ಸರ್ಕಾರಿ ಹೈಸ್ಕೂಲ್‌ ಉಳಿಸಲು ಹೋರಾಟ

364

Get real time updates directly on you device, subscribe now.

ಗುಬ್ಬಿ: ಪಟ್ಟಣದ ಗುಬ್ಬಿ ಸರ್ಕಾರಿ ಹೈಸ್ಕೂಲನ್ನು ಉಳಿಸುವಂತೆ ಗುಬ್ಬಿ ನಾಗರಿಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಹಲವು ಸಂಘಟನೆಗಳು ಪ್ರತಿಭಟನೆ ಮಾಡಿದ ಘಟನೆ ಸೋಮವಾರ ನಡೆಯಿತು.
ಇದೆ ಸಂದರ್ಭದಲ್ಲಿ ಚನ್ನಬಸವೇಶ್ವರ ಕ್ರೀಡಾ ಸಂಘದ ಕಾರ್ಯದರ್ಶಿ ಶಂಕರ್‌ ಕುಮಾರ್‌ ಮಾತನಾಡಿ, ನೂರಾರು ವರ್ಷಗಳ ಇತಿಹಾಸ, ಐತಿಹಾಸಿಕ ಪರಂಪರೆ ಹೊಂದಿರುವಂತಹ ಈ ಶಾಲೆಯಲ್ಲಿ ಉಪ ಪ್ರಾಂಶುಪಾಲೆ ಸೇರಿದಂತೆ ಸರಿಯಾದ ರೀತಿಯಲ್ಲಿ ಶಿಕ್ಷಕರು ಆಡಳಿತ ವರ್ಗ ಕೆಲಸ ಮಾಡದೆ ಇರುವುದರಿಂದ ಶಾಲೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ, ಹಾಗಾಗಿ ಶಾಲೆ ಉಳಿಸಿ ಅಭಿಯಾನ ಕಾರ್ಯಕ್ರಮ ಮಾಡುತ್ತಿದ್ದೇವೆ. ಇಲ್ಲಿ ಯಾವುದೇ ರಾಜಕೀಯ ಹಾಗೂ ಯಾರನ್ನೂ ವರ್ಗಾವಣೆ ಮಾಡುವಂತೆ ಒತ್ತಾಯ ಇಲ್ಲ, ಆದರೆ ಈ ಶಾಲೆ ಹಿಂದೆ ಇದ್ದ ಗತ ವೈಭವ ಸಾರಬೇಕು ಎಂಬುದು ನಮ್ಮೆಲ್ಲರ ಬಯಕೆ, ಇಲ್ಲಿ ಓದಿರುವಂತಹ ಸಾಕಷ್ಟು ಜನರು ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಹೊಂದಿದ್ದಾರೆ, ಅವರಿಗೆಲ್ಲ ಈ ಶಾಲೆಯ ಮೇಲೆ ಪ್ರೀತಿ ಇದೆ, ಈ ಶಾಲೆಯನ್ನು ಉಳಿಸುವ ಯಾವುದೇ ಕೆಲಸ ಕಾರ್ಯ ಈ ಭಾಗದ ಶಿಕ್ಷಕರಿಂದ ನಡೆಯುತ್ತಿಲ್ಲ, ಹಾಗಾಗಿ ಖಾಸಗಿ ಶಾಲೆಗಳು ನಾಯಿ ಕೊಡೆಯಂತೆ ಎಲ್ಲಾ ಕಡೆಯೂ ಹರಡುತ್ತಿದೆ, ಸರಕಾರಿ ಶಾಲೆ ಉಳಿಸುವಂತಹ ಕೆಲಸ ಇಲ್ಲಿ ನಡೆಯುತ್ತಿಲ್ಲ, ಹಾಗಾಗಿ ಈ ಶಾಲೆ ಉಳಿಸಲೇಬೇಕೆಂದು ಒತ್ತಾಯ ಮಾಡುತ್ತಿದ್ದು, ಇಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ, ಇಲ್ಲಿನ ಸಮಸ್ಯೆ ಬಗೆ ಹರಿಸದೆ ಹೋದರೆ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಒತ್ತಾಯ ಮಾಡಿದರು.
ಮುಖಂಡ ಎಚ್‌.ಡಿ.ಬೈರಪ್ಪ ಮಾತನಾಡಿ ಸರಕಾರಿ ಶಾಲೆಗೆ ಅಗತ್ಯವಾದ ಎಲ್ಲಾ ರೀತಿಯ ಸೌಲಭ್ಯ ಕೂಡ ಸರಕಾರ ನೀಡುತ್ತಿದ್ದರೂ ಇಲ್ಲಿನ ಶಿಕ್ಷಕರಿಗೆ ಆಸಕ್ತಿಯಿಲ್ಲದ ಕಾರಣ ಶಾಲೆ ಅವನತಿಯತ್ತ ಸಾಗುತ್ತಿದೆ, ಈ ಕೂಡಲೇ ಶಾಲೆಯ ಬೆಳವಣಿಗೆಯ ಕಡೆಗೆ ಗಮನಹರಿಸದೆ ಹೋದಲ್ಲಿ ನಾವು ರಸ್ತೆಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಟ್ಟಣ ಪಂಚಾಯ್ತಿ ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ಇಲ್ಲಿ ರಾಜಕೀಯವನ್ನು ಶಿಕ್ಷಕರು ಮಾಡುತ್ತಿರುವ ಪರಿಣಾಮದಿಂದಾಗಿ ಕಾಲೇಜು ಸಂಪೂರ್ಣವಾಗಿ ಹಾಳಾಗುತ್ತಿದೆ, ನೀವು ರಾಜಕೀಯವನ್ನೇ ಮಾಡಬೇಕು ಎಂದು ಭಾವಿಸಿದರೆ ಯಾವುದಾದರೂ ಪಕ್ಷಕ್ಕೆ ಬಂದು ಸೇರಿಕೊಂಡು ಕೆಲಸ ಮಾಡಿ, ಅದನ್ನು ಬಿಟ್ಟು ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡಬೇಡಿ ಎಂದು ಕಿಡಿಕಾರಿದರು.
ಗುಬ್ಬಿ ಹಿತರಕ್ಷಣಾ ಸಮಿತಿಯ ಸಲೀಂ, ಮುಖಂಡರಾದ ಲೋಕೇಶ್‌, ಚಂದನ್‌, ವಿಜಯ್‌, ವೇಣುಗೋಪಾಲ್‌, ನರಸಿಂಹ, ವಿಜಯ್‌ ಕುಮಾರ್‌, ಅರ್ಜುನ್‌, ಮಂಜುನಾಥ್‌ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!