ಮಧುಗಿರಿ: ಸಿಎಂ ಎನ್ನಬೇಡಿ, ಅದೇ ನನಗೆ ಮುಳುವಾಗುತ್ತದೆ ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ತಾಲ್ಲೂಕಿನ ಪುರವರ ಹೋಬಳಿಯ ಪುರವರ ಗ್ರಾಮ ಪಂಚಾಯತಿ ಮತ್ತು ಕೊಡ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ 2.55 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗ ಸಭಿಕರೊಬ್ಬರು ಮುಂದಿನ ಸಿಎಂ ಪರಮೇಶ್ವರ್ ಎಂದಾಗ ಸಿಎಂ ಪದ ಹೇಳಬೇಡಿ, ನನಗೆ ಡೇಂಜರ್ ಆಗುತ್ತದೆ ಎಂದು ಪರಮೇಶ್ವರ್ ಮಾರ್ಮಿಕವಾಗಿ ತಿಳಿಸಿದರು.
ಗಂಕಾರನಹಳ್ಳಿ ಗೇಟ್ ಬಳಿ 70 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಕೋಡ್ಲಾಪುರ ಗ್ರಾಮದಲ್ಲಿ ಐ.ಡಿ.ಹಳ್ಳಿ, ಪುರವರ ರಸ್ತೆಯ ಕೋಡ್ಲಾಪುರ, ಇಮ್ಮಡಗೊಂಡನಹಳ್ಳಿ ಮಾರ್ಗವಾಗಿ ಹಿಂದೂಪುರ ರಸ್ತೆ ಸೇರುವ 17 ಕೋಟಿ ರೂ. ವೆಚ್ಚದ ರಸ್ತೆ, ತಾಳೆಕೆರೆ ಗ್ರಾಮದಲ್ಲಿ ಎಸ್‌ಸಿಪಿಟಿಎಸ್‌ಪಿ ಯೋಜನೆಯಡಿ 15 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಸಿಸಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದರು.
ಕೊಡ್ಲಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನು ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಗ್ರಾಮಕ್ಕೆ ಬಂದಾಗ ಉದ್ವೇಗದಲ್ಲಿ ಮಾತನಾಡಿದರೆ ಅದು ಒಳ್ಳೆಯದಲ್ಲ, ನಿಮ್ಮ ಕೆಲಸ ಆಗಬೇಕು ಎಂದರೆ ಕೆಲಸ ಕೇಳಿ ಮಾಡಿಸಿಕೊಳ್ಳಬೇಕು ಎಂದೇಳಿ, ಇತ್ತೀಚೆಗೆ ಅವರ ವಿರುದ್ಧ ಹರಿಹಾಯ್ದಿದ್ದ ಗ್ರಾಮಸ್ಥರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಅಭಿವೃದ್ಧಿ ಆಗುತ್ತಿವೆ, ಕೊಡ್ಲಾಪುರ ಗ್ರಾಮ ಪಂಚಾಯಿತಿಗೆ 1 ಕೋಟಿ ರೂ. ನೀಡಿ ಅನುದಾನ ನೀಡಿದ್ದೇವೆ, ಸುವರ್ಣ ಗ್ರಾಮ ಯೋಜನೆಯಡಿ 2 ಕೋಟಿ ರೂ. ಬಿಡುಗಡೆಯಾಗಿತ್ತು, 40 ಲಕ್ಷ ರೂ. ವೆಚ್ಚದಲ್ಲಿ ಪಶು ಆಸ್ಪತ್ರೆ, 50 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ, ಪುರವರ ಬಳಿಯಿರುವ ಜಯಮಂಗಲಿ ನದಿಗೆ ಅಡ್ಡಲಾಗಿ 19 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಸೇತುವೆ ಉದ್ಘಾಟನೆಗೆ ಸಜ್ಜುಗೊಂಡಿದೆ. ಐಡಿ ಹಳ್ಳಿ ವೃತ್ತದಿಂದ ಬ್ಯಾಲ್ಯದವರೆಗೂ ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಇವೆಲ್ಲ ಅಭಿವೃದ್ಧಿ ಕಣ್ಣಿಗೆ ಕಾಣುತ್ತಿವೆ, ದುರ್ಗಮ್ಮ ದೇವಾಲಯ ನಿರ್ಮಾಣಕ್ಕೆ 12 ಲಕ್ಷ ರೂ. ಶಾಸಕರ ಅನುದಾನದಲ್ಲಿ ನೀಡಿದ್ದೇನೆ ಎಂದರು.
ನೂರು ಮನೆಗಳನ್ನು ನೀಡಿದ್ದೇನೆ, 26 ಎಕರೆ ಪ್ರದೇಶದಲ್ಲಿ ಆಶ್ರಯ ನಿವೇಶನ ವಿಂಗಡಿಸುವಂತೆ ಈಗಾಗಲೇ ತಹಸೀಲ್ದಾರ್ ಗೆ ಸೂಚಿಸಿದ್ದು, ಈ ಭಾಗದಲ್ಲಿ ಬಹುತೇಕವಾಗಿ ದಲಿತರೆ ವಾಸವಾಗಿದ್ದು ಅವರಿಗೆ ಸರ್ಕಾರದಿಂದ ಸಲ್ಲಬೇಕಾದ ಎಲ್ಲಾ ಅನುದಾನ ಕೊಡಿಸುವ ಪ್ರಯತ್ನ ಮಾಡಿರುವುದಾಗಿ ತಿಳಿಸಿ, ಕೋಡ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಕೊರೊನಾ ಮುಗಿಯುವವರೆಗೂ ಇಲ್ಲೇ ಇರುವಂತೆ, ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಕೊಡ್ಲಾಪುರ ರಸ್ತೆ ತಡವಾಗಲು ಇದು ಲೋಕೋಪಯೋಗಿ ಇಲಾಖೆಗೆ ಸೇರಿದ್ದ, ಜಿಲ್ಲಾ ಪಂಚಾಯತಿ ಇಲಾಖೆಗೆ ಸೇರಿದ್ದ ಎಂಬುದು ಸ್ವಲ್ಪ ಗೊಂದಲವಿತ್ತು. ಈ ಗೊಂದಲ ನಿವಾರಿಸಿ ಈಗ 1.7 ಕೋಟಿ ರೂ. ಅನುದಾನದಲ್ಲಿ ಕೆಲಸ ಆರಂಭಿಸಲಾಗಿದೆ. ಇನ್ನೂ ಮುಂದೆ ರಸ್ತೆಯಾದ ನಂತರ ಬಸ್ ಸಂಚಾರ ಆಗಲಿವೆ, ಖಾಸಗಿ ಬಸ್ ಗಳು ಪ್ರಯಾಣಿಕರೇ ಹತ್ತುತ್ತಿಲ್ಲ ಎಲ್ಲಾ ಆಟೋ ಅವಲಂಭಿಸಿರುವುದರಿಂದ ಬಸ್ ನವರಿಗೆ ನಷ್ಟವುಂಟಾದ ಕಾರಣ ಬಸ್ ಗಳು ಬಿಡುತ್ತಿಲ್ಲವೆಂದು ತಿಳಿಸಿದರು.
ನನಗೆ ರಾಜಕೀಯ ಜನ್ಮ ಕ್ಷೇತ್ರದ ಮರೆಯುವುದಿಲ್ಲ, ಋಣ ತೀರಿಸುವೆ, ಕಳೆದ ಮೂವತ್ತು ವರ್ಷಗಳಿಂದ ಪುರವರ ಹೋಬಳಿ ನನಗೆ ರಾಜಕೀಯವಾಗಿ ಬೆಳೆಸಿ ರಾಜ್ಯದ ಉಪ ಮುಖ್ಯಮಂತ್ರಿ ಸ್ಥಾನದವರೆಗೂ ಕೊಂಡೊಯ್ದಿದೆ, ನಿಮ್ಮೊಡನೆ ಅಣ್ಣ ತಮ್ಮನಂತೆ ನಿಮ್ಮ ಜೊತೆಗೆ ಇರುತ್ತೇನೆ, ಯಾವುದೇ ತೊಂದರೆ ಬಂದರೂ ಯಾವುದೇ ಕೆಲಸವಾಗಬೇಕಾದರೂ ನಿಮ್ಮಗಳೊಡನೆ ಇರುತ್ತೇನೆ ಎಂದು ಭಾವುಕರಾದರು.
ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ: ತಹಸೀಲ್ದಾರರು ಕೊಡ್ಲಾಪುರದಲ್ಲಿರುವ ಜನತೆ ಲಸಿಕೆ ಹಾಕಿಸಿ ಕೊಳ್ಳುತ್ತಿಲ್ಲ ಎಂದು ದೂರುತ್ತಿದ್ದಾರೆ. ನಾನು ಇತ್ತೀಚೆಗೆ ಸಿದ್ಧಾರ್ಥ ಆಸ್ಪತ್ರೆಯಿಂದ ಲಸಿಕೆ ಮತ್ತು ಕೊರೊನ ಸೋಂಕಿತರಿಗೆ ಔಷಧಿ ವಿತರಿಸಲು ಕಳುಹಿಸಿದ್ದೆ, ಉದಾಸೀನ ಮಾಡಿದರೆ ನಿಮ್ಮ ಪ್ರಾಣದ ಜೊತೆಗೆ ಮತ್ತೊಬ್ಬರ ಪ್ರಾಣ ತೆಗೆಯುತ್ತೀರಾ, ಸೋಂಕಿನ ಲಕ್ಷಣ ಕಂಡು ಬಂದ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ, ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಚಿಕಿತ್ಸೆಯನ್ನು ಉಚಿತವಾಗಿ ನೀಡುವುದಾಗಿ ಕ್ಷೇತ್ರದ ಜನರಿಗೆ ತಿಳಿಸಿದರು.
ಮೂರನೇ ಅಲೆ ಬಗ್ಗೆ ಎಚ್ಚರ: ಸರ್ಕಾರ ಶಾಲಾ ಕಾಲೇಜುಗಳ ನ್ನು ತೆರೆಯುವ ಬಗ್ಗೆ ಚರ್ಚೆ ನಡೆಯುತ್ತಿದ್ದು ಅನಾಹುತ, ಆರ್ಥಿಕ ನಷ್ಟದ ಬಗ್ಗೆ ಜನ ಸಮುದಾಯ ಎಚ್ಚರಿಕೆ ವಹಿಸಬೇಕು. ಸರ್ಕಾರದ ಗೈಡ್ ಲೈನ್ ಯಥಾವತ್ತಾಗಿ ಪಾಲಿಸುವುದರ ಜೊತೆಗೆ ನಮ್ಮ ಎಚ್ಚರಿಕೆ ನಮ್ಮಲ್ಲಿರಬೇಕು, ಲಸಿಕೆ ಯನ್ನು ಪ್ರತಿಯೊಬ್ಬರೂ ಹಾಕಿಸಿಕೊಳ್ಳಿ, ವಿದೇಶದಲ್ಲಿ ಈಗಾಗಲೇ ಲಸಿಕೆ ಹಾಕಿಸಿಕೊಂಡಿರುವುದರಿಂದ ಮೂರನೇ ಅಲೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಲಸಿಕೆ ಹಾಕಿಸುವುದರಿಂದ ಮೂರನೆ ಅಲೆಯ ತೀವ್ರತೆ ಕಡಿಮೆಯಾಗುತ್ತದೆ ಎಂದರು.
Comments are closed.