ಜನಸಂಘದ ತತ್ವಸಿದ್ಧಾಂತ ಬಿಜೆಪಿಯಲ್ಲಿ ಇಲ್ಲ: ನಂಜುಂಡಯ್ಯ

153

Get real time updates directly on you device, subscribe now.

ಕುಣಿಗಲ್‌: ಜನಸಂಘದ ತತ್ವಸಿದ್ಧಾಂತಗಳು ಇಂದಿನ ಬಿಜೆಪಿಯಲ್ಲಿ ಉಳಿದುಕೊಳ್ಳದೆ ಇರುವುದು ಖೇದಕರ. ತುರ್ತು ಪರಿಸ್ಥಿತಿ ಕಾಲದಲ್ಲಿ ಜನರನ್ನು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳಲಾಯಿತೆಂದು ಜನಸಂಘದ ಹಿರಿಯ ಮುಖಂಡ, 19 ತಿಂಗಳು ತುರ್ತು ಪರಿಸ್ಥಿತಿ ಜೈಲುವಾಸ ಅನುಭವಿಸಿದ 96 ವಯಸ್ಸಿನ ಹಿರಿಯ ಮುಖಂಡ ವೈ.ಸಿ.ನಂಜುಂಡಯ್ಯ ತಿಳಿಸಿದರು.
ಶುಕ್ರವಾರ ಬಿಜೆಪಿಯಿಂದ ಮುಖಂಡ ರಾಜೇಶಗೌಡ ತೋಟದ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಕರಾಳ ದಿನಾಚರಣೆ ಕಾರ್ಯ ಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ನ ಇಂದಿರಾಗಾಂಧಿ ಕ್ರಮ ಸಂವಿಧಾನ ವಿರೋಧಿ, ಇಂತಹ ದಿನಗಳು ರಾಷ್ಟ್ರ ಇತಿಹಾಸದಲ್ಲಿ ಇನ್ನೆಂದು ಬಾರದೆ ಇರಲಿ, ಕಾಂಗ್ರೆಸ್‌ ವಿರೋಧಿಗಳನ್ನು ದಮನಿಸಲು ತುರ್ತು ಪರಿಸ್ಥಿತಿ ಹೇರಲಾಯಿತು. ಪತ್ರಿಕಾರಂಗದ ಹಕ್ಕುಗಳ ಕಸಿದುಕೊಳ್ಳಲಾಯಿತು, ನ್ಯಾಯಾಂಗವೂ ಅಂದು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿಲ್ಲ, ಅಂದು ಜನಸಂಘದ ವತಿಯಿಂದ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದವರು ಇಂದು ಬಿಜೆಪಿಯಲ್ಲಿ ಯಾವ ಲೆಕ್ಕಕ್ಕೂ ಇಲ್ಲ, ಅಂದು ನಾವು ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿದರೆ ಇಂದಿನವರು ಸ್ವಾರ್ಥಪರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಬಿಜೆಪಿಯವರು ನಮ್ಮ ಸಮಸ್ಯೆ ಏನೆಂದು ಕೇಳಲಿಲ್ಲ, ಇದು ನಮಗೆ ಬೇಸರ ಎಂದರು.
ಬಿಜೆಪಿ ಮುಖಂಡ ರಾಜೇಶ್ ಗೌಡರು ನೀಡಿದ ಐದು ಲಕ್ಷ ರೂ. ಚೆಕ್ಕನ್ನು ತಿರಸ್ಕರಿಸಿದ ಹಿರಿಯ ಜನಸಂಘಿ, ಅದೇ ಹಣವನ್ನು ಸಮುದಾಯದ ಉಪಯೋಗಕ್ಕೆ ಬಳಸುವಂತೆ ವಾಪಸ್‌ ನೀಡಿದರು.
ಮುಖಂಡ ರಾಜೇಶ್‌ಗೌಡ ಮಾತನಾಡಿ, ತಾಲೂಕಿನಲ್ಲಿ ಇಂತಹ ಮಹಾನ್‌ ಮುಖಂಡರನ್ನು ಕಡೆಗಣಿಸಿರುವುದು ನಿಜಕ್ಕೂ ಪಕ್ಷದ ಬೆಳವಣಿಗೆಗೆ ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಿ ಇವರ ಮಾರ್ಗದರ್ಶನ ನಮಗೆ ಅತ್ಯಗತ್ಯ. ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ಸಿಗರು ತುರ್ತು ಪರಿಸ್ಥಿತಿಯಂತಹ ಜನವಿರೋಧಿ ಕ್ರಮ ಜಾರಿಗೊಳಿಸಿದ್ದು ಇದರಿಂದಾದ ನಷ್ಟಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡಲು ಕರಾಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಹಿರಿಯ ಜನಸಂಘ ಕಾರ್ಯಕರ್ತರಾದ ರಾಮಚಂದ್ರಪ್ಪ, ಅಶ್ವಥನಾರಾಯಣ ಶ್ರೇಷ್ಠಿ, ಧನಂಜಯ ಅವರನ್ನು ಸನ್ಮಾನಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಕೆ.ರಮೇಶ್‌, ಪ್ರಮುಖರಾದ ಬಿ.ಕೆ.ವೆಂಕಟಕೃಷ್ಣರಾವ್‌, ಕೆ.ಎಂ.ತಿಮ್ಮಪ್ಪ, ನಟರಾಜು, ಸತೀಶ್‌, ದೊಡ್ಡಮಾದಪ್ಪ, ಕೆ.ಟಿ.ರಾಜು, ಹರೀಶ್‌, ಸುರೇಶ್‌, ವೆಂಕಟೇಶ, ರಂಗನಾಥ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!