ಪೊಲೀಸರ ಕಾರ್ಯ ವೈಖರಿಗೆ ಜಗದೀಶ್‌ ಕಿಡಿ

556

Get real time updates directly on you device, subscribe now.

ಕುಣಿಗಲ್‌: ಕುಣಿಗಲ್‌ ಪೊಲೀಸರು ಅಧಕ್ಷರಾಗಿದ್ದು, ಪ್ರಭಾವಿ ರಾಜಕಾರಣಿಗಳಿಗೊಂದು ರೀತಿ, ಜನಸಾಮಾನ್ಯರಿಗೆ ಒಂದು ರೀತಿ ಕಾನೂನು ಚಲಾಯಿಸುತ್ತಾ ಪ್ರಭಾವಿ ರಾಜಕಾರಣಿಗಳ ಸೆಕ್ಯೂರಿಟಿ ಗಾರ್ಡ್‌ಗಳಂತೆ ಕೆಲಸ ಮಾಡುತ್ತಿದ್ದಾರೆಂದು ಯುವ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್‌ ಆರೋಪಿಸಿದರು.
ಮಂಗಳವಾರ ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ಶಾಸಕರು ಕೊವಿಡ್‌ ವೀಕೆಂಡ್‌ ಕರ್ಫ್ಯೂ ಉಲ್ಲಂಘಿಸಿ 300 ಮಂದಿ ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಪೊಲೀಸ್‌ ನಿರೀಕ್ಷಕರ ವಿರುದ್ಧವೆ ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಹ ವಕೀಲರಾದ ತಾವೇ ದೂರು ನೀಡಿದ್ದು, ಇದಕ್ಕೆ ಪೊಲೀಸರು, ಶಾಸಕರು ಕರ್ಫ್ಯೂ ಸಮಯದಲ್ಲಿ ಬೆಂಬಲಿಗರೊಂದಿಗೆ ಪ್ರತಿಭಟನೆ ಮಾಡಿದ್ದನ್ನು ಒಪ್ಪಿಕೊಂಡು, ಪ್ರಕರಣ ದಾಖಲು ಮಾಡಲು ನ್ಯಾಯಾಲಯದ ಅನುಮತಿ ಪಡೆಯುತ್ತೇವೆ ಎಂಬ ಹಿಂಬರಹ ನೀಡಿದ್ದಾರೆ. ಇದೆ ಪೊಲೀಸರು ಯಾವುದೋ ವಿಡಿಯೋ ಆಧಾರದ ಮೇಲೆ ಜಿನ್ನಾಗರೆ ಹೊಸಕೆರೆ ದೇವಾಲಯದಲ್ಲಿ ಪೂಜೆ, ಉತ್ಸವ ಮಾಡಿದ್ದಾರೆಂದು ಸಾಂಕ್ರಾಮಿಕ ರೋಗ ಕಾಯಿದೆ ಅಡಿ ಅಮೃತೂರು ಠಾಣೆಯಲ್ಲಿ ಕೇಸ್‌ ಮಾಡಿದ್ದಾರೆ. ಅಮೃತೂರು ಠಾಣೆಗೆ ಒಂದು ಕಾನೂನು, ಕುಣಿಗಲ್‌ ಠಾಣೆಗೆ ಒಂದು ಕಾನೂನು ಇದೆಯೆ. ಶಾಸಕರ ಪ್ರತಿಭಟನೆ ಪ್ರಕರಣದಲ್ಲಿ ಜಿಲ್ಲಾ ಎಸ್ಪಿಯೆ ಖುದ್ದು ಬಂದು ರಾಜಿಸಂಧಾನ ಮಾಡುತ್ತಾರೆ ಎಂದರೆ ಪೊಲೀಸರಿಗೆ ಪ್ರಭಾವಿ ರಾಜಕಾರಣಿಗಳ ಮೇಲೆ ಪ್ರಕರಣ ದಾಖಲು ಮಾಡಲು ತಾಕತ್‌ ಇಲ್ಲದೆ ಅವರ ಮರ್ಜಿಗೆ ಒಳಗಾಗಿದ್ದಾರೆ ಎಂದು ಆರೋಪಿಸಿದರು.
ಇದು ವ್ಯವಸ್ಥೆಯ ಸಂಪೂರ್ಣ ಅವಹೇಳನವಾಗಿದೆ. ಸಾಮಾನ್ಯ ಜನ ಕೊವಿಡ್‌ ಕರ್ಫ್ಯೂ ಉಲ್ಲಂಘಿಸಿದ್ದಾರೆಂದು ಬೈಕ್‌, ವಾಹನ ಹಿಡಿದು, ಅಂಗಡಿಗೆ ನುಗ್ಗಿ ಕೇಸ್‌ ಹಾಕುವ ಪೊಲೀಸರು ಪ್ರಭಾವಿ ರಾಜಕಾರಣಿಗಳಾದ ಶಾಸಕರು ಸ್ವತಹ ವೈದ್ಯರಾಗಿದ್ದುಕೊಂಡು ಕಾನೂನು ಉಲ್ಲಂಘನೆ ಮಾಡಿದ್ದರೂ ಮೌನ ವಹಿಸಿದ್ದಾರೆ. ಪೊಲೀಸರ ಈ ವರ್ತನೆ ಖಂಡಿಸಿ ಡಿವೈಎಸ್ಪಿ, ಸಿಪಿಐ ಅವರ ಮೇಲೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲು ಮಾಡಲಾಗುವುದು. ತಾಲೂಕಿನಲ್ಲಿ ಕಾಂಗ್ರೆಸ್‌, ಬಿಜೆಪಿ ರಾಷ್ಟ್ರೀಯ ಪಕ್ಷಗಳು ಒಂದಾಗಿವೆ. ಬಿಜೆಪಿ ಕಾಂಗ್ರೆಸ್ ನೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಜೆಡಿಎಸ್‌ ಏಕಾಂಗಿ ಹೋರಾಟ ನಡೆಸುತ್ತದೆ ಎಂದರು.
ತಾಲೂಕು ಜೆಡಿಎಸ್‌ ಅಧ್ಯಕ್ಷ ಕೆ.ಎಲ್‌.ಹರೀಶ್‌, ಪುರಸಭೆ ಸದಸ್ಯ ಶ್ರೀನಿವಾಸ, ಮುಖಂಡರಾದ ರಂಗಸ್ವಾಮಿ, ವೈ.ಎಚ್‌.ರಂಗಸ್ವಾಮಿ, ಧನಂಜಯ, ಮನೋಜ್‌, ಮಾರುತಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!