ಹೊಸ ಅನ್ವೇಷಣೆಗೆ ಯುವ ಪ್ರತಿಭೆಗಳಿಗೆ ಅವಕಾಶ

ಇನ್‌ಕ್ಯುಬೇಷನ್‌ ಸೆಂಟರ್‌ ಕಾರ್ಯರೂಪಕ್ಕೆ ತರಲು ಜಿಲ್ಲಾಧಿಕಾರಿ ಸೂಚನೆ

349

Get real time updates directly on you device, subscribe now.

ತುಮಕೂರು: ಐಟಿ ಬಿಟಿ ಮಾತ್ರವಲ್ಲದೆ ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಹೊಸ ಅನ್ವೇಷಣೆಗಾಗಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಲು ಇನ್‌ಕ್ಯುಬೇಷನ್‌ ಸೆಂಟರ್‌ ಕಾರ್ಯರೂಪಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಇನ್‌ಕ್ಯುಬೇಷನ್‌ ಸೆಂಟರ್‌ ಚಟುವಟಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಮಾರ್ಟ್‌ಸಿಟಿ ಲಿಮಿಟೆಡ್‌ನಿಂದ ನಿರ್ಮಿಸಲಾಗುತ್ತಿರುವ ಗ್ರಂಥಾಲಯ ಹಾಗೂ ಇನ್‌ಕ್ಯುಬೇಷನ್‌ ಕೇಂದ್ರವನ್ನು ಶೀಘ್ರ ಕಾರ್ಯರೂಪಕ್ಕೆ ತರಬೇಕೆಂದು ನಿರ್ದೇಶಿಸಿದರು.
ಗ್ರಂಥಾಲಯ ಮತ್ತು ಇನ್‌ಕ್ಯುಬೇಷನ್‌ ಸೆಂಟರ್ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಉಪ ಸಮಿತಿ ರಚಿಸಿ ಸಮಿತಿಯ ನಿರ್ದೇಶನದಂತೆ ಕಾರ್ಯರೂಪಕ್ಕೆ ತರಬೇಕು. ಗ್ರಂಥಾಲಯದಲ್ಲಿ ಸಂಬಂಧಿಸಿದ ಇಲಾಖೆಗಳೊಡನೆ ಸಮನ್ವಯ ಸಾಧಿಸಿ ಐಎಎಸ್‌, ಕೆಎಎಸ್‌ ಸೇರಿದಂತೆ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಮೆರಿಟ್‌ ಆಧಾರದ ಮೇಲೆ ಜಿಲ್ಲಾ ವ್ಯಾಪ್ತಿಯ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಕ್ರಮ ವಹಿಸಿಬೇಕು. ಅಂತೆಯೇ ವಿವಿಧ ಉದ್ಯೋಗಗಳಿಗೆ ಸಂಬಂಧಿಸಿದಂತೆಯೂ ತರಬೇತಿ ನೀಡಲು ಕ್ರಮ ಕೈಗೊಂಡು ಎಲ್ಲಾ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಂಡು ಬಳಿಕ ಕಾರ್ಯರೂಪಕ್ಕೆ ತರಬೇಕೆಂದು ಸೂಚಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮಾತನಾಡಿ, ಸ್ಮಾರ್ಟ್‌ ಸಿಟಿಯಿಂದ ನಿರ್ಮಿಸಲಾಗುತ್ತಿರುವ ಗ್ರಂಥಾಲಯ ಮತ್ತು ಇನ್‌ಕ್ಯುಬೇಷನ್ ಸೆಂಟರ್‌ನಲ್ಲಿ ವಿವಿಧ ತರಬೇತಿ ನೀಡುವುದರೊಂದಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡಲು ವ್ಯವಸ್ಥೆ ಮಾಡಬೇಕು. ಉತ್ತಮ ಕೋಚಿಂಗ್‌ ಸೆಂಟರ್‌ಗಳನ್ನು ಟೈಅಪ್‌ ಮಾಡಿಕೊಂಡು ತರಬೇತಿ ನೀಡಬೇಕು. ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಮಾತ್ರವಲ್ಲದೆ ಎಲ್ಲ ವಿದ್ಯಾರ್ಥಿಗಳಿಗೂ ಇದರ ಸದುಪಯೋಗವಾಗುವ ನಿಟ್ಟಿನಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದು ನಿರ್ದೇಶಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಮಾತನಾಡಿ, ಜಿಲ್ಲೆಯಲ್ಲಿರುವ ಕೈಗಾರಿಕೆಗಳ ಬಗ್ಗೆ ಅಧ್ಯಯನ ಮಾಡಿ ಬಳಿಕ ಹೆಚ್ಚು ಉದ್ಯೋಗವಕಾಶ ದೊರೆಯುವಂತಹ ಉದ್ಯೋಗಕ್ಕೆ ಸಂಬಂಧಿಸಿದ ತರಬೇತಿ ನೀಡಲು ಕ್ರಮ ವಹಿಸಬೇಕೆಂದು ತಿಳಿಸಿದರು.
ಜಿಲ್ಲಾ ಉದ್ಯೋಗಾಧಿಕಾರಿ ಕವಿತಾ ಶ್ರೀನಿವಾಸ್‌ ಮಾತನಾಡಿ, ತರಬೇತಿ ನೀಡುವ ಬಗ್ಗೆ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಅಜಯ್‌, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಸೇರಿದಂತೆ ವಿವಿಧ ಕಾಲೇಜುಗಳ ಮುಖ್ಯಸ್ಥರು ಮತ್ತು ಪ್ರಾಂಶುಪಾಲರು ಇದ್ದರು.

Get real time updates directly on you device, subscribe now.

Comments are closed.

error: Content is protected !!