ಶಿರಾ, ಮಧುಗಿರಿ ರಸ್ತೆ ಅಗಲೀಕರಣಕ್ಕೆ ಅನುದಾನ- ಕೆ.ಎನ್.ಆರ್‌ ಸಂತಸ

290

Get real time updates directly on you device, subscribe now.

ತುಮಕೂರು: ಶಿರಾ-ಮಧುಗಿರಿ ರಾಷ್ಟ್ರೀಯ ಹೆದ್ದಾರಿ-234 ಅಗಲೀಕರಣಕ್ಕೆ ಕೇಂದ್ರ ಸರ್ಕಾರ 200 ಕೋಟಿ ರೂ. ಗಳಿಗೂ ಹೆಚ್ಚು ಹಣ ಬಿಡುಗಡೆ ಮಾಡಿದ್ದು, ಇದಕ್ಕೆ ಶ್ರಮಿಸಿದ ಲೋಕಸಭಾ ಸದಸ್ಯರಾದ ಜಿ.ಎಸ್‌.ಬಸವರಾಜು ಮತ್ತು ಕೇಂದ್ರ ಸರ್ಕಾರಕ್ಕೆ ಮಧುಗಿರಿ ತಾಲ್ಲೂಕಿನ ಜನತೆ ಪರವಾಗಿ ಅಭಿನಂದಿಸುತ್ತೇನೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕಿನಲ್ಲಿ ಮಾತನಾಡಿದ ಅವರು, ಮಧುಗಿರಿಗೆ ಬೈಪಾಸ್‌ ಮಾಡಿ ಕೆಶಿಪ್‌ ಬೈಪಾಸ್ ಗೆ ಸಂಪರ್ಕ ಮಾಡಬೇಕು, ಶಿರಾ- ಮಧುಗಿರಿ ರಸ್ತೆಯಿಂದ ಪುಟ್ಟೀರೇಶ್ವರ ಸ್ವಾಮಿ ದೇವಸ್ಥಾನದ ಪಕ್ಕದಿಂದ ಈಗಾಗಲೇ ಕೆಎಸ್‌ಆರ್‌ಟಿಸಿ ಪಕ್ಕದಲ್ಲಿರುವ ಕೆಶಿಪ್‌ ಬೈಪಾಸ್‌ಗೆ ಸಂಪರ್ಕ ಮಾಡಿದರೆ ಮಧುಗಿರಿ ಮೂಲಕ ಬರುವ ಭಾರಿ ವಾಹನಗಳ ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳಿದರು.
ಲಸಿಕೆ ಹಾಕಿಸಿ ಪ್ರಾಣ ಉಳಿಸಿ ಅಭಿಯಾನ: ಈಗಾಗಲೇ ಜನರಲ್ಲಿ ಲಸಿಕೆ ಬಗ್ಗೆ ಇರುವ ಅನುಮಾನ ತೊಡೆದು ಹಾಕಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಕೇಂದ್ರದ ಎಐಸಿಸಿ ನನಗೆ ನಿರ್ದೇಶನ ನೀಡಿದ್ದು, ಲಸಿಕೆಯನ್ನು ಹೆಚ್ಚು ಜನರಿಗೆ ಹಾಕಿಸಬೇಕು, ಜೊತೆಗೆ ಕೊರೊನದಿಂದ ಸಾವನ್ನಪ್ಪಿದವರ ನಿಖರವಾದ ಅಂಕಿ ಅಂಶಗಳ ಬಗ್ಗೆ ನಮ್ಮೆಲ್ಲಾ ಕಾರ್ಯಕರ್ತರು, ಮುಖಂಡರು ಸಾವನ್ನಪ್ಪಿದವರ ಮನೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವುದರ ಜೊತೆಗೆ ಅವರ ಮನೆಯ ಸ್ಥಿತಿಗತಿಗಳ ಬಗ್ಗೆ ಪರಾಮರ್ಶೆ ಮಾಡಿ ವರದಿಕೊಡಲು ಸೂಚಿಸಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ನಾವೂ ಕೂಡ ಕಾಂಗ್ರೆಸ್‌ ಪಕ್ಷದ ವತಿಯಿಂದ ಲಸಿಕೆ ಹಾಕಿಸಿ ಪ್ರಾಣ ಉಳಿಸಿ ಎಂಬ ಅಭಿಯಾನ ಮಾಡುತ್ತೇವೆ. ಸರ್ಕಾರಗಳ ಲೆಕ್ಕದಂತೆ ಮಧುಗಿರಿಯಲ್ಲಿ ಕೇವಲ 88 ಮಂದಿ ಮಾತ್ರ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂಬ ವರದಿ ನೀಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಮೊನ್ನೆಯವರೆಗೆ 1,011 ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಹೆಲ್ತ್ ಬುಲೆಟಿನ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಅಂಕಿ ಅಂಶ ನಿಖರತೆ ಇಲ್ಲ, ಇನ್ನೂ ಹೆಚ್ಚಿನ ಜನ ಸಾವನ್ನಪ್ಪಿರಬಹುದು. ಆದ್ದರಿಂದ ಡೆತ್‌ ಆಡಿಟ್‌ ಮಾಡಬೇಕೆಂದು ಒತ್ತಾಯಿಸಿದರು.

Get real time updates directly on you device, subscribe now.

Comments are closed.

error: Content is protected !!