ಇಂಧನ ಬೆಲೆ ಹೆಚ್ಚಳಕ್ಕೆ ಜೆಡಿಎಸ್‌ ಆಕ್ರೋಶ

496

Get real time updates directly on you device, subscribe now.

ತುಮಕೂರು: ಕೇಂದ್ರ ಸರಕಾರ ನಿರಂತರವಾಗಿ ಇಂಧನ ಬೆಲೆಗಳ ಹೆಚ್ಚಳ ಖಂಡಿಸಿ,ಕೊರೊನಾದಿಂದ ಮೃತಪಟ್ಟ ಸಾರ್ವಜನಿಕರ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿ ಜೆಡಿಎಸ್‌ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಜೆಡಿಎಸ್‌ ಪಕ್ಷದ ಅಧ್ಯಕ್ಷ ಆರ್‌.ಸಿ.ಆಂಜನಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಆರ್‌.ಸಿ.ಆಂಜನಪ್ಪ, ಸರಕಾರ ವಿಧಿಸಿದ ಅವೈಜ್ಞಾನಿಕ ಲಾಕ್ ಡೌನ್‌ ನಿಂದಾಗಿ ಲಕ್ಷಾಂತರ ಜನರು ಕೆಲಸ ಕಳೆದುಕೊಂಡು ಬೀದಿ ಪಾಲಾಗಿರುವ ಸಂದರ್ಭಗಳಲ್ಲಿ ಕೇಂದ್ರ ಸರಕಾರ ನಿರಂತರವಾಗಿ ಇಂಧನ ಬೆಲೆಗಳ ಹೆಚ್ಚಳದಿಂದ ಜನಸಾಮಾನ್ಯರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೇ 04 ರಿಂದ ಇದುವರೆಗೆ 24 ಬಾರಿ ತೈಲ ಬೆಲೆ ಹೆಚ್ಚಳ ಮಾಡಿ ಲೀಟರ್‌ ಪೆಟ್ರೋಲ್‌ ಬೆಲೆ 100 ರೂ. ದಾಟುವಂತೆ ಮಾಡಿದ್ದಾರೆ. ಅಲ್ಲದೆ ರಸಗೊಬ್ಬರ ಬೆಲೆ ಹೆಚ್ಚಳವಾಗಿ ಈಗಾಗಲೇ ಕೈ ಸುಟ್ಟು ಕೊಂಡಿರುವ ರೈತ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾನೆ. ಕೇಂದ್ರ ಸರಕಾರ ಹೆಚ್ಚಳ ಮಾಡಿರುವ ಇಂಧನ, ರಸಗೊಬ್ಬರದ ಬೆಲೆ ಕಡಿತ ಮಾಡಬೇಕು ಹಾಗೂ ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಐದು ಲಕ್ಷ ರೂ. ವಿತರಿಸಬೇಕೆಂದು ಆಗ್ರಹಿಸಿದರು.
ಜೆಡಿಎಸ್‌ ಕಾರ್ಯಾಧ್ಯಕ್ಷ ಟಿ.ಆರ್‌.ನಾಗರಾಜು ಮಾತನಾಡಿ, ಕೊರೊನಾದಿಂದ ಮೃತಪಟ್ಟವರಿಗೆ ಪರಿಹಾರ ನೀಡುವಂತೆ ಮನವಿ ಮಾಡಿದರೆ ನಮ್ಮ ಬಳಿ ಹಣವಿಲ್ಲ ಎನ್ನುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಲ್ಲಿ ಶಾಸಕರ ಖರೀದಿಸಲು ಮಾತ್ರ ಹಣವಿದೆ. ಇಂಧನಗಳ ಮೇಲೆ ಹತ್ತಾರು ಬಾರಿ ತೆರಿಗೆ ವಿಧಿಸಿದರು ಯಾವೊಬ್ಬ ಮಂತ್ರಿಯೂ ಮಾತನಾಡುತ್ತಿಲ್ಲ, ತುಮಕೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸರ್ವಾಧಿಕಾರಿಯಂತೆ ವರ್ತಿಸುತಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂಬುದನ್ನು ಸಚಿವರು ಅರ್ಥ ಮಾಡಿಕೊಳ್ಳಲಿ ಎಂದರು.
ಯುವ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಳ್ಳಿಲೋಕೇಶ್‌ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಸ್ವರ್ಗ ಸೃಷ್ಟಿಸಬಹುದು ಎನ್ನುತ್ತಿದ್ದರು, ಇಂದು ಜಿಎಸ್‌ಟಿ ಪಾಲು ಹಂಚಿಕೆ, ಪ್ರಾದೇಶಿಕವಾಗಿ ಹಲವಾರು ತಾರತಮ್ಯ ನಡೆದರು. ಇಲ್ಲಿಯ 25 ಜನ ಸಂಸದರು ತುಟಿ ಪಿಟಕ್‌ ಎನ್ನದೆ ಮೌನಕ್ಕೆ ಶರಣಾಗಿ ರಾಜ್ಯಕ್ಕೆ ಮೋಸ ಮಾಡಿದ್ದಾರೆ. ರಾಜ್ಯದ ಬಿಎಸ್‌ವೈ ನೇತೃತ್ವದ ರಾಜ್ಯ ಸರಕಾರ ತಜ್ಞರ ಎಚ್ಚರಿಕೆ ನಿರ್ಲಕ್ಷಿಸಿದ ಪರಿಣಾಮ ಲಕ್ಷಾಂತರ ಜನರು ಸಾವನ್ನಪ್ಪಿದರು. ಇಂತಹ ಸರಕಾರ ನಡೆಗೆ ಜೆಡಿಎಸ್‌ ಪಕ್ಷದ ಧಿಕ್ಕಾರವಿದೆ ಎಂದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿ ಗಳ ಮೂಲಕ ಮುಖ್ಯಮಂತ್ರಿ ಯವರಿಗೆ ಸಲ್ಲಿಸಿದರು.
ಜೆಡಿಎಸ್‌ ಮಂಚೂಣಿ ಘಟಕಗಳ ಅಧ್ಯಕ್ಷ ರಾದ ಗಂಗಣ್ಣ, ಚಲುವರಾಜು, ತಾಹಿರಾ ಕುಲ್ಸಂ, ಕೃಷ್ಣಮೂರ್ತಿ, ಗಂಗಣ್ಣ, ಗೋವಿಂದರಾಜು, ಕೆಂಪರಾಜು, ಮಂಜುಣ್ಣ, ಲೋಕೇಶ್‌, ಸಿ.ಡಿ.ಜಯಶ್ರೀ, ಮೋಸಿನ್‌, ಪುಷ್ಪ, ಮಮತ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!