ತುರುವೇಕೆರೆ: ಪೆಟ್ರೋಲ್, ಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿ ಶ್ರೀಸಾಮಾನ್ಯ ಹಾಗೂ ರೈತರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿ ಪ್ರಧಾನಿ ಮೋದಿಯವರು ಅಚ್ಚೇದಿನ್ ಆಯೇಗಾ ಎನ್ನುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ವ್ಯಂಗ್ಯವಾಡಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೆಟ್ರೋಲ್ ಲೀಟರ್ ಬೆಲೆಗೆ 102 ರೂ., ಗ್ಯಾಸ್ ಸಿಲಿಂಡರ್ ಬೆಲೆ 955 ರೂ., 600 ರೂ. ಇದ್ದ ಗೊಬ್ಬರದ ಬೆಲೆ 1200 ರೂ. ಆಗಿದೆ. ಈ ಹಿಂದೆ 600 ನೀಡುತ್ತಿದ್ದ ರೈತರು 1200 ರೂ. ದುಪ್ಪಟ್ಟು ಹಣ ಟ್ರಾಕ್ಟರ್ ಗೆ ನೀಡಿ ಕೃಷಿ ಮಾಡುವಂತಾಗಿದೆ. ಈ ಹಿಂದೆ ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಗೊಬ್ಬರಕ್ಕೆ ಸಬ್ಸಿಡಿ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ಧ್ವನಿಯಾಗಿದ್ದರು, ಬಾಯಿ ಬಿಟ್ಟರೇ ಸಾಕು ಮೋದಿಯವರು ಅಚ್ಚೇದಿನ್ ಆಯೇಗಾ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದಾರೆ ಎಂದು ದೂರಿದ ಅವರು ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಿರುವ ಟ್ಯಾಕ್ಸ್ ನ್ನು ಉಭಯ ಸರಕಾರಗಳು ಹಿಂಪಡೆಯಲಿ ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೋವಿಡ್ ಹಿನ್ನಲೆಯಲ್ಲಿ ಶ್ರಮಿಕರಿಗೆ ಮಾಡಿರುವ ವಿಶೇಷ ಪ್ಯಾಕೇಜ್ ಗೆ ಯಾವ ಮಾನದಂಡವೂ ಇಲ್ಲ, ಕೇವಲ 2,000 ರೂ. ನಿಂದ 3,000 ರೂ. ನೀಡುವುದರಿಂದ ಶ್ರಮಿಕ ಕುಟುಂಬಗಳಿಗೆ ಯಾವುದೇ ಪ್ರಯೋಜನವಾಗದು, ಕೋವಿಡ್ ನಿಂದ ಮೃತಪಟ್ಟವರಿಗೆ 1 ಲಕ್ಷ ರೂ. ಪರಿಹಾರ ಘೋಷಣೆ ಮಾಡಿರುವುದು ಸ್ವಾಗತಾರ್ಹ, ಆದರೆ ಸಕಾಲಕ್ಕೆ ಕೋವಿಡ್ ನಿಯಂತ್ರಿಸುವ ಕ್ರಮ ಕೈಗೊಳ್ಳದ ಸರಕಾರದ ವೈಫಲ್ಯದಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು ಎಂಬುದನ್ನು ಮನಗಾಣಲಿ, ಈ ಹಿನ್ನಲೆಯಲ್ಲಿ ಸರಕಾರ ಒಬ್ಬರಿಗೆ ಕನಿಷ್ಟ 5 ಲಕ್ಷ ರೂ. ಘೋಷಣೆ ಮಾಡುವಂತೆ ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರೋಧಿ ನೀತಿ ವಿರುದ್ಧ ಜನಪ್ರತಿನಿಧಿಗಳು ತುಟಿ ಬಿಚ್ಚುತ್ತಿಲ್ಲ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆಡಳಿತ ವೈಫಲ್ಯದ ನಡುವೆಯೇ ತುರುವೇಕೆರೆ ಆಡಳಿತ ಕುಸಿದಿದೆ, ಈ ಎಲ್ಲಾ ವೈಫಲ್ಯ ಖಂಡಿಸಿ ಜುಲೈ 19 ರಂದು ತಾಲೂಕಿನ ರೈತರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ವೇಳೆ ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ, ಯುವ ಘಟಕದ ಅಧ್ಯಕ್ಷ ರಮೇಶ್, ಹನುಮಂತಯ್ಯ, ತಾಪಂ ಮಾಜಿ ಅಧ್ಯಕ್ಷ ಗಂಗಾಧರ್, ಪಪಂ ಮಾಜಿ ಅಧ್ಯಕ್ಷ ವಿಜಯಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಮಾಯಣ್ಣಗೌಡ, ಹಾಲಿ ನಿರ್ದೇಶಕ ಮಧುಸೂಧನ್, ವಕ್ತಾರ ಯೋಗೀಶ್ ಮತ್ತಿತರಿದ್ದರು.
ಬಡವರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದ್ದೇ ಮೋದಿ: ಎಂಟಿಕೆ
Get real time updates directly on you device, subscribe now.
Comments are closed.