ಕೆರೆಗಳ ಗಡಿ ಗುರುತಿಸಿ ಸಂರಕ್ಷಿಸಿ: ವೈ.ಎಸ್‌. ಪಾಟೀಲ

220

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳ ಗಡಿ ಗುರುತಿಸಿ ಒತ್ತುವರಿ ಕಂಡುಬಂದಲ್ಲಿ ತೆರವುಗೊಳಿಸಿ ಕೆರೆಗಳ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜರುಗಿದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಮಟ್ಟದ ಕಾರ್ಯನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 2,061 ಕೆರೆಗಳನ್ನು ಗುರುತಿಸಲಾಗಿದ್ದು, ಇದುವರೆಗೂ 404 ಕೆರೆಗಳ ಸರ್ವೆ ಕಾರ್ಯ ನಡೆದಿದೆ. ಅಳತೆಯಾಗಿರುವ 404 ಕೆರೆಗಳ ಪೈಕಿ 293 ಕೆರೆ ಒತ್ತುವರಿಯಾಗಿರುವುದು ಕಂಡುಬಂದಿದ್ದು, ಇವುಗಳಲ್ಲಿ 103 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಉಳಿದ 136 ಕೆರೆಗಳ ಒತ್ತುವರಿ ತೆರವುಗೊಳಿಸುವುದರ ಜೊತೆಗೆ ಬಾಕಿ ಉಳಿದಿರುವ 1,657 ಕೆರೆಗಳ ಅಳತೆ ಕಾರ್ಯ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಆರ್‌ಡಿಪಿಆರ್‌ ಅಡಿ 1522, ಸಣ್ಣ ನೀರಾವರಿ ಇಲಾಖೆಯಡಿ 366, ಕಾವೇರಿ ನಿಗಮದಡಿ 151, ಮಹಾನಗರ ಪಾಲಿಕೆಯಡಿ 8, ನಗರಾಭಿವೃದ್ಧಿ ಅಭಿವೃದ್ಧಿ ಪ್ರಾಧಿಕಾರದ 1, ಅರಣ್ಯ ಇಲಾಖೆ 6, ಸ್ಥಳೀಯ ಸಂಸ್ಥೆ 5, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯಡಿ 2 ಕೆರೆಗಳು ಬರಲಿದ್ದು, ತಮ್ಮ ಅಧೀನದಲ್ಲಿ ಬರುವ ಎಲ್ಲಾ ಕೆರೆಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಸೂಚಿಸಿದರು.
ತಕ್ಷಣವೇ ಕೆರೆಗಳ ಗಡಿ ಗುರುತಿಸಿ ಸಂರಕ್ಷಣೆ ಮಾಡಬೇಕು. ಎಲ್ಲಾ ತಾಲ್ಲೂಕು ತಹಸೀಲ್ದಾರ್ ಗಳು ತಮ್ಮ ತಾಲ್ಲೂಕಿನ ಸರ್ಕಾರಿ ಗೋಮಾಳದಲ್ಲಿನ ಕೆರೆಗಳ ಗಡಿಗಳನ್ನೂ ಗುರುತಿಸುವ ಕಾರ್ಯಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅತಿಕ್ರಮಣವಾಗಿಲ್ಲದ ಕೆರೆಗಳಿಗೆ ಗಡಿ ಗುರುತಿಸುವ ಕಾರ್ಯವನ್ನು ಮೊದಲು ಮಾಡಬೇಕು. ಅದಾದ ತಕ್ಷಣವೇ ಅತಿಕ್ರಮಣಕ್ಕೆ ಒಳಪಟ್ಟ ಕೆರೆಗಳ ಒತ್ತುವರಿ ತೆರವುಗೊಳಿಸಿ ಗಡಿ ಗುರುತಿಸಿ ಸಂರಕ್ಷಣೆ ಮಾಡಬೇಕು, ಒತ್ತುವರಿ ಮಾಡಿದವರ ವಿರುದ್ಧ ನಿಯಮಾನುಸಾರ 192(ಎ) ಅಡಿ ಪ್ರಕರಣ ದಾಖಲಿಸಬಹುದಾಗಿದ್ದು, ಒತ್ತುವರಿ ತೆರವಿನ ವೇಳೆ ಹಾಗೂ ಗಡಿ ಗುರುತಿಸುವ ವೇಳೆ ಪೊಲೀಸ್‌ ಇಲಾಖೆಯಿಂದ ಸೂಕ್ತ ಭದ್ರತೆ ಒದಗಿಸಬೇಕು ಎಂದು ನಿರ್ದೇಶಿಸಿದರು.
ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆಗಳನ್ನು ಗುರುತಿಸಿ, ಸಂರಕ್ಷಣೆ ಮಾಡಬೇಕು. ಗುರುತಿಸಿದ ಗಡಿಗೆ ಕಲ್ಲು ನೆಡಬೇಕು. ಸರ್ವೆ ಸೇರಿದಂತೆ ಕೆರೆಗಳ ಸಂರಕ್ಷಣಾ ಕಾರ್ಯ ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಇದಕ್ಕೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಬೇಕು. ಯಾರ ಮುಲಾಜಿಗೂ ಒಳಗಾಗದೆ ನ್ಯಾಯಾಲಯದ ಸೂಚನೆಯಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಗೆ ಗೈರು ಹಾಜರಾದ ಅಧಿಕಾರಿಗಳು ಇದೇ ರೀತಿ ಸಭೆಗೆ ಗೈರು ಹಾಜರಾದರೆ ನೋಟಿಸ್‌ ನೀಡಲಾಗುವುದು, ಹಾಗಾಗಿ ಅಧಿಕಾರಿಗಳು ಗೈರಾಗದೆ ಸಭೆಗೆ ತಪ್ಪದೆ ಹಾಜರಾಗಬೇಕು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಾಪುರವಾಡ್‌, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್‌, ಭೂ ದಾಖಲೆ ಇಲಾಖೆಯ ಉಪ ನಿರ್ದೇಶಕರಾದ ಸುಜಯ್‌, ಸಣ್ಣ ನೀರಾವರಿ ಇಲಾಖೆ ರವಿ ಸೂರಣ್ಣ, ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಕಾವೇರಿ, ಎತ್ತಿನಹೊಳೆ, ಹೇಮಾವತಿ, ಅರಣ್ಯ ಇಲಾಖೆ ಸೇರಿದಂತೆ ಇತರೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

Get real time updates directly on you device, subscribe now.

Comments are closed.

error: Content is protected !!