ದೆಹಲಿಯಲ್ಲಿನ ರೈತರ ಹೋರಾಟ ಬೆಂಬಲಿಸಿ ರೈತಸಂಘದಿಂದ ಪ್ರತಿಭಟನೆ

ರಸಗೊಬ್ಬರ, ಬಿತ್ತನೆ ಬೀಜ ಸಮರ್ಪಕವಾಗಿ ವಿತರಿಸಿ

145

Get real time updates directly on you device, subscribe now.

ತುಮಕೂರು: ದೆಹಲಿಯಲ್ಲಿ ರೈತರು ಕಳೆದ ಆರು ತಿಂಗಳಿನಿಂದ ಕೇಂದ್ರ ಸರಕಾರದ ರೈತ ವಿರೋಧಿ ಕಾಯ್ದೆಗಳ ವಾಪಸ್ಸಾತಿಗೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟ ಬೆಂಬಲಿಸಿ ಹಾಗೂ ರಸಗೊಬ್ಬರ, ಬಿತ್ತನೆ ಬೀಜಗಳ ಸಮರ್ಪಕ ವಿತರಣೆಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್‌ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ದೆಹಲಿಯ ರೈತರ ಹೋರಾಟ ಬೆಂಬಲಿಸಿ, ಕಿಸಾನ್‌ ಮೋರ್ಚಾ ಕೈಗೆತ್ತಿಕೊಂಡಿರುವ ಕರಾಳ ಕೃಷಿ ಕಾಯ್ದೆಗಳ ರದ್ದು ಕುರಿತಂತೆ ಸರಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನಾನಿರತ ರೈತರು ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್‌ ಪಟೇಲ್‌, ಕಳೆದ 6 ತಿಂಗಳಿಂದ ರೈತರು ರಾಷ್ಟ್ರದ ರಾಜಧಾನಿಯ ನಾಲ್ಕು ಹೆದ್ದಾರಿಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ, ದೇಶದ ಪ್ರಧಾನಿ ಬಂಡತನದಿಂದ ಪರ್ಯಾಯ ರಸ್ತೆಗಳ ಮೂಲಕ ದೆಹಲಿಗೆ ಬರುವಂತೆ ಮಾಡಿ, ನಾವು ರೈತರ ವಿರುದ್ಧ ಗೆದ್ದಿದ್ದೇವೆ, ಚಳವಳಿಯನ್ನು ಹತ್ತಿಕ್ಕಿದ್ದೇವೆ ಎಂದು ಬೀಗುತ್ತಿದ್ದಾರೆ. ಇದು ಪ್ರಧಾನಿಯವರ ಗೆಲುವಲ್ಲ, ಬದಲಾಗಿ ರೈತರ ಗೆಲುವು, ಈಗಾಗಲೇ ಪ್ರಪಂಚದ ವಿವಿಧ ರಾಷ್ಟ್ರಗಳ ಸಂಸತ್ತಿನಲ್ಲಿ ಪ್ರತಿಭಟನಾ ನಿರತ ರೈತರ ಮನವಿ ಆಲಿಸುವಂತೆ ಒತ್ತಡ ಹೆಚ್ಚಾಗಿವೆ. ಆದರೂ ಜಾಣಕಿವುಡು ಪ್ರದರ್ಶಿಸುವ ಕೆಲಸ ಮಾಡುತ್ತೀದ್ದೀರಿ, ನಿಮ್ಮ ಸೋಗಲಾಡಿತನಕ್ಕೆ ಈ ದೇಶದ ರೈತರ ಧಿಕ್ಕಾರವಿದೆ ಎಂದರು.
ಪ್ರಧಾನಿ ಮತ್ತು ಅವರ ಸಚಿವ ಸಂಪುಟದ ಈ ಜನವಿರೋಧಿ ಕಾಯ್ದೆಗಳ ಫಲವಾಗಿ ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ಹೇಳ ಹೆಸರಿಲ್ಲದಂತೆ ಸೋಲು ಅನುಭವಿಸಿದೆ. ರೈತರಿಗೆ, ಕೃಷಿ ಕಾರ್ಮಿಕರಿಗೆ, ಈ ದೇಶದ ಬಡವರಿಗೆ ಬೇಡವಾದ ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ಇದೇ ಪರಿಸ್ಥಿತಿ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬಾರದು ಎಂದು ಆನಂದ ಪಟೇಲ್‌ ಎಚ್ಚರಿಸಿದರು.
ದೇಶದ ಪ್ರಧಾನಿಯವರು ಕಳೆದ ಚುನಾವಣೆ ವೇಳೆ 2020ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂದು ಹೇಳಿ, ಏಕಾಏಕಿ ರಸಗೊಬ್ಬರ, ಬಿತ್ತನೆ ಬೀಜಗಳ ಮೇಲಿನ ಸಬ್ಸಿಡಿ ಕಡಿಮೆ ಮಾಡಿ, ಗೊಬ್ಬರ ಮತ್ತು ಬೀಜಗಳ ಬೆಲೆ ಹೆಚ್ಚಳವಾಗುವಂತೆ ಮಾಡಿ, ರೈತರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಎನ್ನುವಂತಾಗಿದೆ. ಇದರ ಜೊತೆಗೆ ಕೃಷಿ ಸಾಲ ಕಡಿತ, ಕಬ್ಬಿನ ಬಾಕಿ ರೈತರಿಗೆ ನೀಡದೆ ಮೋಸ ಮಾಡಲಾಗುತ್ತಿದೆ. ಇದರ ಬಗ್ಗೆ ಸರಕಾರ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದರು.
ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಧನಂಜಯಾರಾಧ್ಯ ಮಾತನಾಡಿ, ಇಡೀ ವಿಶ್ವದ ಗಮನ ಸೆಳೆದಿರುವ ದೆಹಲಿ ರೈತ ಹೋರಾಟ ಇಂದಿಗೆ ಆರು ತಿಂಗಳು ಪೂರೈಸಿದೆ. ಸಂಯುಕ್ತ ಕಿಸಾನ್‌ ಮೋರ್ಚಾ ಮನವಿ ಮೇರೆಗೆ ದೇಶದಾದ್ಯಂತ ಎಲ್ಲಾ ರೈತರು ಬೀದಿಗಿಳಿದು ರೈತರ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕರಾಳ ಕಾಯ್ದೆಗಳನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಇದರ ಭಾಗವಾಗಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಸಂಚಾಲಕ ದೇವರಾಜ ತಿಮ್ಮಲಾಪುರ, ವಿವಿಧ ತಾಲೂಕುಗಳ ಅಧ್ಯಕ್ಷರಾದ ಸಿದ್ದರಾಮ, ಅನಿಲ್‌ಕುಮಾರ್‌, ನಾಗೇಂದ್ರ, ದ್ಯಾಮೇಗೌಡ, ರಾಜಣ್ಣ ರೈತರ ಕುರಿತು ಮಾತನಾಡಿದರು. ವಿದ್ಯಾರ್ಥಿ ಘಟಕ ಅಧ್ಯಕ್ಷ ಲಕ್ಷ್ಮಣಗೌಡ, ಮುಖಂಡರಾದ ಶಂಕರಲಿಂಗಪ್ಪ, ಪುಟ್ಟರಾಜು, ಲಕ್ಷ್ಮಣ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!