ಪ್ರಜ್ಞಾಪೂರ್ವಕವಾಗಿ ಪ್ಲಾಸ್ಟಿಕ್‌ ದೂರವಾಗಿಸಿ ಪರಿಸರ ಸಂರಕ್ಷಿಸಿ

ಮಾರಕ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ: ಜಿ.ಎಸ್.ಬಿ

465

Get real time updates directly on you device, subscribe now.

ತುಮಕೂರು: ದಿನ ನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಪ್ರಜ್ಞಾಪೂರ್ವಕವಾಗಿ ದೂರವಾಗಿಸುವುದರೊಂದಿಗೆ ಪರಿಸರ ಸಂರಕ್ಷಿಸಬೇಕೆಂದು ಸಂಸದ ಜಿ.ಎಸ್‌.ಬಸವರಾಜು ತಿಳಿಸಿದರು.
ಪ್ಲಾಸ್ಟಿಕ್‌ ರಹಿತ ದಿನಾಚರಣೆ ಪ್ರಯುಕ್ತ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್‌ ವತಿಯಿಂದ ಜಿಲ್ಲಾ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ್‌ ಮಿಷನ್‌ ಹಾಗೂ ಜಲ ಜೀವನ್‌ ಮಿಷನ್‌ ಯೋಜನೆಯ ಕೈಪಿಡಿ ಪುಸ್ತಕ ಮತ್ತು ಸ್ಟಿಕ್ಕರ್ಸ್‌ ಬಿಡುಗಡೆ ಮಾಡಿ ಪ್ಲಾಸ್ಟಿಕ್‌ ನಿಷೇಧ ಮತ್ತು ಸ್ವಚ್ಛತೆಗೆ ಆದ್ಯತೆ ಕೊಡುತ್ತೇವೆಂದು ಪ್ರತಿಜ್ಞಾವಿಧಿ ಬೋಧಿಸಿದ ಬಳಿಕ ಮಾತನಾಡಿದರು.
ಪರಿಸರ ಸಂರಕ್ಷಣೆ ಕೇವಲ ಆಚರಣೆಗಷ್ಟೆ ಸೀಮಿತಗೊಳಿಸದೆ ನಿತ್ಯ ಬದುಕಿನ ಮೂಲ ಕರ್ತವ್ಯವನ್ನಾಗಿಸಿಕೊಂಡು ಪರಿಸರ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸ್ವಚ್ಛತೆ ವಿಚಾರದಲ್ಲಿ ನಾವು ಸ್ವತಂತ್ರರಲ್ಲ, ಸಂಪೂರ್ಣ ಪ್ಲಾಸ್ಟಿಕ್‌ ಬಳಕೆ ನಿಷೇಧ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳದ ಹಿನ್ನೆಲೆಯಲ್ಲಿ ನಾನಾ ರೋಗ ರುಜಿನಗಳಿಗೆ ತುತ್ತಾಗುತ್ತಿರುವ ನಾವು ದೇಶದಲ್ಲಿ 135 ಬಿಲಿಯನ್‌ ಬೆಲೆ ಬಾಳುವ ಔಷಧ ಸೇವನೆ ಮಾಡುತ್ತಿದ್ದೇವೆ, ಇದು ದುರಾದೃಷ್ಟದ ಸಂಗತಿಯಾಗಿದೆ, ಉತ್ತಮ ಆರೋಗ್ಯಕ್ಕಾಗಿ ನಮ್ಮ ಸುತ್ತಮುತ್ತಲಿನ ಪರಿಸರ ಕಾಪಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಸ್ವಚ್ಛತೆಗೆ ಒತ್ತು ಕೊಡಬೇಕು, ಹೆಚ್ಚು ಕಸ ಸಂಗ್ರಹವಾಗುವ ಸ್ಥಳಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ಕಸ ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಬೇಕು, ಹಸಿ ಮತ್ತು ಒಣ ಕಸ ವಿಂಗಡಿಸಿ ವಿಲೇವಾರಿ ಮಾಡಬೇಕು, ಅನೈರ್ಮಲ್ಯಕ್ಕೆ ಎಡೆಮಾಡಿಕೊಡಬಾರದು, ಅವೈಜ್ಞಾನಿಕ ಕಸ ವಿಲೇವಾರಿಗೆ ಕಡಿವಾಣ ಹಾಕಬೇಕು, ಆಧುನೀಕರಣ ಬೆಳೆದಂತೆ ಅನಾಗರಿಕರಾಗದೆ ಪ್ರಜ್ಞಾವಂತರಾಗಿ ಸ್ವಚ್ಛತೆ ಕಾಪಾಡಬೇಕು ಎಂದರು.
ಸರ್ಕಾರ ಜನರ ಶ್ರೇಯೋಭಿವೃದ್ಧಿ ಜೊತೆಗೆ ಸ್ವಚ್ಛತೆಗೂ ಶ್ರಮಿಸುತ್ತಿದೆ. ಸರ್ಕಾರದ ಸಮಗ್ರ ನೀರಾವರಿ ಯೋಜನೆಯಿಂದಾಗಿ ಜಿಲ್ಲೆಯ ನೀರಿನ ಕೊರತೆ ದೂರವಾಗಲಿದೆ, ಅಲ್ಲದೆ ಕೇಂದ್ರ ಸರ್ಕಾರದ ಜಲ ಜೀವನ್‌ ಮಿಷನ್‌ ಯೋಜನೆ ಮೂಲಕ ಗ್ರಾಮದ ಪ್ರತಿ ಮನೆ ಮನೆಗೂ ಕುಡಿಯುವ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಮಾತನಾಡಿ, ಸ್ವಾತಂತ್ರ್ಯದಷ್ಟೇ ಸ್ವಚ್ಛತೆಯೂ ಮುಖ್ಯವಾಗಿದೆ. ನಾಡಿನ ಅಭಿವೃದ್ಧಿಗೆ ಸ್ವಚ್ಛತೆ ಮೊದಲಾದ್ಯತೆಯಾಗಬೇಕು, ಸ್ವಚ್ಛವಾಗಿರುವ ನಾಡು ಅಭಿವೃದ್ಧಿಯಲ್ಲಿಯೂ ಮುಂದಿರುತ್ತದೆ. ಹಾಗಾಗಿ ನಾವೆಲ್ಲರೂ ಸ್ವಚ್ಛತೆಗೆ ಒತ್ತು ಕೊಟ್ಟು ಪ್ಲಾಸ್ಟಿಕ್‌ ಮುಕ್ತ ಭಾರತ ನಿರ್ಮಾಣ ಮಾಡಬೇಕು ಎಂದರು.
ಪ್ಲಾಸ್ಟಿಕ್‌ ಬಳಕೆ ಹೆಚ್ಚಾದಂತೆ ಅನೈರ್ಮಲ್ಯ ಹೆಚ್ಚಾಗುತ್ತಿದ್ದು, ನೈರ್ಮಲ್ಯೀಕರಣದ ಅರಿವು ಎಲ್ಲರಲ್ಲೂ ಮೂಡಿದಾಗ ಸ್ವಚ್ಛ ಭಾರತ ನಿರ್ಮಾಣ ಸಾಧ್ಯ ಎಂದರು.
ಪ್ಲಾಸ್ಟಿಕ್‌ ಕರಗದ ಮತ್ತು ಕೊಳೆಯದ ವಸ್ತು, ಇದರ ವಿಲೇವಾರಿ ಸುಲಭ ಕೆಲಸವಲ್ಲ, ಆದ್ದರಿಂದ ವೈಜ್ಞಾನಿಕ ವಿಲೇವಾರಿ ಮಾಡುವ ಬದಲು ಪ್ಲಾಸ್ಟಿಕ್ ಗೆ ಬೆಂಕಿ ಇಟ್ಟು ವಿಲೇವಾರಿ ಮಾಡುವುದು ಹೆಚ್ಚಾಗುತ್ತಿದ್ದು, ಇದರಿಂದ ನೀರು, ಪರಿಸರ ಮತ್ತು ವಾತಾವರಣ ಕಲುಷಿತಗೊಳ್ಳುತ್ತಿದೆ, ಪ್ರತಿ ಹಳ್ಳಿಯಲ್ಲಿಯೂ ಪ್ಲಾಸ್ಟಿಕ್‌ ಸಮಸ್ಯೆ ತಲೆದೋರುತ್ತಿದೆ, ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರವೇ ಪಾಸ್ಟಿಕ್‌ ಬಳಕೆ ಮಾಡಬೇಕು, ಪಾಸ್ಟಿಕ್‌ ಮುಕ್ತ ಭಾರತ ನಿರ್ಮಾಣ ಕೇವಲ ಸರ್ಕಾರದ ನೀತಿಯಿಂದ ಸಾಧ್ಯವಾಗುವುದಿಲ್ಲ. ಇದಕ್ಕೆ ಪ್ರತಿಯೊಬ್ಬ ನಾಗರಿಕನೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

Get real time updates directly on you device, subscribe now.

Comments are closed.

error: Content is protected !!