ಕುಣಿಗಲ್: ಕೊರೊನಾ ಕಷ್ಟ ಕಾಲದಲ್ಲಿ ಜನತೆಯ ನೆರವಿಗೆ ನಿಲ್ಲುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯಸರ್ಕಾರ ಎರಡೂ ಸಂಪೂರ್ಣ ವಿಫಲವಾಗಿವೆ ಎಂದು ಮಾಜಿ ಡಿಸಿಎಂ, ಶಾಸಕ ಡಾ.ಜಿ.ಪರಮೇಶ್ವರ್ ಆರೋಪಿಸಿದರು.
ಸೋಮವಾರ ಪಟ್ಟಣದಲ್ಲಿ ಡಿ.ಕೆ.ಎಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 75 ಸಾವಿರ ಫುಡ್ ಕಿಟ್ ವಿತರಣೆಯ ಸಮಾರೋಪ, ಉಚಿತ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ದೇಶದ ಜನತೆಗೆ ಲಸಿಕೆ ನೀಡದೆ ಬೀದಿ, ಬೀದಿಯಲ್ಲಿ ಸಾಯಲು ಬಿಟ್ಟು, ಆರುವರೆ ಕೋಟಿ ಲಸಿಕೆ ಹೊರದೇಶಕ್ಕೆ ನೀಡಿದರು. ರಾಜ್ಯದಲ್ಲಿ ಕೊರೊನಾ ಕಷ್ಟಕಾಲದಲ್ಲಿ ಇಬ್ಬರು ಡಿಸಿಗಳು ಜಗಳದಿಂದ ಚಾಮರಾಜನಗರದಲ್ಲಿ 38 ಮಂದಿ ಆಮ್ಲಜನಕ ಇಲ್ಲದೆ ಸತ್ತು ಹೋದರು, ಸರ್ಕಾರದ ಅಸಮರ್ಪಕ ಆಡಳಿತದಿಂದ ಅಮಾಯಕರ ಪ್ರಾಣ ಹರಣವಾಯಿತು. ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿಫಲತೆ ನಡುವೆ ಕಾಂಗ್ರೆಸ್ ನಿಂದ ಎಲ್ಲಾ ಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಜನರಿಗೆ ಸ್ಪಂದಿಸುವ ಕೆಲಸವಾಗುತ್ತಿದೆ. ಕುಣಿಗಲ್ ಕ್ಷೇತ್ರದಲ್ಲಿ ಶಾಸಕ ಡಾ.ರಂಗನಾಥ, ಸಂಸದ ಡಿ.ಕೆ.ಸುರೇಶ್, ಕೊರೊನ ಎರಡೂ ಅಲೆಗಳ ಅವಧಿಯಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗುವ ರೀತಿ ಕೆಲಸ ಮಾಡಿದ್ದಾರೆ ಎಂದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಅಚ್ಚೇದಿನ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದು ಇಂದು ಜನರ ಬಾಯಿ, ಮೂಗು ಮುಚ್ಚೋದಿನ ಬಂದಿದೆ, ಇವರ ನಿರ್ಲಕ್ಷ್ಯದಿಂದಲೆ ದೇಶದಲ್ಲಿ ಕೊರೊನಾ ತಾಂಡವವಾಡುತ್ತಿದೆ, ವಿಜ್ಞಾನಿಗಳು ಎಚ್ಚರಿಸಿದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ದೇಶದ ಜನತೆ ಬೀದಿ ಬೀದಿಯಲ್ಲಿ ಸಾಯುವಂತಾಗಿದೆ. ಎಲ್ಲಾ ರಂಗದಲ್ಲೂ ಉದ್ಯೋಗ ಕಳೆದುಕೊಳ್ಳುವಂತಾಗಿ ಆತಂಕದಲ್ಲೆ ಜನರು ಜೀವನ ಸಾಗಿಸುವಂತಾಗಿದೆ. 21 ಲಕ್ಷ ಕೋಟಿ ಪರಿಹಾರದ ಭರವಸೆ ಭರವಸೆಯಾಗಿ ಉಳಿದಿದೆ. ಲಾಕ್ ಡೌನ್ ನಿಂದಾಗಿ ಬಡಜವರ ಸಂಖ್ಯೆ ಹೆಚ್ಚುತ್ತಿದ್ದು, ಬಡಜನತೆ ಸತ್ತಿದ್ದಾರೋ ಬದುಕಿದ್ದಾರೋ ಎಂದು ಕೇಳುತ್ತಿಲ್ಲ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಜನತೆಯನ್ನು ಬೆಲೆ ಏರಿಕೆಯ ಕಷ್ಟಕ್ಕೆ ದೂಕಿದ್ದೇ ಕೇಂದ್ರ, ರಾಜ್ಯ ಸರ್ಕಾರದ ಸಾಧನೆ, ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಾ ದಿನ ಬಳಕೆ ವಸ್ತುಗಳು ಏರಿಕೆಯಾಗಿ ಸಾಮಾನ್ಯ ಜನ ಜೀವನ ನಡೆಸುವುದು ಕಷ್ಟವಾಗಿದೆ. ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಬಡಜನರ ಕಷ್ಟ ಅರ್ಥವಾಗುತ್ತಿಲ್ಲ, ಆದರೆ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಇಲ್ಲದೆ ಇದ್ದರೂ ಸೋನಿಯಾಗಾಂಧಿ, ರಾಹುಲ್ ಗಾಂದಿ ಸೂಚನೆ ಮೇರೆಗೆ ಬಡಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ರಾಜ್ಯ ಸರ್ಕಾರ ಕೊವಿಡ್ ನಿಯಂತ್ರಣಕ್ಕೆ ತಾಲೂಕಿಗೆ ಕನಿಷ್ಟ ಸಹಕಾರ ನೀಡಿಲ್ಲ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡದ ಸರ್ಕಾರ ನಿರ್ಲಕ್ಷ್ಯದಿಂದಲೇ ಬೀದಿ ಬೀದಿಯಲ್ಲಿ ಜನ ಸಾಯುವಂತಾಯಿತು. ಹೆಣ ಸುಡಲೂ ಕ್ಯೂ ನಿಲ್ಲುವಂತೆ ಮಾಡಿದ್ದೆ ಬಿಜೆಪಿ ಸರ್ಕಾರದ ಸಾಧನೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಒಂದುವರೆ ಸಾವಿರ ಉಚಿತ ಲಸಿಕೆ ನೀಡುವ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದರು.
ಲಸಿಕೆಗಾಗಿ ಹೆಚ್ಚು ಜನ ಸಾಮಾಜಿಕ ಅಂತರ ಕಾಪಾಡದೆ ಜಮಾವಣೆಗೊಂಡರು, 600 ಮಂದಿಗೆ ಉಚಿತ ಲಸಿಕೆ ನೀಡಲಾಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ, ತಾಲೂಕು ಅಧ್ಯಕ್ಷ ರಂಗಣ್ಣಗೌಡ, ವೆಂಕಟರಾಮು, ಮುಖಂಡರಾದ ಆಡಿಟರ್ ನಾಗರಾಜ್, ಶ್ರೀನಿವಾಸ್, ಕೆಂಪೀರೆಗೌಡ, ಬೇಗೂರು ನಾರಾಯಣ, ಪುರಸಭೆ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ, ಪುರಸಭೆ ಸದಸ್ಯರು ಇತರರು ಇದ್ದರು.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಸಿ
ದ್ವಿತೀಯ ಪಿಯು ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ಮುಖ್ಯಘಟ್ಟ, ಹೀಗಾಗಿ ರಾಜ್ಯ ಸರ್ಕಾರ ಅಗತ್ಯ ಮುಂಜಾಗ್ರತೆಯೊಂದಿಗೆ ದ್ವಿತೀಯ ಪಿಯು ಪರೀಕ್ಷೆ ನಡೆಸಬೇಕೆಂದು ಮಾಜಿ ಡಿಸಿಎಂ, ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸೋಮವಾರ ಡಿಕೆಎಸ್ ಟ್ರಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುತ್ತಿರುವುದು ಒಳ್ಳೆ ಬೆಳವಣಿಗೆಯಾದರೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಗತ್ಯ ಎಚ್ಚರ ವಹಿಸಬೇಕು, ದ್ವಿತೀಯ ಪಿಯು ಪರೀಕ್ಷೆಯನ್ನು ಯಾವ ರೀತಿಯಲ್ಲಾದರೂ ಮಾಡಲೇಬೇಕು, ಆನ್ ಲೈನ್ ಮೂಲಕ ಪರೀಕ್ಷೆ ಮಾಡುವುದು ಅಷ್ಟು ಸುರಕ್ಷತೆ ಇರೊಲ್ಲ, ಆಫ್ ಲೈನ್ ಮೂಲಕ ಕಟ್ಟುನಿಟ್ಟಿನ ಅಗತ್ಯ ಮುಂಜಾಗ್ರತೆ ಕ್ರಮ ವಹಿಸಿ ಮಾಡಬೇಕು, ಕೇಂದ್ರ ಸರ್ಕಾರ ರದ್ದು ಮಾಡಿರುವುದರಿಂದ ಬೇರೆ ಬೇರೆ ರಾಜ್ಯ ಸರ್ಕಾರಗಳು ರದ್ದು ಮಾಡಿದೆ, ನಮ್ಮ ರಾಜ್ಯ ಸರ್ಕಾರ ಈಗಾಗಲೆ ಸೂಚನೆ ನೀಡಿದೆ, ಆದರೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಆದೇಶ ರದ್ದುಗೊಳಿಸಿ ದ್ವಿತೀಯ ಪಿಯು ಪರೀಕ್ಷೆ ಮಾಡಬೇಕು ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಿಎಂ ಕೆಳಗಿಳಿಸುವ ಗೊಂದಲದಲ್ಲಿ ಚುನಾವಣೆಗಳು ಬಂದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಲು ಸಿದ್ಧವಾಗಿದೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ವಿಷಯ ಚರ್ಚೆಯಾಗದಂತೆ ತೀರ್ಮಾನಿಸಲಾಗಿದೆ ಎಂದರು.
Comments are closed.