ಒಬ್ಬರು ಅಧಿಕಾರ ನಡೆಸ್ತಾರೆ, ಮತ್ತೊಬ್ರು ಭ್ರಷ್ಟಾಚಾರ ಮಾಡ್ತಾರೆ!

ಬಿಜೆಪಿ ಸರ್ಕಾರದಲ್ಲಿ ಇಬ್ಬರು ಸಿಎಂ ಇದ್ದಾರೆ: ಸಲೀಂ

458

Get real time updates directly on you device, subscribe now.

ತುಮಕೂರು: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷದ ನೇತೃತ್ವದ ಸರಕಾರದಲ್ಲಿ ಅವರ ಪಕ್ಷದವರೇ ಹೇಳುವಂತೆ ಇಬ್ಬರು ಸಿಎಂ ಗಳಿದ್ದು, ಒಬ್ಬರು ಅಧಿಕಾರ ನಡೆಸಿದರೆ, ಮತ್ತೊಬ್ಬರು ಟೆಂಡರ್ ಗಳಲ್ಲಿ ಭ್ರಷ್ಟಾಚಾರ ನಡೆಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಆರೋಪಿಸಿದ್ದಾರೆ.
ನಗರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವರಾದ ಸಿ.ಪಿ.ಯೋಗೀಶ್ವರ್‌ ಮತ್ತು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಸೂಪರ್‌ ಸಿಎಂ ಬಿ.ವೈ.ವಿಜಯೇಂದ್ರ ಅವರ ಕುರಿತು ದಾಖಲೆಗಳ ಸಮೇತ ಪಕ್ಷದ ಹೈಕಮಾಂಡ್‌ಗೆ ಮಾಹಿತಿ ನೀಡಿರುವುದೇ ಸಾಕ್ಷಿ ಎಂದರು.
ಸುಮಾರು 130 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‌ ಪಕ್ಷದ ಬಗ್ಗೆ ಯಾರಾದರೂ ಆರೋಪ ಮಾಡುವಾಗ ಮೊದಲು ಸಾಕ್ಷ್ಯ ಸಮೇತ ದಾಖಲೆಗಳನ್ನು ನೀಡಬೇಕು. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಪಕ್ಷ ನಡಸುತ್ತಿರುವ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಕಾಂಗ್ರೆಸ್‌ ಪಕ್ಷ ಮಾಡುತ್ತಿದೆ. ಜಿಂದಾಲ್‌ ಕಂಪನಿಗೆ ಸುಮಾರು 3500 ಎಕರೆ ಭೂಮಿ ಮಾರಾಟ ತಡೆಹಿಡಿಯಲು ಹೆಚ್‌.ಕೆ.ಪಾಟೀಲ್‌ ನೇತೃತ್ವದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್‌ ತೆಗೆದುಕೊಂಡು ಗಟ್ಟಿ ನಿರ್ಧಾರವೇ ಕಾರಣ, ಕೊರೊನ ಪರಿಕರಗಳ ಖರೀದಿ ಹಾಗೂ ಕೋವಿಡ್‌ ಮೃತರ ಸಂಖ್ಯೆಯಲ್ಲಿನ ಸುಳ್ಳು ಅಂಕಿ ಅಂಶಗಳ ಕುರಿತು ಸೋಷಿಯಲ್‌ ಅಡಿಟ್‌ಗೆ ಪಕ್ಷ ಮುಂದಾಗಿದ್ದು, ಮುಂದಿನ ಒಂದು ತಿಂಗಳಲ್ಲಿ ಜನತೆಯ ಮುಂದೆ ಸತ್ತವರು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ದಾಖಲೆ ಸಮೇತ ಮಂಡಿಸಲಿದೆ ಎಂದು ಸಲೀಂ ಅಹಮದ್‌ ತಿಳಿಸಿದರು.
ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ನಿರ್ದೇಶನದಂತೆ ಜುಲೈ 1 ರಿಂದ 30ರ ವರೆಗೆ ಕಾಂಗ್ರೆಸ್‌ ಪಕ್ಷದ 140 ಜನ ಹಿರಿಯ ಮುಖಂಡರನ್ನು ಒಳಗೊಂಡ 600 ಜನರ ವೀಕ್ಷಕರ ತಂಡ ಪ್ರತಿ ಜಿಲ್ಲೆಗೆ ತೆರಳಿ ಕೊರೊನ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಕೈಗೊಂಡಿರುವ ಸಹಾಯಹಸ್ತ ಕಾರ್ಯಕ್ರಮದ ಪ್ರಗತಿ ಪರಿಶೀಲನೆಯ ಜೊತೆಗೆ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಲಾಗುತ್ತಿದೆ. ಇದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ವೈಫಲ್ಯಗಳ ಕುರಿತು ಸಹ ಜನರಿಗೆ ಸತ್ಯ ತಿಳಿಸುವ ಕೆಲಸ ಮಾಡುತ್ತಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೈಪೊಟಿಯ ಮೇಲೆ ತೈಲ ಉತ್ಪನ್ನಗಳ ಮೇಲಿನ ಸೆಸ್‌ ಹೆಚ್ಚಳ ಮಾಡಿ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ 100 ರ ಗಡಿ ದಾಟುವಂತೆ ಮಾಡಿವೆ. ಇದರ ವಿರುದ್ಧ ಜುಲೈ 07 ರಂದು ಕಾಂಗ್ರೆಸ್‌ ಪಕ್ಷದಿಂದ ರಾಜ್ಯದಾದ್ಯಂತ ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಕಾಂಗ್ರೆಸ್‌ ಪಕ್ಷದ ಕೊರೊನ ವಾರಿಯರ್ಸ್ ಗಳ ಮೂಲಕ ಜನರಿಗೆ ಸರಕಾರದ ವೈಫಲ್ಯಗಳನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಸಲೀಂ ಅಹಮದ್‌ ನುಡಿದರು.
ಕೊರೊನ ನಿರ್ವಹಣೆ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿವೆ, ವಾರ್ಷಿಕ 2 ಕೋಟಿ ಉದ್ಯೋಗ, ಕಪ್ಪು ಹಣ ವಾಪಸ್‌, ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಕಡಿತ ಸೇರಿದಂತೆ ಹಲವಾರು ಭರವಸೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರದ ಆಡಳಿತದಲ್ಲಿ ಉದ್ಯೋಗ ನೀಡುವ ಬದಲು ಕಡಿತಗೊಳ್ಳುವಂತೆ ಮಾಡಿದೆ, ಕೊರೊನ ಸಂದರ್ಭದಲ್ಲಿ ಜನತೆಯ ಜೊತೆ ನಿಲ್ಲಬೇಕಾದ ಸರಕಾರ ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ, ದೀಪ ಹಚ್ಚಿ ಎಂದು ಹೇಳುವ ಮೂಲಕ ಅತ್ಯಂತ ನಿರ್ಲಕ್ಷತೆಯಿಂದ ನಡೆದುಕೊಂಡಿದೆ. ಪರಿಹಾರ ನೀಡಬೇಕಾಗುತ್ತದೆ ಎಂದು ಕೋವಿಡ್‌ ಸೋಂಕಿತರ ಬಗ್ಗೆ ಸುಳ್ಳು ಲೆಕ್ಕ ನೀಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್‌ ಪಕ್ಷ 2ನೇ ಅಲೆಯಲ್ಲಿ ಜನ ಪರವಾದ ಹಲವಾರು ಕೆಲಸ ಮಾಡಿದೆ, 58 ಲಕ್ಷ ಮಾಸ್ಕ್, 32 ಲಕ್ಷ ಪಿಪಿಇ ಕಿಟ್‌, 84 ಲಕ್ಷ ಬಾಟಲ್‌ ಸಾನಿಟೈಜರ್‌, 94 ಲಕ್ಷ ದಿನಸಿ ಕಿಟ್‌ ಹಾಗೂ 26 ಲಕ್ಷ ಆಹಾರದ ಪೊಟ್ಟಣಗಳನ್ನು ವಿತರಿಸಿದೆ. ಅಲ್ಲದೆ 24 ಲಕ್ಷ ಆಕ್ಸಿಜನ್‌ ಸಿಲಿಂಡರ್‌ ಮತ್ತು 3551 ಆಮ್ಲಜನಕ ಸಾಂದ್ರಕಗಳನ್ನು ನೀಡುವ ಮೂಲಕ ಸಂಕಷ್ಟದಲ್ಲಿದ್ದ ಜನರ ನೆರವಿಗೆ ಬಂದಿದೆ. 3ನೇ ಅಲೆಯಲ್ಲಿಯೂ ಜನರ ಸಂಕಷ್ಟಗಳಿಗೆ ಸ್ಪಂದಿಸಲಿದೆ ಎಂದು ಸಲೀಂ ಅಹಮದ್‌ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಶಾಸಕರಾದ ಡಾ.ರಂಗನಾಥ್‌, ವೆಂಕಟರವಣಪ್ಪ, ಮಾಜಿ ಶಾಸಕರಾದ ಡಾ.ರಫೀಕ್‌ ಅಹಮದ್‌, ಎಸ್‌.ಷಫಿ ಅಹಮದ್‌, ಕೆ.ಷಡಕ್ಷರಿ, ಆರ್‌.ನಾರಾಯಣ್‌, ಎಂ.ಡಿ.ಲಕ್ಷ್ಮಿನಾರಾಯಣ್‌, ಮುಖಂಡರಾದ ಇಕ್ಬಾಲ್‌ ಅಹಮದ್‌, ಅಪ್ತಾಬ್‌ ಅಹಮದ್‌, ಆರ್‌.ರಾಜೇಂದ್ರ, ಹೊನ್ನಗಿರಿಗೌಡ, ಚೌದ್ರಿ ರಂಗಪ್ಪ,ಯುವ ಕಾಂಗ್ರೆಸ್‌ ಅಧ್ಯಕ್ಷ ಶಶಿ ಹುಲಿಕುಂಟೆ ಮಠ್‌ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!