ಪ್ರಾಣಿ ಹತ್ಯೆ, ಸಾಗಾಣಿಕೆ ತಡೆಗಟ್ಟಲು ಕ್ರಮ ವಹಿಸಿ: ಡೀಸಿ

170

Get real time updates directly on you device, subscribe now.

ತುಮಕೂರು: ಅನಧಿಕೃತ ಪ್ರಾಣಿ ಹತ್ಯೆ ಮತ್ತು ಸಾಗಾಣಿಕೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅನಧಿಕೃತ ಪ್ರಾಣಿಹತ್ಯೆ, ಸಾಗಾಣಿಕೆ ತಡೆಗಟ್ಟುವ ಸಮತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನಧಿಕೃತ ಪ್ರಾಣಿ ಹತ್ಯೆ ಹಾಗೂ ಸಾಗಾಣಿಕೆ ಬಗ್ಗೆ ದೂರು ಬಂದರೆ ತಕ್ಷಣವೇ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲಾ ಇಲಾಖೆಗಳು ಸಮನ್ವಯ ಸಾಧಿಸಿಕೊಂಡು ಜಂಟಿಯಾಗಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂದು ನಿರ್ದೇಶಿಸಿದರು.

ಇಯರ್‌ ಟ್ಯಾಗ್‌ ಅಳವಡಿಸಿ: ಅನಧಿಕೃತ ಪ್ರಾಣಿ ಹತ್ಯೆ ಮತ್ತು ಸಾಗಾಣಿಕೆ ತಡೆಗಟ್ಟುವ ಸಲುವಾಗಿ ಪ್ರಾಣಿಗಳ ರಕ್ಷಣೆ ಹಾಗೂ ಮಾಲೀಕತ್ವದ ಮಾಹಿತಿಗಾಗಿ ಜಾನುವಾರುಗಳಿಗೆ ಇಯರ್‌ ಟ್ಯಾಗ್‌ ಅಳವಡಿಸುವ ಕಾರ್ಯವನ್ನು ತಕ್ಷಣವೇ ಪೂರ್ಣಗೊಳಿಸಬೇಕು. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸರ ಸಹಕಾರದೊಂದಿಗೆ ಪಾಲಿಕೆ ಹಾಗೂ ಪಶುಸಂಗೋಪನಾ ಇಲಾಖೆಗಳು ಹಾಗೂ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತಾಲೂಕು ದಂಡಾಧಿಕಾರಿ, ಇಒ, ಪಿಡಿಒ ಮತ್ತು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಇಯರ್‌ ಟ್ಯಾಗ್‌ ಅಳವಡಿಕೆಯಿಂದ ಬಿಟ್ಟು ಹೋದ ಜಾನುವಾರುಗಳಿಗೆ ಇಯರ್‌ ಟ್ಯಾಗ್‌ ಅಳವಡಿಸಬೇಕು. ಇಯರ್‌ ಟ್ಯಾಗ್‌ ಅಳವಡಿಕೆಯೊಂದಿಗೆ ಮಾಲೀಕತ್ವ ಪತ್ರದ ದಾಖಲೆ ಪಡೆದು ಜಾನುವಾರುಗಳ ಮಾಲೀಕರ ಜೊತೆಗೆ ಛಾಯಾಚಿತ್ರ ಪಡೆದುಕೊಳ್ಳುವಂತೆ ಸೂಚನೆ ನೀಡಿದರು.
ಜಾನುವಾರು ಖರೀದಿಸಿದ್ದರೆ ಅದಕ್ಕೆ ಮಾಲೀಕತ್ವದ ದಾಖಲೆ ಪಡೆದುಕೊಳ್ಳಬೇಕು. ಅನಧಿಕೃತ ಪ್ರಾಣಿ ಹತ್ಯೆ ಮತ್ತು ಸಾಗಾಣಿಕೆಗೆ ಸಂಪೂರ್ಣ ಕಡಿವಾಣ ಹಾಕಬೇಕು. ಮಾಲೀಕತ್ವ ಹಾಗೂ ಇಯರ್‌ ಟ್ಯಾಗ್‌ ಸೇರಿದಂತೆ ಜಾನುವಾರು ನನ್ನ ಮಾಲೀಕತ್ವದ್ದು ಎನ್ನುವುದಕ್ಕೆ ಜಾನುವಾರು ಮಾಲೀಕರ ಬಳಿ ದಾಖಲೆ ಇಲ್ಲದಿದ್ದರೆ ಹತ್ತಿರದ ಗೋಶಾಲೆ ವಶಕ್ಕೆ ಜಾನುವಾರು ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲೆಯಾದ್ಯಂತ 35 ಚೆಕ್‌ ಪೋಸ್ಟ್ ಸ್ಥಾಪನೆ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಾಪುರವಾಡ್‌ ಮಾತನಾಡಿ, ಅನಧಿಕೃತ ಪ್ರಾಣಿ ಹತ್ಯೆ ಹಾಗೂ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ತುಮಕೂರು ನಗರದಲ್ಲಿ 6 ಸೇರಿದಂತೆ ಜಿಲ್ಲೆಯಲ್ಲಿ 35 ಚೆಕ್‌ ಪೋಸ್ಟ್ ಸ್ಥಾಪಿಸಲಾಗಿದೆ. ವಾಹನಗಳ ತಪಾಸಣಾ ಕಾರ್ಯ ಕಟ್ಟುನಿಟ್ಟಾಗಿ ನಡೆಯುತ್ತಿದೆ. ಪ್ರಾಣಿಗಳ ಅಕ್ರಮ ಸಾಗಾಣೆ ದೂರು ಬಂದ ತಕ್ಷಣವೇ ಕ್ರಮ ಜರುಗಿಸಲಾಗುವುದು. ಅನಧಿಕೃತ ಪ್ರಾಣಿ ಹತ್ಯೆ ಹಾಗೂ ಸಾಗಾಣೆ ತಡೆಗೆ ಪೊಲೀಸರ ಸಹಕಾರ ಸದಾ ಇರುತ್ತದೆ. ಇಯರ್‌ ಟ್ಯಾಗ್‌ ಅಳವಡಿಕೆ ಮಾಡದ ಜಾನುವಾರುಗಳಿಗೆ ಇಯರ್‌ ಟ್ಯಾಗ್‌ ಅಳವಡಿಸುವ ಕಾರ್ಯವನ್ನು ಮೊದಲು ಮುಗಿಸಬೇಕು ಎಂದು ಸೂಚನೆ ನೀಡಿದರು.
ಅನಧಿಕೃತ ಪ್ರಾಣಿಗಳ ಸಾಗಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಡಿ ಬಹುತೇಕ ವಾಹನಗಳು ಪದೇ ಪದೆ ಈ ಅನಧಿಕೃತ ಪ್ರಾಣಿ ಸಾಗಾಣೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ. ಆದ್ದರಿಂದ ಅಂತಹ ವಾಹನಗಳ ವಿವರವನ್ನು ಸಾರಿಗೆ ಇಲಾಖೆಗೆ ಒದಸಲಾಗುವುದು. ಮಾಹಿತಿ ನೀಡಿದ ವಾಹನಗಳನ್ನು ಸೀಜ್‌ ಮಾಡಿ ರಿಜಿಸ್ಟ್ರೆಷನ್ ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ಸೂಚಿಸಿದರು.
ಸಭೆಯಲ್ಲಿ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ದಿವಾಕರ್‌ ಮಾತನಾಡಿ, ಅನಧಿಕೃತ ಪ್ರಾಣಿ ಹತ್ಯೆ ಹಾಗೂ ಸಾಗಾಟ ಮಾಡಿದರೆ ಕ್ರಮ ಕೈಗೊಳ್ಳಬಹುದಾದ ಮಾಹಿತಿ ಮತ್ತು ಜಿಲ್ಲೆಯಲ್ಲಿನ ಜಾನುವಾರುಗಳ ವಿವರ, ಇಯರ್‌ ಟ್ಯಾಗಿಂಗ್‌ ಅಳವಡಿಕೆ ಬಗ್ಗೆ ಸಭೆಗೆ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ್‌, ಡಿವೈಎಸ್‌ಪಿ ಶ್ರೀನಿವಾಸ್‌, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಸಾರಿಗೆ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!