ತುಮಕೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಸದ್ಬಬಳಕೆಯಲ್ಲಿ ರಾಜ್ಯದಲ್ಲಿಯೇ ತುಮಕೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಾ.ನಾರಾಯಣಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅನುದಾನ ಬಳಕೆ ವಿಚಾರದಲ್ಲಿ ತುಮಕೂರು ಜಿಲ್ಲೆ ರಾಜ್ಯಕ್ಕೆ ಪ್ರಥಮ, ಕೋವಿಡ್ ನಿಂದ ಲಾಕ್ ಡೌನ್ ಆಗಿದ್ದರೂ ಕೆಲಸ ವೇಗವಾಗಿ ನಡೆದಿದೆ, ಬಹುತೇಕ ಜಿಲ್ಲೆಗಳಲ್ಲಿ ಅನುದಾನ ಬಳಕೆಯೇ ಆಗಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಆಸಕ್ತಿಯಿಂದ ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಹತ್ವ ಏನು ಎನ್ನುವುದನ್ನು ರಾಜ್ಯಕ್ಕೆ ತೋರಿಸಿಕೊಡುತ್ತೇನೆ, ಹಿಂದೆಂದೂ ಆಗಿರದಂತಹ ಅಭಿವೃದ್ಧಿ ಕಾರ್ಯ ಮಾಡುತ್ತೇನೆ, ಪ್ರತಿ ತಾಲೂಕು, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡುತ್ತೇನೆ. ಅದಕ್ಕಾಗಿಯೆ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆ, ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಭವ್ಯವಾದ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಹೈಟೆಕ್ ಆಗಲಿದ್ದು, ಅಲ್ಲಿ ಕಾಮಗಾರಿ ಆರಂಭವಾದಾಗ ತುಮಕೂರಿನ ಕ್ರೀಡಾಂಗಣವನ್ನು ರಾಜ್ಯಮಟ್ಟದ ಕ್ರೀಡಾ ಚಟುವಟಿಕೆಗೆ ಬಳಸಬೇಕು, ಕ್ರೀಡಾ ಇಲಾಖೆ ಅಡಿ ಬಾಕಿ ಇರುವ ಕಾಮಗಾರಿ ಶೀಘ್ರ ಮುಗಿಯಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಹೊಸ ಬೆಳೆ ಬೆಳೆಯುತ್ತಿರುವ ಮೂಸಂಬಿ, ಡ್ರಾಗನ್ ಫೂಟ್ ಬಗ್ಗೆ ಮಾಹಿತಿ ಪಡೆದ ಸಚಿವರು, ಬೆಳೆ ವಿಮೆಗೆ ಒತ್ತು ಕೊಡುವಂತೆಯೂ ತಿಳಿಸಿದರು.
ಅಡಕೆ ಬೆಳೆಯ ಹನಿ ನೀರಾವರಿಗೆ ಸಬ್ಸಿಡಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮನವಿ ಮಾಡಿದಾಗ, ಈ ಬಗ್ಗೆ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.
ತುಮಕೂರು ಜಿಲ್ಲೆ ಒಂದು ಕಾಲದಲ್ಲಿ ಕಬ್ಬಡಿ, ಖೋಖೋ ಕ್ರೀಡೆಗೆ ಬಹಳ ಹೆಸರುವಾಸಿಯಾಗಿತ್ತು, ಅದರೆ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಯೇ ಇಲ್ಲದಂತಾಗಿದೆ, ಹಾಗಾಗಿ ಕ್ರೀಡಾ ಚಟುವಟಿಕೆಗೆ ಒತ್ತು ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳಿಗೆ ನಿರ್ದೇಶಿಸಿದರು. ಅಲ್ಲದೆ ರೈತರು ಮತ್ತು ವರ್ತಕರ ನಡುವೆ ನೇರ ಮಾರುಕಟ್ಟೆ ಒದಗಿಸಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆನ್ ಲೈನ್ ಆ್ಯಪ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರಿಂದ ರೈತರಿಗೆ ಬಹಳ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ವೀರಭದ್ರಯ್ಯ, ಚಿದಾನಂದ ಗೌಡ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಸೇರಿದಂತೆ ಇತರರಿದ್ದರು.
ಸಭೆಗೂ ಮುನ್ನ ದಾನಿಗಳಾದ ಎನ್.ಎಸ್.ಜಯಕುಮಾರ್, ವಿನಯ್, ರಾಜೇಂದ್ರ ಅವರು ನೀಡಿದ್ದ ಒಲಂಪಿಕ್ಸ್ ಸ್ಪರ್ಧೆಯಲ್ಲಿ ಬಳಸುವ ಏರ್ ರೈಫಲ್ ನ್ನು ಸಚಿವರಾದ ಡಾ.ನಾರಾಯಣಗೌಡ ಅವರು ರಾಷ್ಟ್ರ ಮಟ್ಟದ ರೈಫಲ್ ಶೂಟಿಂಗ್ ಗೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ವಿತರಿಸಿದರು. ಚೆನೈನಲ್ಲಿ ನಡೆದ ದಕ್ಷಿಣ ಭಾರತದ ಚಾಂಪಿಯನ್ ಶಿಪ್ ರೈಫಲ್ ಶೂಟಿಂಗ್ ನಲ್ಲಿ ವಿವೇಕಾನಂದ ರೈಫಲ್ ಅಕಾಡೆಮಿಯ ಕ್ರೀಡಾಪಟುಗಳಾದ ಕಿರಣ್, ಪ್ರಿಯಾ ಡ್ಯಾನಿಯಲ್ ಕಂಚಿನ ಪದಕ ಹಾಗೂ ಶ್ರೀತೇಜ್, ಮನೋಜ್ ಗೌಡ, ರೋಹನಗೌಡ ಅವರು ಅರ್ಹತಾ ಅಂಕಗಳಲ್ಲಿ ಆಯ್ಕೆಯಾಗಿ ಭೂಪಾಲ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ರೈಫಲ್ ಶೂಟಿಂಗ್ ಗೆ ಆಯ್ಕೆಯಾಗಿದ್ದಾರೆ.
ಸಭೆ ಬಳಿಕ ಸ್ಮಾರ್ಟ್ ಸಿಟಿಯಿಂದ ನಿರ್ಮಾಣವಾಗುತ್ತಿರುವ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.
ಕ್ರೀಡಾ ಇಲಾಖೆಯ ಮಹತ್ವವನ್ನು ರಾಜ್ಯಕ್ಕೆ ತೋರಿಸ್ತೇನೆ: ಡಾ.ನಾರಾಯಣಗೌಡ
ಪ್ರತಿ ಜಿಲ್ಲೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ
Get real time updates directly on you device, subscribe now.
Prev Post
Comments are closed.