ಎತ್ತಿನಹೊಳೆಯಿಂದ ಜಿಲ್ಲೆಗೆ 1.5 ಟಿಎಂಸಿ ನೀರು: ಶ್ರೀನಿವಾಸ್

277

Get real time updates directly on you device, subscribe now.

ಗುಬ್ಬಿ: ತುಮಕೂರು ಜಿಲ್ಲೆಗೆ ಸಮಗ್ರ ನೀರಾವರಿ ಮಾಡುವಂತಹ ಯೋಜನೆಯನ್ನು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಿದ್ಧತೆ ಮಾಡಲಾಗಿದ್ದು ಎತ್ತಿನಹೊಳೆ ಯೋಜನೆಯಿಂದ 1.5 ಟಿಎಂಸಿ ನೀರು ಜಿಲ್ಲೆಗೆ ಒದಗಲಿದೆ ಎಂದು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ತಿಳಿಸಿದರು
ತಾಲೂಕಿನ ಹಾಗಲವಾಡಿ ಹೋಬಳಿ ಮುಚ್ಚವೀರನಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿ, ಇದರ ಅಡಿಯಲ್ಲಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ನೀರನ್ನು ಹರಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಹೇಮಾವತಿ ನೀರಿನಿಂದ ವಂಚಿತರಾಗಿರುವ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ಮೂಲಕ ನೀರನ್ನು ಹರಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ಮಠಗಂಗಯ್ಯನ ಪಾಳ್ಯ ಕೆರೆಗೆ ಸುಮಾರು 6.5 ಕೋಟಿಯಷ್ಟು ಹಣವನ್ನು ಸರ್ಕಾರ ಬಿಡುಗಡೆ ಮಾಡಿತ್ತು, ಟೆಂಡರ್‌ ಕರೆದು ಕೆಲಸ ಶುರು ಮಾಡುವುದರ ಒಳಗೆ ನಮ್ಮ ಸರ್ಕಾರ ಬಿದ್ದ ಕಾರಣ ಕೆಲಸ ನಿಧಾನವಾಗಿತ್ತು ತದನಂತರ 6 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಅರಣ್ಯದ ಒಳಭಾಗದಲ್ಲಿ ನಾಲೆ ಮಾಡಬೇಕಾಗಿರುವುದರಿಂದ ಅನುಮತಿಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಅಲ್ಲಿಂದ ಬರುವುದು ಸುಮಾರು ಐದಾರು ವರ್ಷ ಆಗುವುದರಿಂದ ತಡವಾಗುತ್ತದೆ. ಹಾಗಾಗಿ ರೈತರ ಉಳಿವಿಗಾಗಿ ಕೆರೆಯನ್ನು ಬೇಗನೆ ತುಂಬಿಸುವ ಕಾರಣದಿಂದಾಗಿ ಪೈಪ್‌ಲೈನ್‌ ಮೂಲಕ ಈ ಭಾಗಕ್ಕೆ ನೀರನ್ನು ಹರಿಸುವ ಯೋಜನೆ ಮಾಡಲಾಗುತ್ತಿದೆ ಎಂದರು.
ಇನ್ನೂ ಹಾಗಲವಾಡಿ ಕೆರೆಗೆ ಹೇಮಾವತಿಯಿಂದ 30 ಎಂಸಿಎಫ್‌ಟಿ ನೀರನ್ನು ಹರಿಸಲು ಯೋಜನೆ ಮಾಡಲಾಗಿದೆ ಹಾಗಾಗಿ ಇದರಿಂದ ಶೇ.50 ಕೂಡ ಕೆರೆ ತುಂಬಿಸಲು ಸಾಧ್ಯವಿಲ್ಲ, ಹಾಗಾಗಿ ಎತ್ತಿನ ಹೊಳೆಯ ಮೂಲಕ ನೀರನ್ನು ಹರಿಸಿದಾಗ ಶೇ.70 ರಷ್ಟು ನೀರು ಹಾಗಲವಾಡಿ ಕೆರೆಗೆ ಹರಿಯುತ್ತದೆ ಎಂದರು.
ಈ ಭಾಗದ ರಸ್ತೆಗಳ ನಿರ್ಮಾಣಕ್ಕೆ ಈ ವರ್ಷ ಕೂಡಾ ಸುಮಾರು 7 ಕೋಟಿಯಷ್ಟು ಹಣ ಹಾಕಲಾಗಿದ್ದು ಎಲ್ಲಾ ಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಕರಿಯಮ್ಮ ರಮೇಶ್‌, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಟಿ.ರಾಜು, ಆಶಾ, ಬಸವರಾಜು, ಶಂಕುತಲಾ, ಮಂಜುಳ, ಮುಖಂಡರಾದ ರಂಗಸ್ವಾಮಯ್ಯ, ನಟರಾಜು ಕರಿಬಸವಯ್ಯ, ಲಕ್ಷಣ್ಣಪ್ಪ, ನಲ್ಲೂರು ಸೋಮಣ್ಣ, ದೇವರಾಜು, ಬಸವರಾಜು, ಪಿಡಿಓ ರಾಜೇಂದ್ರ ಪ್ರಸಾದ್‌, ಇಂಜಿನಿಯರ್‌ ಗೋಪಿನಾಥ್‌ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!