ತುಮಕೂರು: ಮುಂಬರುವ ವಿಧಾನಸಭೆ ಚುನಾವಣೆ ಇನ್ನೂ ಎರಡು ವರ್ಷ ಬಾಕಿ ಇರುವಂತೆಯೇ ಜನಾದೇಶವಿಲ್ಲದ ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವಕ್ಕಾಗಿ ಕಚ್ಚಾಟ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲೂ ಕಾಂಗ್ರೆಸ್‌ನ್ನು ಜನರೆ ತಿರಸ್ಕರಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಹೊನ್ನಾಳಿ ಕ್ಷೇತ್ರಕ್ಕೆ ತೆರಳುವ ಮುನ್ನ ನಗರದ ಸಿದ್ಧಗಂಗಾ ಮಠಕ್ಕೆ ಶನಿವಾರ ಮಧ್ಯಾಹ್ನ ಭೇಟಿ ನೀಡಿ ಡಾ. ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮಿಗಳ ಆಶೀರ್ವಾದ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೇವಲ 25 ರಿಂದ 30 ಸ್ಥಾನ ಮಾತ್ರ ಗೆಲ್ಲಬಹುದು ಅಷ್ಟೆ, ಆ ಪಕ್ಷಕ್ಕೆ ಜನಾದೇಶವೇ ಇಲ್ಲ, ಆದರೆ ನಾಯಕತ್ವಕ್ಕಾಗಿ ಈಗಿನಿಂದಲೇ ಕಚ್ಚಾಟ ಶುರುವಾಗಿದೆ ಎಂದರು.
ಬಿ ಎಸ್ ವೈ ನೇತೃತ್ವದಲ್ಲೇ ಚುನಾವಣೆ: ಮುಂಬರುವ ವಿಧಾನಸಭಾ ಚುನಾವಣೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲೇ ನಡೆಯಲಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಪ್ರಶ್ನೆಯೇ ಇಲ್ಲ, ಸೂರ್ಯ ಚಂದ್ರ ಇರುವವರೆಗೆ ಮುಖ್ಯಮಂತ್ರಿಗಳಾಗಿ ಬಿ.ಎಸ್.ಯಡಿಯೂರಪ್ಪ ಅವರೆ ಮುಂದುವರೆಯಲಿದ್ದಾರೆ. ಯಾವುದೇ ಕಾರಣಕ್ಕೂ ಬದಲಾವಣೆಯಿಲ್ಲ ಎಂದು ರಾಜ್ಯಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಉಸ್ತು ವಾರಿ ಅರುಣ್ ಸಿಂಗ್ ಅವರೆ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ವಿಜಯೇಂದ್ರ ಅವರು ದೆಹಲಿ ಭೇಟಿ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ ಅವರು,ಯಾವ ಕೆಲಸಕ್ಕೆ ಹೋಗಿದ್ದರೋ ಗೊತ್ತಿಲ್ಲ, ಬಹುಶಃ ಖಾಸಗಿ ಕೆಲಸಕ್ಕೆ ಹೋಗಿರಬಹುದು ಎಂದು ತಿಳಿಸಿದರು.
ಸಂಸದ ರಾಘವೇಂದ್ರ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸಲಿದ್ದಾರೆ ಎಂಬ ವದಂತಿ ಹಬ್ಬಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ ಅವರು, ರಾಘವೇಂದ್ರ ಅವರು ಸಂಸತ್ ಸದಸ್ಯರಾಗಿ ಶಿವಮೊಗ್ಗ ಕ್ಷೇತ್ರಕ್ಕೆ ಸುಮಾರು 10 ಸಾವಿರ ಕೋಟಿ ರೂ. ಗಳಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಕೇವಲ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದರು.
ಪರೀಕ್ಷೆ ಬರೆದಿದ್ದೇವೆ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿಕೆ ನೀಡಿರುವ ಸಚಿವರ ವಿರುದ್ಧ ಹರಿಹಾಯ್ದ ಅವರು, ಪರೀಕ್ಷೆ ಬರೆದವರಿಗೆ ಅವರ ಹಣೆಬರಹ ಗೊತ್ತಿರುತ್ತದೆ ತಾನೆ, ಪರೀಕ್ಷೆ ಯಾರು ಬರೆದಿದ್ದಾರೆ, ಅವರಿಗೆ ಎಷ್ಟು ಮಾರ್ಕ್ಸ್ ಬರುತ್ತೆ, ವ್ಯಾಲ್ಯುಯೇಷನ್ ಮಾಡಿ ಮಾರ್ಕ್ಸ್ ಕಾರ್ಡ್ ಪ್ರಿಂಟ್ ಹಾಕುವುದೇ ಬೇಡ, ಫಲಿತಾಂಶ ಅವರಿಗೆ ಗೊತ್ತಿರುತ್ತದೆ ಎಂದರು.
ನಿಜವಾಗಿ ಪರೀಕ್ಷೆ ಬರೆದವರು ಫೇಲ್ ಆಗಿದ್ದೇವೆ, ಇನ್ನು ನಕಲಿ, ಕಾಫಿ ಹೊಡೆದು ಪರೀಕ್ಷೆ ಬರೆದಂತಹವರು ಎಂದಿಗೂ ಪಾಸ್ ಆಗುವುದಿಲ್ಲ, ಇದಕ್ಕೆ ಉತ್ತರ ಅವರಿಗೇ ಸಿಗುತ್ತದೆ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ಅವರು ಪಕ್ಷ ಬಿಡುವುದಿಲ್ಲ, ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ, ರಮೇಶ್ ಜಾರಕಿಹೊಳಿ ಅವರು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ, ಬಿಜೆಪಿಯಲ್ಲೇ ಅಂತಿಮ ಎನ್ನುವ ಮಾತನ್ನೂ ಹೇಳಿದ್ದಾರೆ, ಆದ್ದರಿಂದ ಪಕ್ಷ ಬಿಡುವುದಿಲ್ಲ ಎಂದು ಹೇಳಿದರು.
ಹೊನ್ನಾಳಿ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ 800 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಕುಡಿಯುವ ನೀರು ಸೇರಿದಂತೆ ಹೊನ್ನಾಳಿ ಕ್ಷೇತ್ರದ ಕೆರೆಗಳ ಅಭಿವೃದ್ಧಿ ಮತ್ತು ಇತರೆ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ವಕ್ತಾರ ಕೊಪ್ಪಳ್ ನಾಗರಾಜ್, ಮುಖಂಡರಾದ ಮಹೇಶ್, ಮಲ್ಲಸಂದ್ರ ಶಿವಣ್ಣ, ಸತೀಶ್, ಪ್ರಕಾಶ್, ಚೇತನ್ ಮುಂತಾದವರು ಭಾಗವಹಿಸಿದ್ದರು.
Comments are closed.