ತುಮಕೂರು ಅಭಿವೃದ್ಧಿಗೆ 200 ಕೋಟಿ ನೀಡಿ: ಪರಂ

190

Get real time updates directly on you device, subscribe now.

ತುಮಕೂರು: ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲೇ ಇರುವ ತುಮಕೂರು ಅಭಿವೃದ್ಧಿ ಬಗ್ಗೆ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿರುವ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೂಡಲೇ ನಗರದ ಸರ್ವತೋಮುಖ ಅಭಿವೃದ್ಧಿ ಕನಿಷ್ಠ 200 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕರ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ತುಮಕೂರಿನ ಅಭಿವೃದ್ಧಿಗೆ 125 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿತ್ತು. ಆ ಅನುದಾನ ಬಿಡುಗಡೆ ಮಾಡುವಲ್ಲೂ ಬಿಜೆಪಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ದೂರಿದರು.
ತುಮಕೂರಿನ ವಸಂತ ನರಸಾಪುರದಲ್ಲಿ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಕೈಗಾರಿಕಾ ಹಬ್‌ ನಿರ್ಮಾಣವಾಗುತ್ತಿದೆ. ಈ ಕೈಗಾರಿಕಾ ಕಾರಿಡಾರ್ ಗೆ ಅಗತ್ಯ ಇರುವ ರಸ್ತೆ, ಚರಂಡಿ, ನೀರು ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಹಾಗಾಗಿ ತುಮಕೂರಿನ ಪ್ರಗತಿ ಸರ್ಕಾರದ ಆದ್ಯ ಕರ್ತವ್ಯ ಇದನ್ನು ಗಮನದಲ್ಲಿಟ್ಟುಕೊಂಡು 200 ಕೋಟಿ ರೂ. ವಿಶೇಷ ಅನುದಾನ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ನಾನು ಸಚಿವನಾಗಿದ್ದ ಸಂದರ್ಭದಲ್ಲಿ ನಗರದ ವಿವಿಧೆಡೆ ಅಭಿವೃದ್ಧಿ ಕಾರ್ಯಗಳಿಗೆ ಅಡಿಗಲ್ಲು ಹಾಕಿದ್ದೆ. ಆದರೆ ಅಂದು ಹಾಕಿದ್ದ ಅಡಿಗಲ್ಲು ಕಾಮಗಾರಿಗಳು 3 ವರ್ಷವಾದರೂ ಇನ್ನು ಪೂರ್ಣಗೊಂಡಿಲ್ಲ. ಹೊಸ ಸರ್ಕಾರ ಬಂದು 2 ವರ್ಷ ಕಳೆದಿದೆ. ಆ ಕೆಲಸ ಕಾರ್ಯಗಳು ಇನ್ನೂ ಆಮೆಗತಿಯಲ್ಲೆ ಸಾಗುತ್ತಿವೆ ಎಂದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣ, ಮಾರುಕಟ್ಟೆ ಪ್ರಾಂಗಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಗುಣಮಟ್ಟದಿಂದ ನಡೆಯಬೇಕಿದೆ. ನಗರದ ವಿವಿಧೆಡೆ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ದೂರು ವ್ಯಾಪಕವಾಗಿ ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ತಾವು, ವಿರೋಧ ಪಕ್ಷದ ನಾಯಕರು, ಜೆಡಿಎಸ್‌ ಪಕ್ಷದ ಶಾಸಕರು, ಮಾಜಿ ಶಾಸಕರು ಎಲ್ಲರೂ ಒಂದು ನಗರ ಪ್ರದಕ್ಷಿಣೆ ನಡೆಸಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸಲಾಗುವುದು ಎಂದರು.
ವಿರೋಧ ಪಕ್ಷ ಎಂದರೆ ಬರೀ ಟೀಕೆ ಟಿಪ್ಪಣಿ ಮಾಡುವುದೇ ಕೆಲಸವಲ್ಲ, ನಗರದ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುವಂತೆ ಉತ್ತಮವಾದ ಸಲಹೆ- ಸಹಕಾರ ಕೊಡುವ ನಿಟ್ಟಿನಲ್ಲಿ ಪಾಲಿಕೆಯ ವಿರೋಧ ಪಕ್ಷದ ನಾಯಕರು ಹಾಗೂ ಸದಸ್ಯರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಮಾತನಾಡಿ, ಪಾಲಿಕೆಯ ವಿರೋಧ ಪಕ್ಷದ ನಾಯಕರನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷಗಳು ಸೇರಿ ಆಯ್ಕೆ ಮಾಡಿದ್ದು, ವಿಪಕ್ಷ ನಾಯಕ ಕುಮಾರ್‌ ಅವರು ನಗರದ ಅಭಿವೃದ್ಧಿಗೆ ಪೂರಕವಾಗಿ ಮೇಯರ್‌ ಅವರಿಗೆ ಸಲಹೆ- ಸಹಕಾರ ನೀಡುತ್ತಾ ಕೆಲಸ ಮಾಡಲಿ ಎಂದರು.
ನೂತನ ವಿಪಕ್ಷ ನಾಯಕ ಜೆ.ಕುಮಾರ್‌ ಮಾತನಾಡಿ, ವಿರೋಧ ಪಕ್ಷ ಎಂದರೆ ಕೇವಲ ವಿರೋಧ ಮಾಡುವುದಲ್ಲ, ನಗರದ ಜನತೆಗೆ ಅಗತ್ಯ ಇರುವ ಸೌಲಭ್ಯ ಕಲ್ಪಿಸುವುದರ ಜತೆಗೆ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ನನ್ನ ಜವಾಬ್ದಾರಿ ಹೆಚ್ಚಾಗಿದೆ, ಮುಂದಿನ ದಿನಗಳಲ್ಲಿ ನಗರದ 35 ವಾರ್ಡ್ ಗಳ ಸಮಗ್ರ ಅಭಿವೃದ್ಧಿಗೆ ಆಡಳಿತ ಪಕ್ಷದೊಂದಿಗೆ ಕೈ ಜೋಡಿಸಿ ಸಕಾರಾತ್ಮಕವಾಗಿ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್‌.ಷಫಿಅಹಮದ್‌, ಡಾ.ರಫಿಕ್ ಅಹಮದ್‌, ಮೇಯರ್‌ ಬಿ.ಜಿ. ಕೃಷ್ಣಪ್ಪ, ಮಾಜಿ ಉಪಮೇಯರ್‌ ರೂಪಾ ಶೆಟ್ಟಳ್ಳಯ್ಯ, ಪಾಲಿಕೆ ಸದಸ್ಯರಾದ ನಯಾಜ್‌ ಅಹಮದ್‌, ಮಂಜುನಾಥ್‌ ಗೌಡ, ಪಾಲಿಕೆ ಆಯುಕ್ತೆ ರೇಣುಕಾ, ಜಕ್ರಿಯಾ, ಮೆಹಬೂಬ್‌ ಪಾಷ, ಬೆಳ್ಳಿ ಲೋಕೇಶ್‌, ಇಸ್ಮಾಯಿಲ್‌, ರವಿಗೌಡ, ಭೈರವ ಗಿರೀಶ್‌ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!