ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕು ಸಾಧ್ಯ: ಎಸ್‌.ಆರ್‌.ಗೌಡ

354

Get real time updates directly on you device, subscribe now.

ಶಿರಾ: ಹೈನುಗಾರಿಕೆಯಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಯಾಗುವುದರ ಜೊತೆಗೆ ಸ್ವಾವಲಂಬನೆ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯ ರೇಷ್ಮೆ ಉದ್ಯಮಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್‌.ಆರ್‌.ಗೌಡ ಹೇಳಿದರು.
ತಾಲ್ಲೂಕಿನ ಕುಂಟೇಗೌಡನಹಳ್ಳಿ ಗ್ರಾಮದಲ್ಲಿ 122ನೇ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿ, ತುಮಕೂರು ಹಾಲು ಒಕ್ಕೂಟದಿಂದ ಕೋವಿಡ್‌ನಿಂದ ಮೃತಪಟ್ಟ ಹಾಲು ಉತ್ಪಾದಕರಿಗೆ 1 ಲಕ್ಷ ರೂ. ಪರಿಹಾರ, ರಾಸುಗಳು ಮೃತಪಟ್ಟರೆ 50 ಸಾವಿರ ರೂ. ಪರಿಹಾರ ನೀಡಲಾಗುವುದು. ಇಂಜಿನಿಯರ್‌, ಎಂಬಿಬಿಎಸ್‌, ಬಿಎಸ್‌ಸಿ ಎಜಿ, ಎಂಎಸ್‌ಸಿ ಎಜಿ ಒದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ರೈತರು ಹೈನುಗಾರಿಕೆಗೆ ಹೆಚ್ಚು ಒತ್ತು ಕೊಟ್ಟರೆ ಅದರಿಂದ ಹೆಚ್ಚು ಲಾಭ ಪಡೆಯಲು ಸಾಧ್ಯ, ಹಾಲು ಉತ್ಪಾದಕರಿಗೆ ವೈದ್ಯಕೀಯ ವೆಚ್ಚವನ್ನು ಒಕ್ಕೂಟ ಭರಿಸುತ್ತಿದೆ. ಹಾಲು ಉತ್ಪಾದಕರ ಹುಲ್ಲಿನ ಬಣವೆಗೆ ಬೆಂಕಿ ಬಿದ್ದರೆ ಅದಕ್ಕೂ ಪರಿಹಾರ ನೀಡಲಾಗುವುದು. ಮೇವಿನ ಬೀಜಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ. ರಬ್ಬರ್‌ ಮ್ಯಾಟ್‌, ಹುಲ್ಲು ಕತ್ತರಿಸುವ ಯಂತ್ರಗಳನ್ನೂ ಸಬ್ಸಿಡಿ ದರದಲ್ಲಿ ನೀಡಲಾಗುವುದು. ಈ ರೀತಿ ಹಾಲು ಉತ್ಪಾದಕರಿಗೆ ತುಮಕೂರು ಹಾಲು ಒಕ್ಕೂಟದಿಂದ ಸಾಕಷ್ಟು ಸೌಲಭ್ಯ ಒದಗಿಸಲಾಗುತ್ತಿದೆ. ಆದ್ದರಿಂದ ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡುವ ಮೂಲಕ ಒಕ್ಕೂಟದ ಅಭಿವೃದ್ಧಿಗೆ ಕೈಜೋಡಿಸಿ ಎಂದರು.
ಕೋವಿಡ್‌ ಸಮಯದಲ್ಲಿ ತುಮಕೂರು ಹಾಲು ಒಕ್ಕೂಟಕ್ಕೆ ನೀರಿಕ್ಷೆ ಮೀರಿ ಹಾಲು ಪೂರೈಕೆಯಾಗಿದ್ದು, ರೈತರಿಗೆ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ಒಕ್ಕೂಟವು ಹಾಲನ್ನು ರೈತರಿಂದ ಪ್ರತಿದಿನ ಹಾಲು ಖರೀದಿ ಮಾಡಲಾಗಿದೆ. ತುಮಕೂರು ಹಾಲು ಒಕ್ಕೂಟದ ಸಿಬ್ಬಂದಿಗಳು ಅವಿರತವಾಗಿ ದುಡಿದಿದ್ದಾರೆ. ಹಾಲು ಉತ್ಪಾದಕರು ಹಾಗೂ ಒಕ್ಕೂಟದ ಸಂಪರ್ಕ ಸೇತುವೆಯಾಗಿ ಕಾರ್ಯದರ್ಶಿಗಳು ತಮ್ಮ ತಮ್ಮ ಗ್ರಾಮಗಳಲ್ಲಿ ಕೆಲಸ ನಿರ್ವಹಣೆ ಮಾಡಿದ್ದಾರೆ. ಅವರ ಸೇವೆಯ ಫಲವಾಗಿ ಇಂದು ಜಿಲ್ಲೆಯ ಹೈನುಗಾರಿಗೆಯು ಉತ್ತಮ ಸ್ಥಿತಿಯಲ್ಲಿದ್ದು ಕಾರ್ಯದರ್ಶಿಗಳ ಈ ಸೇವೆ ಅಭಿನಂದನಾರ್ಹ ಎಂದರು.
ಈ ಸಂದರ್ಭದಲ್ಲಿ ಉಪ ವ್ಯವಸ್ಥಾಪಕ ಡಿ.ವೀರಣ್ಣ, ವಿಸ್ತರಣಾಧಿಕಾರಿ ದಿವಾಕರ್‌.ಸಿ.ಆರ್‌, ತಾಪಂ ಉಪಾಧ್ಯಕ್ಷ ರಂಗನಾಥ್‌ ಗೌಡ ಹಾಗೂ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!