ತುಮಕೂರು: ರಾಜ್ಯದಲ್ಲಿ ವೈಜ್ಞಾನಿಕ ಗಣಿಗಾರಿಕೆಗೆ ಪೂರಕವಾಗುವ ನೂತನ ಗಣಿ ನೀತಿ ರೂಪಿಸುವುದರ ಜೊತೆಗೆ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ಆರ್. ನಿರಾಣಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕೆಎಂಇಆರ್‌ಸಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಮೈನಿಂಗ್ ನೀತಿಯಲ್ಲಿ ನಿಯಮಗಳ ಸರಳೀಕರಣಗೊಳಿಸಲಾಗುವುದು. ನಾನು ಇಲಾಖೆ ಸಚಿವನಾದ ಬಳಿಕ ಸಾಕಷ್ಟು ಬದಲಾವಣೆ ತರಲಾಗಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖನಿಜ ಭವನ ನಿರ್ಮಿಸುವುದು, ವಿಭಾಗ ಮಟ್ಟದಲ್ಲಿ ಮೈನಿಂಗ್ ಅದಾಲತ್ ಆಯೋಜಿಸಿ ಗಣಿಗಾರಿಕೆಗೆ ಸಂಬಂಧಿತ ಸಮಸ್ಯೆಗಳಿಗೆ ಅದಾಲತ್ ನಡೆಯುವ ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು. ಕ್ರಷರ್, ಕಲ್ಲು ಗಣಿಗಾರಿಕೆ ನಡೆಸುವ ಉದ್ಯಮಗಳಿಗೆ ಸೂಕ್ತ ತರಬೇತಿ ನೀಡಲು ಬಳ್ಳಾರಿ ಜಿಲ್ಲೆಯಲ್ಲಿ ಸ್ಕೂಲ್ ಆಫ್ ಮೈನಿಂಗ್ ಆರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದರು.
ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಮತ್ತು ಜನರ ಜೀವನ ಮಟ್ಟ ಉತ್ತಮ ಪಡಿಸಲು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸಮರ್ಪಕ ಅನುದಾನ ವಿನಿಯೋಗ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿನ ಸಮಸ್ಯೆಗಳ ಇತ್ಯರ್ಥಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಇರುವುದರಿಂದ ಗಣಿ ಬಾಧಿತ ಪ್ರದೇಶಗಳಿಗೆ ಪರಿಹಾರ ಹಾಗೂ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಅನುದಾನ ಸರ್ವೋಚ್ಛ ನ್ಯಾಯಾಲಯದಿಂದ ಬಿಡುಗಡೆಯಾಗಿಲ್ಲ. ತುಮಕೂರು, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಿಗೆ 18 ಸಾವಿರ ಕೋಟಿ ರೂ. ಅನುದಾನ ಬಾಕಿ ಬರಬೇಕಿದೆ. ಈ ಪೈಕಿ ತುಮಕೂರು ಜಿಲ್ಲೆಗೆ ಸುಮಾರು 2554 ಕೋಟಿ ರೂ. ಬರಬೇಕಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಜಿಲ್ಲೆಯ ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ಸುಮಾರು 2554 ಕೋಟಿಯಷ್ಟು ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಗಣಿ ಬಾಧಿತ ಪ್ರದೇಶದವರಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದರಲ್ಲದೆ ಜನ ಜೀವನಕ್ಕೆ ತೊಂದರೆಯಾಗದಂತೆ ವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸಲು ಕ್ರಮ ವಹಿಸುವುದರೊಂದಿಗೆ ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಗಣಿ ಬಾಧಿತ ಪ್ರದೇಶಗಳಲ್ಲಿ ಆರೋಗ್ಯ, ಪ್ರವಾಸೋದ್ಯಮ ಮೂಲಭೂತ ಸೌಕರ್ಯ, ರಸ್ತೆ ಸಂಪರ್ಕ, ನೀರಾವರಿ, ಕೌಶಲ್ಯಾಭಿವೃದ್ಧಿ, ಮಾಲಿನ್ಯ ನಿಯಂತ್ರಣ, ಪರಿಸರ ಸಂರಕ್ಷಣೆಗಾಗಿ ಇಲಾಖೆಯಿಂದ ಮೀಸಲಿಟ್ಟಿರುವ ಅನುದಾನದ ವಿವರವನ್ನು ನೀಡಬೇಕೆಂದು ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ.ರೇ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪುರವಾಡ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಮಹೇಶ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸಾಕಷ್ಟು ಮಾರ್ಪಾಡು ತರಲಾಗಿದೆ. ಐದು ವರ್ಷದ ಅವಧಿಗೆ ಅನುಗುಣವಾಗುವಂತೆ ನೂತನ ಗಣಿಗಾರಿಕೆ ನೀತಿ, ಏಕ ಗವಾಕ್ಷಿ ಪದ್ಧತಿ, ಬಾಕಿಯಿರುವ ಅರ್ಜಿಗಳ ಇತ್ಯರ್ಥ ಮತ್ತು ಬಂಡವಾಳ ಹೂಡಿಕೆದಾರರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಗಣಿಗಾರಿಕೆ ನಿಯಮಗಳ ಸರಳೀಕರಣ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.
ಪ್ರತಿಯೊಂದು ಜಿಲ್ಲೆಯಲ್ಲಿಯೂ ವಿಭಾಗವಾರು ಗಣಿಗಾರಿಕೆಗೆ ಸಂಬಂಧಿಸಿದ ಎಲ್ಲಾ ಇಲಾಖಾಧಿಕಾರಿಗಳನ್ನು ಒಳಗೊಂಡು ಸರ್ಕಾರವೇ ಗಣಿ ಉದ್ಯಮಿಗಳ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆ ಇತ್ಯರ್ಥ ಮಾಡುವ ವಿನೂತನ ಕಾರ್ಯಕ್ರಮ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೊರೊನಾ ಮುಗಿದ ಬಳಿಕ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಬಾಕಿ ಉಳಿದಿರುವ ಅಂದಾಜು 6000 ಅರ್ಜಿಗಳನ್ನು ಇನ್ನು ಮೂರು ತಿಂಗಳಲ್ಲಿ ಇತ್ಯರ್ಥ ಪಡಿಸಲು ವಿಶೇಷ ಗಮನಹರಿಸಲಾಗಿದೆ. ಅವೈಜ್ಞಾನಿಕ ಮೈನಿಂಗ್‌ಗೆ ಕಡಿವಾಣ ಹಾಕಿ ಖನಿಜ ಸಂಪತ್ತಿನ ಅನುಪಯುಕ್ತತೆಯನ್ನು ತಡೆಯುವ ಉದ್ದೇಶದಿಂದ ಮೈನಿಂಗ್‌ದಾರರು ಮತ್ತು ಮಾಲೀಕರಿಗೆ ತರಬೇತಿ ನೀಡಲು ಬಳ್ಳಾರಿಯಲ್ಲಿ ಸ್ಕೂಲ್ ಆಫ್ ಮೈನಿಂಗ್ ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಒಂದೂವರೆ ವರ್ಷದೊಳಗೆ ತರಬೇತಿ ನೀಡುವ ಕಾರ್ಯ ಆರಂಭಿಸಲಾಗುವುದು. ಕಲ್ಲು, ಮರಳು, ಉಕ್ಕು, ಚಿನ್ನ ಸೇರಿದಂತೆ ಎಲ್ಲಾ ರೀತಿಯ ಗಣಿಗಾರಿಕೆ ನಡೆಸುವ ಸಂಬಂಧ ಸ್ಕೂಲ್ ಆಫ್ ಮೈನಿಂಗ್‌ನಲ್ಲಿ ತರಬೇತಿ ನೀಡಲಾಗುವುದು ಎಂದರು.
ಜಿಲೆಟಿನ್ ಕಡ್ಡಿಗಳ ಸಂಗ್ರಹ ಮತ್ತು ರವಾನೆಗೆ ಸಂಬಂಧಿಸಿದಂತೆ ಕ್ರಷರ್ ಮಾಲೀಕರಿಗೆ ಮತ್ತು ಸರಬರಾಜುದಾರರಿಗೆ ರಾಜ್ಯಾದ್ಯಂತ ತರಬೇತಿ ನೀಡಲಾಗಿದೆ. ಅದೇರೀತಿ ತುಮಕೂರು ಜಿಲ್ಲೆಯ ಕಲ್ಲುಗಣಿ ಗುತ್ತಿಗೆದಾರರಿಗೆ ಸ್ಪೋಟಕ ಪ್ರಕ್ರಿಯೆ ಕುರಿತು ಮಾಹಿತಿ ನೀಡಲಾಗಿರುತ್ತದೆ. ಸ್ಕೂಲ್ ಆಫ್ ಮೈನಿಂಗ್‌ನಲ್ಲಿಯೂ ಈ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಮರಳು ಬೇಡಿಕೆ ಹೆಚ್ಚುತ್ತಿದ್ದು, ಗುಣಮಟ್ಟಕ್ಕೆ ಆದ್ಯತೆ ನೀಡುವ ಸಲುವಾಗಿ ಹೊಸ ಮರಳು ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಈ ನೀತಿಯಡಿ ಮೂರು ಭಾಗಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ರಾಜ್ಯದಲ್ಲಿ ನದಿ ಪಾತ್ರದ ಪ್ರದೇಶಗಳಲ್ಲಿ 380 ಮರಳು ಘಟಕಗಳನ್ನು ಗುರುತಿಸಲಾಗಿದೆ. ಮರಳನ್ನು ಗುಣಮಟ್ಟಕ್ಕೆ ಅನುಗುಣವಾಗಿ ಎ.ಬಿ.ಸಿ ಗ್ರೇಡಿಂಗ್ ಮಾಡುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ ಎಂದರು.
ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿರುವ ಸಮಸ್ಯೆ ಮತ್ತು ಜಿಲ್ಲಾ ಮಿನರಲ್ ಹಾಗೂ ಕೆಎಂಇಆರ್‌ಸಿಯ ಅನುದಾನವನ್ನು ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಕೆ ಹಾಗೂ ಅನುದಾನ ಆಧಾರದ ಮೇಲೆ ಕ್ರಿಯಾಯೋಜನೆ ತಯಾರಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ರಾಜ್ಯದಲ್ಲಿ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಸುಮಾರು 32 ಕೋಟಿ ಪೈಕಿ 14.56 ಕೋಟಿ ಅನುದಾನ ವಿನಿಯೋಗವಾಗಿದೆ ಎಂದು ಹೇಳಿದರು.
ನಾನು ಕಾಂಗ್ರೆಸ್‌ಗೆ ಹೋಗಲ್ಲ..
ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೇನೆ ಎಂಬುದು ಶುದ್ಧ ಸುಳ್ಳು, ಇಂಥ ವದಂತಿಗಳಲ್ಲಿ ಹುರುಳಿಲ್ಲ, ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಾದರೆ ಸ್ವಾಗತ, ಯಾರು ಎಲ್ಲಿ ಬೇಕಾದರೂ ಸ್ವರ್ಧೆ ಮಾಡಲು ಸ್ವತಂತ್ರರು, ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು, ಅಲ್ಲಿ ಫಲಿತಾಂಶ ಏನಾಯಿತು, ಚಿಕ್ಕನಾಯಕನಹಳ್ಳಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಅದೆ ಆಗುವುದು.
ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ.
Comments are closed.