ಕೇಂದ್ರ, ರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯಕ್ಕೆ ಕಾಂಗ್ರೆಸ್‌ ಆಕ್ರೋಶ

ತೈಲ ಬೆಲೆ ಏರಿಕೆ ಖಂಡಿಸಿ ಸೈಕಲ್‌ ಜಾಥಾ

113

Get real time updates directly on you device, subscribe now.

ತುಮಕೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಡಳಿತ ವೈಫಲ್ಯ ಖಂಡಿಸಿ ಹಾಗೂ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಸೈಕಲ್‌ ಜಾಥಾ ನಡೆಸಲಾಯಿತು.
ನಗರದ ಬಿ.ಹೆಚ್‌.ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಮುಂಭಾಗ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಸಮಾವೇಶಗೊಂಡ ಮಾಜಿ ಸಚಿವ ಶಿವಶಂಕರರೆಡ್ಡಿ, ಮಾಜಿ ಶಾಸಕ ಡಾ.ರಫಿಕ್ ಅಹಮದ್‌, ಇಕ್ಬಾಲ್‌ ಅಹಮದ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ, ಕೆಂಚಮಾರಯ್ಯ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರಗಳು ದುರಾಡಳಿತ ನಡೆಸುತ್ತಿವೆ. ತೈಲ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕಿಗೆ ಕೊಳ್ಳಿ ಇಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 7 ವರ್ಷಗಳಲ್ಲಿ ಕೇಂದ್ರ ಸರಕಾರ 40ಕ್ಕೂ ಹೆಚ್ಚು ಬಾರಿ ತೈಲ ಬೆಲೆ ಹೆಚ್ಚಳ ಮಾಡಿ ಜನ ಸಾಮಾನ್ಯರ ಮೇಲೆ ಅನಗತ್ಯ ಹೊರ ಹೊರಿಸಿದೆ. ಇದರ ಭಾಗವಾಗಿ ಗ್ಯಾಸ್‌, ಅಡುಗೆ ಎಣ್ಣೆ, ಬೆಳೆ, ದಿನಸಿ ಪದಾರ್ಥಗಳ ಬೆಲೆ ಹೆಚ್ಚಳವಾಗಿದ್ದು, ಜನಸಾಮಾನ್ಯರು ಕೊಳ್ಳಲು ಹಿಂದು ಮುಂದು ನೋಡುವಂತಾಗಿದೆ. ಕಾಂಗ್ರೆಸ್‌ ಪಕ್ಷ ಹಲವಾರು ಬಾರಿ, ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡಿದ್ದರೂ ಸರಕಾರದ ದಪ್ಪ ಚರ್ಮದ ವರ್ತನೆಯಲ್ಲಿ ಬದಲಾವಣೆ ಕಂಡಿಲ್ಲ. ಹಾಗಾಗಿ ಬಡವರ ಪರವಾಗಿರುವ ಕಾಂಗ್ರೆಸ್‌ ಪಕ್ಷ ರಾಜ್ಯಾದ್ಯಂತ ಪ್ರತಿಭಟನೆ ನಡಸುವ ಮೂಲಕ ಸರಕಾರಕ್ಕೆ ಎಚ್ಚರಿಕೆಯ ಸಂದೇಶ ಕಳುಹಿಸಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.
ಕಾಂಗ್ರೆಸ್‌ ಪಕ್ಷ ಎಂದೂ ಸಹ ಬಡವರ ಪರ, ಬಡವರ ಹಿತಕ್ಕಾಗಿಯೇ ಹೋರಾಟ ಮಾಡುತ್ತಾ ಬಂದಿದೆ, ಬಿಜೆಪಿ ಬಡ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಅರ್ಥೈಸಿಕೊಂಡು ಬೆಲೆ ಇಳಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಪಕ್ಷದ ನಾಯಕರು ಯಾವುದೇ ಸಲಹೆ ನೀಡಿದರೂ ಬಿಜೆಪಿ ಸರಕಾರ ತೆಗೆದುಕೊಳ್ಳುವುದಿಲ್ಲ, ಏಕಾಏಕಿ ಎಲ್ಲಾ ಬೆಲೆಗಳನ್ನು ಏರಿಕೆ ಮಾಡುತ್ತಲೇ ಇದೆ, ಬ್ಯಾರೆಲ್‌ ಬೆಲೆ ಇಳಿಕೆಯಾದರೂ ಪೆಟ್ರೋಲ್‌ ಬೆಲೆ ಏರಿಕೆ ಮಾಡುತ್ತಿದೆ ಎಂದು ದೂರಿದರು.
ಮಾಜಿ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಶಿವಶಂಕರ ರೆಡ್ಡಿ ಮಾತನಾಡಿ, ಬಿಜೆಪಿ ಆಡಳಿತದ ವಿರುದ್ಧ ಮತ್ತು ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡಲು ಪಕ್ಷ ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೈಕಲ್‌ ಜಾಥಾ ನಡೆಸಲಾಗುತ್ತಿದೆ. ಬಿಜೆಪಿ ಸರಕಾರ ಬೇಜವಾಬ್ದಾರಿತನದಿಂದ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರಿಗೆ ಸರಿಯಾದ ವೈದ್ಯಕೀಯ ವ್ಯವಸ್ಥೆ ಇಲ್ಲದೆ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್‌ ವ್ಯವಸ್ಥೆ, ಔಷಧಿ ಒದಗಿಸುವ ಕೆಲಸ ಮಾಡಲಿಲ್ಲ. ಹಾಗಾಗಿ ಜನತೆ ತುಂಬಾ ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಕಿಡಿಕಾರಿದರು.
ಈಗಲೂ ಕೂಡ ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಚೆನ್ನಾಗಿ ಕೊರೊನಾ ಪರಿಸ್ಥಿತಿ ನಿರ್ವಹಣೆ ಮಾಡಿದ್ದೇವೆ ಎಂದು ಆರೋಗ್ಯ ಮಂತ್ರಿಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅವರ ಸಾಧನೆ ಕೇವಲ ಭಾಷಣ, ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ. ದೇಶದಲ್ಲಿ ಪೆಟ್ರೋಲ್‌ ಬೆಲೆ ಲೀಟರ್ ಗೆ 104- 105 ರೂ. ದಾಟಿದೆ. ಇತಿಹಾಸದಲ್ಲಿ ಎಂದೂ ಈ ರೀತಿ ಬೆಲೆ ಏರಿಕೆಯಾಗಿರಲಿಲ್ಲ. ಯುಪಿಎ ಸರಕಾರ ಇದ್ದಾಗ ಕೇವಲ 60 ರೂ. ಮಾತ್ರ ಪೆಟ್ರೋಲ್‌ ಬೆಲೆ ಇತ್ತು. ಈಗ ಒಂದು ಬ್ಯಾರಲ್ ಗೆ 72 ಡಾಲರ್‌ ಇದ್ದರೂ ಸಹ 104- 105 ರೂ. ಗಳಿಗೆ ಪೆಟ್ರೋಲ್‌ ಬೆಲೆ ಏರಿಕೆ ಮಾಡಲಾಗಿದೆ. ಜನರಿಗೆ ತೆರಿಗೆ ವಿಧಿಸುವ ಮೂಲಕ ಬಿಜೆಪಿ ಸರಕಾರ ಬಡವರನ್ನು ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಡಾ.ರಫಿಕ್‌ ಅಹಮದ್‌ ಮಾತನಾಡಿ, ಕೊರೊನಾ ನಿರ್ವಹಣೆಯಲ್ಲೂ ಸರಕಾರ ಸಂಪೂರ್ಣ ವಿಫಲವಾಗಿದೆ. ಸಾವಿರಾರು ಜನ ಬಡವರು ಜೀವ ಕಳೆದುಕೊಂಡಿದ್ದಾರೆ. ಈ ಸರಕಾರಗಳಿಗೆ ಬಡವರ ಬಗ್ಗೆ ಕಾಳಜಿ ಇಲ್ಲ, ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ನಾವೆಲ್ಲಾ ಒಗ್ಗಟ್ಟಾಗಿ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಶಾಸಕ ಆರ್‌.ನಾರಾಯಣ್‌, ಪಾಲಿಕೆ ಸದಸ್ಯರಾದ ಜೆ.ಕುಮಾರ್‌, ಮಹೇಶ್‌, ನಯಾಜ್‌ ಅಹಮದ್‌, ಮುಖಂಡರಾದ ಅತೀಕ್‌ ಅಹಮದ್‌, ಇಕ್ಬಾಲ್‌ ಅಹಮದ್‌, ಆಟೋ ರಾಜು, ಮೆಹಬೂಬ್‌ ಪಾಷ, ರಾಜು, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರುದ್ರೇಶ್‌, ಗೀತಮ್ಮ, ಸುಜಾತ, ಕಾರ್ಮಿಕ ವಿಭಾಗದ ದಾದಾಪೀರ್‌, ಅಬ್ದುಲ್‌ ರಹೀಂ ಸೇರಿದಂತೆ ನೂರಾರು ಜನರು ಸೈಕಲ್‌ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಕಾಂಗ್ರೆಸ್‌ ಭವನದಿಂದ ಹೊರಟ ಸೈಕಲ್‌ ಜಾಥಾ ಬಿ.ಹೆಚ್‌.ರಸ್ತೆ, ಟೌನ್ ಹಾಲ್‌ ವೃತ್ತ, ಅಶೋಕ ರಸ್ತೆ, ಚರ್ಚ್‌ ಸರ್ಕಲ್‌, ಕೋಡಿ ಆಂಜನೇಯ ಸರ್ಕಲ್‌ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಬಳಿ ತೆರಳಿ ಮುಕ್ತಾಯಗೊಂಡಿತ್ತು.

Get real time updates directly on you device, subscribe now.

Comments are closed.

error: Content is protected !!