ಮಧುಗಿರಿ: ಯಾವುದೇ ನದಿ ಮೂಲಗಳಿಲ್ಲದ ಬರಡು ನಾಡಿನಲ್ಲಿ ನಮ್ಮ ಪೂರ್ವಜರು ನಮಗಾಗಿ ಉಳಿಸಿ ಹೋದ ನೈಸರ್ಗಿಕ ಜಲಮೂಲಗಳಾದ ಕಲ್ಯಾಣಿ, ಕಟ್ಟೆಗಳನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.
ಗ್ರಾಮೀಣ ಭಾಗದಲ್ಲಿರುವ ಅಲ್ಲೊಂದು ಇಲ್ಲೊಂದು ಎಂಬಂತೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿದ್ದ ಕಲ್ಯಾಣಿಗಳು ಇಂದು ಕಣ್ಮರೆಯಾಗುತ್ತಿರುವ ದಿನಗಳಲ್ಲಿ ಅವುಗಳನ್ನು ಸಂರಕ್ಷಿಸಿ ಜೀವ ಸೆಲೆಯಾಗಿಸಿ ಸದ್ವಿನಿಯೋಗ ಪಡಿಸಿಕೊಳ್ಳಬೇಕು, ಅಂತಹ ಒಂದೊಳ್ಳೆ ಕಾರ್ಯ ಮಧುಗಿರಿ ತಾಲೂಕಿನಲ್ಲಿ ನಡೆಯುತ್ತಿದ್ದು ಈ ಸಾರ್ಥಕ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ತಾಲೂಕಿನ ಹೊಸಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಗೊಲ್ಲರಹಟ್ಟಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಠದ ಕಟ್ಟೆ ಹತ್ತಿರ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ ಮುಗಿದಿದ್ದು, ನರೇಗಾ ಯೋಜನೆ ಮಾಡಿದ್ದಕ್ಕೂ ಸಾರ್ಥಕ ಎನಿಸಿದೆ.
ಹೊಸಕೆರೆ ಗ್ರಾಪಂ ಪಿಡಿಒ ಎಂ.ಎನ್.ಶಿವಕುಮಾರ್ ಅವರು ಒಂದಷ್ಟು ಮುತುವರ್ಜಿ ವಹಿಸಿ ಕಲ್ಯಾಣಿಗಳಿಗೆ ಹೊಸ ರೂಪು ನೀಡುವ ಕಾರ್ಯ ಮಾಡುತ್ತಿದ್ದಾರೆ, ಪೂರ್ವಜರ ಮುಂದಾಲೋಚನೆಯ ಪ್ರತೀಕವಾಗಿದ್ದ ಕಲ್ಯಾಣಿಗಳು ಇಂದು ಹೂಳು ತುಂಬಿಕೊಂಡು ಕಣ್ಮೆರೆಯಾಗುತ್ತಿವೆ, ಎಷ್ಟೋ ಕಡೆ ಕಲ್ಯಾಣಿಗಳಿದ್ದರೂ ಕಸ, ತ್ಯಾಜ್ಯ ತುಂಬಿಕೊಂಡಿರುವುದನ್ನು ಕಾಣುತ್ತಿದ್ದೇವೆ, ಇಂಥ ಸಮಯದಲ್ಲಿ ಪಿಡಿಒ ಎಂ.ಎನ್.ಶಿವಕುಮಾರ್ ಕಲ್ಯಾಣಿಗಳನ್ನು ಉಳಿಸಿ ಅವು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರಮಿಸಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಮೆಚ್ಚುವ ವಿಷಯ.
ಮಾತು ಬರುವ ಮನುಷ್ಯ ಕೇಳಿ ಪಡೆಯುತ್ತಾನೆ, ಮನುಷ್ಯರಾದಿಯಾಗಿ ಮೂಕ ಪ್ರಾಣಿ, ಪಕ್ಷಿಗಳು ಬಾಯಾರಿದಾಗ ದಾಹ ನೀಗಿಸಲು ಹಿರಿಯರು ಹಿಂದಿನ ಕಾಲದಲ್ಲಿ ಕಷ್ಟಪಟ್ಟು ನಿರ್ಮಿಸಿದ ನೂರಾರು ಕಲ್ಯಾಣಿಗಳು ಪಾಳು ಬಿದ್ದಿದ್ದು, ನೀರಿನ ಆಸರೆಯಾದ ನೈಸರ್ಗಿಕ ಜಲ ಮೂಲಗಳಿಗೆ ಇಂತಹ ಕಾಮಗಾರಿ ಮೂಲಕ ಇನ್ನಾದರು ಕಾಯಕಲ್ಪ ದೊರೆತು ಅವುಗಳ ಸಂರಕ್ಷಣೆಯಾಗಿ ಮುಂದಿನ ತಲೆ ಮಾರುಗಳಿಗೂ ಅದರ ಉಪಯೋಗ ಆಗಬೇಕು, ಸರ್ಕಾರಗಳು ಇನ್ನೂ ಹೆಚ್ಚಿನ ಸಹಕಾರ ನೀಡಿ ನಮ್ಮ ಪರಿಸರ ರಕ್ಷಣೆಯಾಗಲಿ ಎಂಬುದು ಎಲ್ಲರ ಆಶಯ.
ನೈಸರ್ಗಿಕ ಜಲಮೂಲಗಳನ್ನು ರಕ್ಷಿಸಿದರೆ ಎಲ್ಲರಿಗೂ ಉಪಯೋಗವಾಗುತ್ತದೆ. ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ 1 ಕಲ್ಯಾಣಿ ಯ ಅಭಿವೃದ್ಧಿ ಕಾಮಗಾರಿ ಮುಗಿದಿದ್ದು, ಉಳಿದ 3 ಕಲ್ಯಾಣಿಗಳ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮೀಣ ಭಾಗದಲ್ಲಿ ಇದರಿಂದ ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ.
ಎಂ.ಎನ್.ಶಿವಕುಮಾರ್, ಪಿಡಿಒ, ಹೊಸಕೆರೆ ಗ್ರಾಪಂ.
ನರೇಗಾ ಯೋಜನೆಯಡಿಯಲ್ಲಿ ಕಟ್ಟೆ ಕಲ್ಯಾಣಿ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಕೃಷಿ ಹೊಂಡ, ಬದು ನಿರ್ಮಾಣ ಕಾಮಗಾರಿ ಮಾಡುವುದರಿಂದ ಜಮೀನುಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚುವುದಲ್ಲದೆ ಪ್ರಾಣಿ ಪಕ್ಷಿಗಳಿಗೆ ನೀರಿನ ಅಭಾವ ತಪ್ಪುತ್ತದೆ, ಸಾರ್ವಜನಿಕ ರು ಯೋಜನೆ ಸದುಪಯೋಗ ಪಡಿಸಿಕೊಳ್ಳಲಿ.
-ದೊಡ್ಡಸಿದ್ದಪ್ಪ, ತಾಪಂ ಇಒ, ಮಧುಗಿರಿ.
Comments are closed.