ವೈದ್ಯರು ನಿಸ್ವಾರ್ಥ ಸೇವೆ ಮಾಡಲಿ: ಸುರೇಶ್ ಬಾಬು

424

Get real time updates directly on you device, subscribe now.

ತುಮಕೂರು: ವೈದ್ಯರು ನಿಸ್ವಾರ್ಥ ಸೇವೆಯನ್ನು ಮೈಗೂಡಿಸಿಕೊಂಡು ಸೇವೆ ಸಲ್ಲಿಸುವ ಕಾರ್ಯ ಮಾಡಬೇಕೆಂದು ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಸುರೇಶ್ ಬಾಬು ಸಲಹೆ ನೀಡಿದರು.
ನಗರದ ಜಿಲ್ಲಾಸ್ಪತ್ರೆಯ ಆಡಿಟೋರಿಯಂನಲ್ಲಿ ಜಿಲ್ಲಾಸ್ಪತ್ರೆಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಕೋವಿಡ್‌ ಹಿನ್ನಲೆಯಲ್ಲಿ ಸರಳವಾಗಿ ಹಮ್ಮಿಕೊಂಡಿದ್ದ ವಿವಿಧ 35 ತಜ್ಞ ವೈದ್ಯರನ್ನು ಸನ್ಮಾನಿಸಿ ಮಾತನಾಡಿ, ಕಳೆದ ವರ್ಷದಲ್ಲಿ ಕೋವಿಡ್‌ ಮಹಾಮಾರಿ ದೇಶದಲ್ಲಿ ಜನರ ಪ್ರಾಣ ಹಿಂಡುತ್ತಿದ್ದು, ಜನರ ಪ್ರಾಣ ರಕ್ಷಣೆಗೆ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ಕೋವಿಡ್‌ ನಿಯಂತ್ರಣಕ್ಕಾಗಿ ವೈದ್ಯರು ತಮ್ಮ ಕುಟುಂಬವನ್ನೂ ಲೆಕ್ಕಿಸದೆ ದಿನದ 24 ಗಂಟೆಗಳ ಕಾಲ ಸೋಂಕಿತರ ಪ್ರಾಣ ಉಳಿಸಲು ಸಾಕಷ್ಟು ಶ್ರಮಿಸುತ್ತಿದ್ದು, ಇಂತಹ ಸೇವೆ ಮಾಡುತ್ತಿರುವ ವೈದ್ಯರಿಗೆ ನಿಜವಾಗಿಯೂ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.
ವೈದ್ಯರು ಸೋಂಕಿತರ ಆರೋಗ್ಯರಕ್ಷಣೆಗೆ ನಿಂತಿದ್ದು, ತಮ್ಮ ಕುಟುಂಬವನ್ನೂ ಅದೇ ರೀತಿ ರಕ್ಷಣೆ ಮಾಡಿಕೊಂಡು ವೈದ್ಯ ವೃತ್ತಿ ಮಾಡಬೇಕಿದೆ. ಇತ್ತೀಚೆಗೆ ತರಬೇತಿ ಮುಗಿಸಿ ಹೊಸ ವೈದ್ಯರಾಗಿ ಆಗಮಿಸಿರುವ ವೈದ್ಯರು ಹೊಸ ಸಿದ್ಧಾಂತ, ಆದರ್ಶಗಳನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಬಿ.ಸಿ.ರಾಯ್‌ ಅವರ ನೆನಪಿನಲ್ಲಿ ವೈದ್ಯರ ದಿನಾಚರಣೆ ಆಚರಿಸಲಾಗುತ್ತಿದ್ದು, ಬಿ.ಸಿ.ರಾಯ್‌ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಗರ್ಭಿಣಿ ಮಹಿಳೆಯೋರ್ವರು ಹೆರಿಗೆ ನೋವಿನಿಂದ ಬಳಲುತ್ತಿದ್ದಾರೆ ಎಂದು ಬಿ.ಸಿ.ರಾಯ್‌ ಅವರಿಗೆ ದೂರವಾಣಿ ಕರೆ ಬಂದಾಗ ತಕ್ಷಣ ಅವರು 8 ಕಿ.ಮೀ ವರೆಗೂ ಸೈಕಲ್‌ ತುಳಿದುಕೊಂಡು ಹೋಗಿ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಇಂತಹವರ ಆದರ್ಶಗಳನ್ನು ಇಂದಿನ ಯುವ ವೈದ್ಯರು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬಿ.ಸಿ.ರಾಯ್‌ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲೂ ಸಹ ತಮ್ಮ ವೈದ್ಯ ವೃತ್ತಿಯನ್ನು ಮರೆಯಲಿಲ್ಲ, ಪ್ರತಿದಿನ ಎರಡು ಗಂಟೆಗಳ ಕಾಲ ವೈದ್ಯವೃತ್ತಿ ನಿರ್ವಹಿಸುತ್ತಿದ್ದರು ಎಂದು ಸ್ಮರಿಸಿದರು.
ಆರ್ ಎಂ ಒ ಡಾ.ವೀಣಾ ಮಾತನಾಡಿ, ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಿಸಲಾಗುತ್ತಿದೆ. ಕೋವಿಡ್‌ ಹಿನ್ನಲೆಯಲ್ಲಿ ವಿಜೃಂಭಣೆಯಿಂದ ಆಚರಿಸದೆ ಸರಳವಾಗಿ ಆಚರಿಸಲಾಗುತ್ತಿದೆ. ವೈದ್ಯರು ಹಗಲಿರುಳು ಕೆಲಸ ನಿರ್ವಹಿಸಿ ಒತ್ತಡದಲ್ಲಿರುತ್ತಾರೆ. ಆದ್ದರಿಂದ ಜುಲೈ 1 ರಂದು ಒತ್ತಡದಿಂದ ಹೊರ ಬರಲು ವೈದ್ಯರ ದಿನಾಚರಣೆ ಮೂಲಕ ಅವರಿಗೆ ಹೊಸ ಹುರುಪು ತುಂಬುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕೋವಿಡ್‌ ಸಂದರ್ಭದಲ್ಲಿ ವೈದ್ಯರು ಕಷ್ಟಪಟ್ಟು ಕೆಲಸ ನಿರ್ವಹಿಸುತ್ತಿರುತ್ತಾರೆ. ಗುತ್ತಿಗೆ ವೈದ್ಯರಿಂದ ಹಿಡಿದು ಸರ್ಕಾರಿ ವೈದ್ಯರವರೆಗೂ ಎಲ್ಲರೂ ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಆದ್ದರಿಂದ ವೈದ್ಯರು ಯಾವುದೇ ಒತ್ತಡಕ್ಕೆ ಒಳಗಾಗದೇ ತಮ್ಮ ಸೇವೆ ಸಲ್ಲಿಸಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ 35 ತಜ್ಞ ವೈದ್ಯರು ಹಾಗೂ ವೈದ್ಯರ ಸೇವೆ ಗುರುತಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ನೇತ್ರತಜ್ಞರಾದ ಡಾ.ದಿನೇಶ್‌, ಡಾ.ಮಂಜುನಾಥ್‌, ಮಕ್ಕಳ ತಜ್ಞೆ ಡಾ.ಮುಕ್ತಾಂಬ, ಡಾ.ಭಾನುಪ್ರಕಾಶ್‌, ಡಾ.ಹಂಸ, ಡಾ.ರೇಣುಕೇಶ್‌, ಡಾ.ದಾರುಕ್‌, ಯಶವಂತ್‌, ಡಾ.ರಮೇಶ್‌ ಸೇರಿದಂತೆ ಇತರೆ ವೈದ್ಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!