ತುಮಕೂರು: ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದ್ದು, ಉತ್ತಮ ಪರ್ಯಾಯ ರಾಜಕೀಯ ಪಕ್ಷವಾಗಿರುವ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೆಹಲಿಯಲ್ಲಿ ಆಗಿರುವ ಬದಲಾವಣೆಯನ್ನು ತುಮಕೂರು ಜಿಲ್ಲೆಯಲ್ಲಿ ಕಾಣಬೇಕು ಎನ್ನುವ ಕಾರಣಕ್ಕೆ ಆಮ್ ಆದ್ಮಿ ಜನರ ಬಳಿಗೆ ತೆರಳುತ್ತಿದೆ, ದೆಹಲಿಯಲ್ಲಿರುವ ಕ್ರೇಜಿವಾಲ್ ನೇತೃತ್ವದ ಸರ್ಕಾರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜಾರಿಗೆ ತಂದಿರುವ ಕ್ರಾಂತಿಕಾರಿ ಬದಲಾವಣೆ ದೇಶಕ್ಕೆ ಅವಶ್ಯಕವಾಗಿದ್ದು, ಉನ್ನತ ವ್ಯಾಸಂಗ, ಉತ್ತಮ ಆರೋಗ್ಯ ಕಲ್ಪಿಸುವುದೇ ಆಮ್ ಆದ್ಮಿ ಪಕ್ಷದ ಧ್ಯೇಯವಾಗಿದೆ ಎಂದು ಹೇಳಿದರು.
ಪಕ್ಷದ ಜಿಲ್ಲಾ ಉಸ್ತುವಾರಿ ಬಿ.ಟಿ.ನಾಗಣ್ಣ ಮಾತನಾಡಿ, ಜಿಲ್ಲೆಯಲ್ಲಿ ತೆಂಗು ಪ್ರಮುಖ ಬೆಳೆಯಾಗಿದ್ದು, ಬೆಳೆಗೆ ತಕ್ಕಂತೆ ಬೆಲೆ ಸಿಗದೆ ರೈತರು ಪರದಾಡುತ್ತಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದಲೂ ಹೇಮಾವತಿ ನೀರಿನ ಲಭ್ಯತೆ ಸಂಪೂರ್ಣವಾಗಿ ಬಳಸಿಕೊಳ್ಳಲು ಜಿಲ್ಲೆ ವಿಫಲವಾಗಿದೆ, ಇಂದಿಗೂ ಪಾವಗಡ ಸೇರಿದಂತೆ ಅನೇಕ ತಾಲ್ಲೂಕುಗಳು ನೀರಾವರಿಯಿಂದ ವಂಚಿತವಾಗಿದ್ದು, ನೀರಾವರಿ ಮೇಲೆ ರಾಜಕಾರಣ ಮಾಡುವ ರಾಜಕಾರಣಿಗಳಿಂದಾಗಿ ಜಿಲ್ಲೆಯಲ್ಲಿ ಇಂತಹ ಸ್ಥಿತಿ ಉಂಟಾಗಿದೆ ಎಂದರು.
ಜಿಲ್ಲೆಯಲ್ಲಿ ಹುಚ್ಚಮಾಸ್ತಿ ಗೌಡ, ವೈ.ಕೆ.ರಾಮಯ್ಯ ಅವರಂತಹ ಅನೇಕ ಮುಖಂಡರು ಕ್ರಾಂತಿಕಾರಿ ಬದಲಾವಣೆ ಮಾಡಿದ್ದಾರೆ, ಹೇಮಾವತಿ ನೀರನ್ನುಜಿಲ್ಲೆಗೆ ಹರಿಸಲು ಶ್ರಮಿಸಿದ್ದಾರೆ. ಸಾವಿರಾರು ಕೋಟಿ ವೆಚ್ಚದ ಹೇಮಾವತಿ ನಾಲೆಯ ಉಪಯೋಗ ಕೆಲ ತಾಲ್ಲೂಕುಗಳಿಗೆ ಮಾತ್ರ ಸೀಮಿತವಾಗಿದ್ದು, ನೀರಾವರಿ ಹೆಸರಿನಲ್ಲಿ ಇಂದು ಭ್ರಷ್ಟ ವ್ಯವಸ್ಥೆ ನೋಡುತ್ತಿದ್ದೇವೆ ಎಂದು ಆರೋಪಿಸಿದರು.
ಹೇಮಾವತಿ, ಭದ್ರಾ ಮೇಲ್ದಂಡೆ ಜಾರಿ ಬಗ್ಗೆ ರಾಜಕಾರಣಿಗಳು ಆಶ್ವಾಸನೆ ನೀಡುತ್ತಾರೆ, ಅದನ್ನು ಈಡೇರಿಸುವುದಿಲ್ಲ, ಎತ್ತಿನಹೊಳೆ ಯೋಜನೆ ಇದುವರೆಗೂ ಮೇಲಕ್ಕೆ ಎದ್ದೇಳುತ್ತಿಲ್ಲ, ಜಿಲ್ಲೆಗೆ ನೀರು ಬರುತ್ತದೆ ಎನ್ನುವುದು ಭ್ರಮೆ ಎನ್ನುವಂತಹ ಸ್ಥಿತಿ ಇದ್ದು, ಇಂತಹ ರಾಜಕೀಯ ವ್ಯವಸ್ಥೆ ಬದಲಾವಣೆಯಾದರೆ ಮಾತ್ರ ನೀರಾವರಿ ಸೌಲಭ್ಯ ಪಡೆಯಲು ಸಾಧ್ಯ, ರಾಜಕೀಯ ಆಂದೋಲನ ಆಗಬೇಕಾದರೆ ಶಿಕ್ಷಣ ಮತ್ತು ಆರೋಗ್ಯಕ್ಷೇತ್ರದಲ್ಲಿ ಬದಲಾವಣೆಯಾಗಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸಲಹೆಗಾರ ರೊಮಿ ಭಾಟಿ, ದರ್ಶನ್‌ಜೈನ್, ನಗರ ಘಟಕದ ಅಧ್ಯಕ್ಷ ಮುನೀರ್‌ಅಹ್ಮದ್, ಜಿಲ್ಲಾ ಮುಖಂಡ ಉಮರ್ ಫಾರೂಕ್ ಇತರರಿದ್ದರು.
ಸ್ಥಳೀಯ ಚುನಾವಣೆಯಲ್ಲಿ ಆಮ್‌ಆದ್ಮಿ ಪಕ್ಷ ಸ್ಪರ್ಧೆ: ಪೃಥ್ವಿರೆಡ್ಡಿ
Get real time updates directly on you device, subscribe now.
Prev Post
Next Post
Comments are closed.