ಕೊರಟಗೆರೆ ಕ್ಷೇತ್ರದ ಬಡಜನರಿಗೆ 25 ಸಾವಿರ ದಿನಸಿ ಕಿಟ್‌ ವಿತರಣೆಗೆ ಚಾಲನೆ

ಜನರ ಕಷ್ಟ ನಿವಾರಿಸುವುದು ಶ್ರೇಷ್ಠ ಕಾರ್ಯ: ಪರಮೇಶ್ವರ್

520

Get real time updates directly on you device, subscribe now.

ತುಮಕೂರು: ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಮಾನವೀಯ ದೃಷ್ಟಿಯಿಂದ ನೆರವಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.
ಗೊಲ್ಲಹಳ್ಳಿಯ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕನ್ನಿಕಾ ಪರಮೇಶ್ವರ್‌ ಅವರ ಜೊತೆ ಸೇರಿ ಗಿಡ ನೆಡುವ ಮೂಲಕ ಕೊರಟಗೆರೆ ಕ್ಷೇತ್ರದ ಪ್ರತಿ ಗ್ರಾಪಂ ನ ಬಡಜನರಿಗೆ ಹಂಚಲು 25 ಸಾವಿರ ದಿನಸಿ ಕಿಟ್‌ ವಿತರಣೆಗೆ ಹೊರಟ ಟ್ರಕ್ ಗಳಿಗೆ ಚಾಲನೆ ನೀಡಿ ಮಾತನಾಡಿ, ಸರಕಾರಕ್ಕಿಂತಲೂ ಸಂಘ ಸಂಸ್ಥೆಗಳು, ವಿರೋಧ ಪಕ್ಷಗಳು, ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಡವರ ನೆರವಿಗೆ ಬರುವ ಮೂಲಕ ಜನರ ಸಂಕಷ್ಟದಲ್ಲಿ ತಾವು ಭಾಗಿಯಾಗಿರುವುದು ಉತ್ತಮ ಸಂದೇಶ ನೀಡಿದೆ ಎಂದರು.
ಕೊರೊನಾ 2ನೇ ಅಲೆ ಬಹಳ ಭೀಕರವಾಗಿದ್ದು, ಇಡೀ ದೇಶದಲ್ಲೆ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಅನೇಕ ಕುಟುಂಬಗಳು ಹಾಳಾಗಿವೆ, ಇಡೀ ಸಮಾಜ ಮತ್ತು ಆರ್ಥಿಕ ವ್ಯವಸ್ಥೆ ಬಹಳಷ್ಟು ತೊಂದರೆಗೀಡಾಗಿದೆ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಉದ್ಯೋಗ, ಕೂಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಜನ ಹಳ್ಳಿಗಳಿಗೆ ಬಂದಿದ್ದರಿಂದ ಅಲ್ಲಿನ ಜೀವನ ವ್ಯವಸ್ಥೆಯೂ ಹಾಳಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್ಡೌನ್‌ ಅನಿವಾರ್ಯತೆಯಿಂದ ಬಹಳಷ್ಟು ಜನರಿಗೆ ಆಹಾರ, ಔಷಧ ಖರೀದಿಸಲು ತೊಂದರೆಯಾಯಿತು. ಕೃಷಿ ಮಾಡುವವರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಕಾಡಿದರೆ, ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳು ಶಕ್ತಿ ಮೀರಿ ಸಹಾಯ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೊರೊನಾ ನಿಗ್ರಹಕ್ಕೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಬಹಳಷ್ಟು ಶ್ರಮ ವಹಿಸಿ ಜೀವನವನ್ನೆ ಮುಡುಪಾಗಿಟ್ಟು ಕೆಲಸ ಮಾಡುತ್ತಿದ್ದಾರೆ, ನನ್ನ ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕೆಂಬ ಉದ್ದೇಶದಿಂದ ಸಿದ್ದಾರ್ಥ ಮೆಡಿಕಲ್‌ ಕಾಲೇಜಿನಲ್ಲಿ 10 ಮಂದಿ ವೈದ್ಯರನ್ನು ನಿಯೋಜಿಸಿ ಪ್ರತಿ ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಮೆಡಿಕಲ್‌ ಕಿಟ್‌ ನೀಡಿ, ಅವರಿಗೆ ತೊಂದರೆ ಇದ್ದರೆ ಧೈರ್ಯ ಹೇಳಿ ಆಸ್ಪತ್ರೆಗೆ ಕರೆತರುವ ಕೆಲಸವನ್ನು ಕಳೆದ 1 ತಿಂಗಳಿನಿಂದ ನಮ್ಮ ವೈದ್ಯರು ವೈದ್ಯರ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಶಾಸಕನಾಗಿ ಫ್ರಂಟ್‌ ಲೈನ್‌ ವಾರಿಯರ್ಸ್ ಗೆ ಫುಡ್‌ ಕಿಟ್‌ ನೀಡುವ ವ್ಯವಸ್ಥೆ ಮಾಡಿದ್ದೇನೆ. ಜತೆಗೆ ಬಡವರಿಗೆ 15 ದಿನಗಳಿಗಾಗುವಷ್ಟು 25 ಸಾವಿರ ಫುಡ್ ಕಿಟ್ ಗಳನ್ನು ಕಳುಹಿಸಿ ಕೊಡುತ್ತಿದ್ದು, ಪ್ರತಿ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಮುಖಂಡರು ತೆರಳಿ ವಿತರಿಸಲಿದ್ದಾರೆ. ಯಾರೂ ಸಹ ಈ ಫುಡ್ ಕಿಟ್ ಗಳನ್ನು ದುರುಪಯೋಗ ಪಡಿಸಿಕೊಳ್ಳದೆ ಬಡವರ ಮನೆ ಬಾಗಿಲಿಗೆ ತಲುಪಿಸುವಂತಹ ಕೆಲಸ ಮಾಡಬೇಕು ಎಂದು ಮುಖಂಡರಲ್ಲಿ ಮನವಿ ಮಾಡಿದ್ದೇನೆ ಎಂದು ಡಾ.ಜಿ.ಪರಮೇಶ್ವರ್‌ ನುಡಿದರು.
ಕೊರೊನ ಮೂರನೇ ಅಲೆಯ ಎಚ್ಚರಿಕೆ ನೀಡಿರುವ ತಜ್ಞರ ವರದಿಯಂತೆ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ವ್ಯಾಪಿಸುತ್ತದೆ ಎಂದು ತಜ್ಞರ ವರದಿ ಪ್ರಕಾರ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಹಾಗೂ ಮಕ್ಕಳ ಹಿತದೃಷ್ಟಿಯಿಂದ ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಅಗತ್ಯ ವೈದ್ಯಕೀಯ ಸಲಕರಣೆ ತಂದು ಈಗಾಗಲೇ ಐಸಿಯು ಹಾಗೂ ಆಕ್ಸಿಜನ್‌ ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ್‌ ಅವರ ಧರ್ಮಪತ್ನಿ ಕನ್ನಿಕಾ ಪರಮೇಶ್ವರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಕೃಷ್ಣ, ಕಾಂಗ್ರೆಸ್‌ ಮುಖಂಡರಾದ ಇಕ್ಬಾಲ್‌ ಅಹಮದ್‌, ವಾಲೆ ಚಂದ್ರಯ್ಯ, ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್‌.ದಿನೇಶ್, ಮುಖಂಡರಾದ ಚಂದ್ರಶೇಖರ್‌ಗೌಡ, ಪರಮೇಶ್ವರ್‌ ಯುವ ಸೈನ್ಯದ ನಗುತ ರಂಗನಾಥ್‌, ನರಸಿಂಹರಾಜು, ವೆಂಕಟಾಚಲಯ್ಯ, ಅಶ್ವಥನಾರಾಯಣ, ಅರಕೆರೆ ಶಂಕರ್‌, ಪ್ರಸನ್ನಕುಮಾರ್‌, ಗಂಗಾಧರಪ್ಪ, ಎ.ಡಿ ಬಲರಾಮಯ್ಯ, ಟಿ.ಸಿ.ರಾಮಣ್ಣ, ಕೆಂಪಣ್ಣ, ಜಾಲಾ ಕೃಷ್ಣಮೂರ್ತಿ, ವಿನಯಕುಮಾರ್‌, ಜಯಮ್ಮ, ಎ.ಎಸ್‌.ರಾಜು ಸೇರಿದಂತೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಹಾಗೂ ಮುಖಂಡರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!