ಶಿರಾ: ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲೂ ಸರಕಾರ ರಾಜ್ಯದ ಕಟ್ಟಕಡೆಯ ಸಾಮಾನ್ಯ ವ್ಯಕ್ತಿಗೂ ಸರಕಾರದ ಸವಲತ್ತು ತಲುಪಬೇಕು ಎಂಬ ಉದ್ದೇಶದಿಂದ ಎಲ್ಲಾ ವರ್ಗದವರಿಗೂ ಸಹಾಯಹಸ್ತ ಚಾಚುವ ಕೆಲಸ ಮಾಡುತ್ತಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಶನಿವಾರ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ಕಟ್ಟಡ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ರಾಜ್ಯಾದ್ಯಂತ ಕಿಟ್ ಕೊಡಲು ನಿರ್ಧರಿಸಿದ್ದು, ಶಿರಾ ತಾಲ್ಲೂಕಿಗೂ ಸುಮಾರು 4 ಸಾವಿರ ಆಹಾರದ ಕಿಟ್ ನೀಡಲಾಗುವುದು. ಎಲ್ಲೆಲ್ಲಿ ವಲಸೆ ಕಾಮಿಕರು ಕೆಲಸ ಮಾಡುತ್ತಿದ್ದಾರೆ ಅವರಿಗೆಲ್ಲಾ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ದುಡಿಮೆಯನ್ನೇ ಆಧಾರ ಮಾಡಿಕೊಂಡಿರುವ ಅಸಂಘಟಿತ ಕಾರ್ಮಿಕರಿಗೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಸರಕಾರ ಸಹಾಯ ಹಸ್ತವನ್ನು ಚಾಚುವ ಪ್ರಯತ್ನ ಮಾಡುತ್ತಿದೆ, ಕೋವಿಡ್‌ನಿಂದ ಮೃತಪಟ್ಟವರಿಗೆ 1 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಎಲ್ಲಾ ಸಾರ್ವಜನಿಕರ ಹಿತಚಿಂತನೆಗೆ ಸರಕಾರ ಬದ್ಧವಾಗಿದೆ, ಆಹಾರದ ಕಿಟ್ ಗಳು ಎಲ್ಲಾ ಅರ್ಹರಿಗೂ ಸಮರ್ಪಕವಾಗಿ ಎಲ್ಲರಿಗೂ ತಲುಬೇಕು, ಅದಕ್ಕೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ ಕೋವಿಡ್ ಸಂಕಷ್ಟದಲ್ಲಿ ಜೀವನ ನಡೆಸಲೂ ಕಷ್ಟ ಪಡುತ್ತಿರುವ ಕಟ್ಟಡ ಕಾರ್ಮಿಕರಿಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾಗೂ ಕಾರ್ಮಿಕ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ್ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಕೂಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರಿಗೆ ಆಹಾರದ ಕಿಟ್ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು.
ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ ಬಡವರ, ದೀನ ದಲಿತರ ಪರವಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಮಿಕರಿಗೆ ಆಶಾದಾಯಕ ಬದುಕು ಕಟ್ಟಿಕೊಳ್ಳಲು ಆಸರೆಯಾಗಿ ಹಲವಾರು ಕಾರ್ಯಕ್ರಮ ಮಾಡುತ್ತಿದ್ದು, ಈಗ ಕೋವಿಡ್ ಸಂಕಷ್ಟದಿಂದ ತತ್ತರಿಸಿರುವ ಅಸಂಘಟಿತ ಕಾರ್ಮಿಕರಿಗೆ ದಿನಸಿ ಕಿಟ್ ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತೆಂಗು ಮತ್ತು ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್, ತಹಸೀಲ್ದಾರ್ ಮಮತ, ಕಾರ್ಮಿಕ ನಿರೀಕ್ಷಿಕ ಅಬ್ದುಲ್ ರಾವುಫ್, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಕೆಂಪಹನುಮಯ್ಯ, ಪೌರಾಯುಕ್ತ ಪರಮೇಶ್ವರಪ್ಪ ಮತ್ತಿತರರು ಹಾಜರಿದ್ದರು.
ಪ್ರತಿಯೊಬ್ಬರಿಗೂ ಸರಕಾರದ ಸೌಲಭ್ಯ ಸಿಗಬೇಕು: ರಾಜೇಶ್ ಗೌಡ
Get real time updates directly on you device, subscribe now.
Prev Post
Next Post
Comments are closed.