್ತದೆ.
ಪ್ರಯಾಣಿಕರ ಪ್ರಯಾಣಕ್ಕೆ ಅನುವಾಗುವಂತೆ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಬಸ್ ಟರ್ಮಿನಲ್, ನಿಲ್ದಾಣಗಳಿಗೆ ಹೋಗಲು, ಬರಲು ಸಾರಿಗೆ, ಖಾಸಗಿ ವಾಹನ, ಟ್ಯಾಕ್ಸಿಗಳಿಗೆ ಅನುಮತಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ದಾಖಲೆ, ಟಿಕೆಟ್‌ನ್ನು ಕಟ್ಟುನಿಟ್ಟಾಗಿ ಹಾಜರುಪಡಿಸಬೇಕು.
ಈಗಾಗಲೇ ನಿಗದಿಯಾಗಿರುವ ವಿವಾಹಗಳನ್ನು ರಾಜ್ಯ ಸರ್ಕಾರ ಹೊರಡಿಸಿದ ಕೋವಿಡ್ 19 ಸೂಕ್ತ ನಡವಳಿಕೆ ಮತ್ತು ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮ ಮನೆಯಲ್ಲಿಯೇ 40 ಜನರವರೆಗಿನ ನಿಕಟ ಕುಟುಂಬ ಸಂಬಂಧಿಗಳು ಮಾತ್ರ ಒಳಗೊಂಡಂತೆ ನೆರವೇರಿಸಬೇಕು. ಶವಸಂಸ್ಕಾರ, ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರೊಂದಿಗೆ ಮಾತ್ರ ನೆರವೇರಿಸಲು ಅನುಮತಿಸಲಾಗುವುದು ಎಂದು ನಿರ್ದೇಶನ ನೀಡಿದ್ದಾರೆ.
ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Get real time updates directly on you device, subscribe now.
Prev Post
Next Post
Comments are closed.