ಅನಗತ್ಯ ಗೊಂದಲ ನಿರ್ಮಾಣ ಸರಿಯಲ್ಲ: ನರಸಿಂಹಯ್ಯ

ಶಾಸಕರು ರಾಜೀನಾಮೆ ಕೊಟ್ಟು ಕಾಂಗ್ರೆಸ್‌ ಸೇರಲಿ

169

Get real time updates directly on you device, subscribe now.

ಗುಬ್ಬಿ: ಶಾಸಕರು ರಾಜೀನಾಮೆ ಕೊಟ್ಟು ಬಂದು ಕಾಂಗ್ರೆಸ್‌ ಸೇರಲಿ, ನಂತರ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಆಕಾಂಕ್ಷಿಗಳಿಗೆ ಬಿ ಫಾರಂ ಬೇಕಾದರೆ ನೀಡಲಿ, ಇಲ್ಲದಿದ್ದರೆ ಅವರ ಕಾರ್ಯಕರ್ತರು ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದು ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಲ್‌.ನರಸಿಂಹಯ್ಯ ಖಡಕ್‌ ಎಚ್ಚರಿಕೆ ನೀಡಿದರು.
ಪಟ್ಟಣದ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಪಕ್ಷ ಬಲಿಷ್ಠವಾಗಿದ್ದು ನಮ್ಮ ಕಾರ್ಯಕರ್ತರು ಎಲ್ಲಾ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ, ನಮ್ಮ ಪಕ್ಷದ ಕಾರ್ಯಕರ್ತರು ಯಾರು ಗೊಂದಲಕ್ಕೆ ಒಳಗಾಗಬಾರದು, ಪಕ್ಷದ ಮುಖಂಡರು, ನಾಯಕರು ಯಾರಿಗೆ ನೀಡುತ್ತಾರೆ ಅವರೆ ನಮ್ಮ ಅಭ್ಯರ್ಥಿಯಾಗುತ್ತಾರೆ ಎಂದರು.
ಜೆಡಿಎಸ್‌ ಕಾರ್ಯಕರ್ತರು ಸುಖ ಸುಮ್ಮನೆ ಗೊಂದಲದ ಹೇಳಿಕೆ ನೀಡಬೇಡಿ, ನಿಮ್ಮ ಪಕ್ಷ ನಿಮ್ಮದು, ನಮ್ಮ ಪಕ್ಷ ನಮ್ಮದು, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಹೈಜಾಕ್‌ ಮಾಡಿರುವುದು ಎಲ್ಲರಿಗೂ ತಿಳಿದಿದೆ, ಈ ಬಾರಿ ಅಂತಹ ಯಾವುದೇ ಚಟುವಟಿಕೆ ನಡೆಯುವುದಿಲ್ಲ, ವಿರೋಧ ಪಕ್ಷದ ಆಡಳಿತದಿಂದ ಸೋತಿರುವ ಜನ ಸಾಮಾನ್ಯರು, ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಲಿದ್ದಾರೆ ಹಾಗೂ ಈಗಾಗಲೇ ಎಲ್ಲಾ ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ನಮ್ಮ ಆಕಾಂಕ್ಷಿಗಳು ಸಿದ್ಧತೆಯಲ್ಲಿದ್ದು, ಇಡಿ ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಇದೆ, ಬೇರೆ ಪಕ್ಷದವರನ್ನು ಕರೆದುಕೊಂಡು ನಿಲ್ಲಿಸುವಂತಹ ಯಾವ ಯೋಚನೆ ಇಲ್ಲ, ನಮ್ಮ ನಾಯಕರ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಕಾಂಗ್ರೆಸ್‌ ಮುಖಂಡ ಸಲೀಂಪಾಷಾ ಮಾತನಾಡಿ, ನಮ್ಮ ಕ್ಷೇತ್ರದ ಮೀಸಲಾತಿ ವಿಚಾರದಲ್ಲಿ ಬಾರಿ ಅನ್ಯಾಯವಾಗಿದೆ, ಕುಣಿಗಲ್‌ ಶಾಸಕರು 5 ಸಾಮಾನ್ಯ ಕ್ಷೇತ್ರ ಪಡೆಯುತ್ತಾರೆ, ಆದರೆ ನಮ್ಮ ಶಾಸಕರು ಇದರ ಬಗ್ಗೆ ಯಾವುದೇ ತಲೆ ಕೆಡಿಸಿಕೊಂಡಿಲ್ಲ, ಹಾಗಾಗಿ ಸಾಮಾನ್ಯ ಪುರುಷ ಮೀಸಲಾತಿ ಎಲ್ಲಿಯೂ ನಮಗೆ ಸಿಕ್ಕಿಲ್ಲ, ಇದರ ನಡುವೆ ಗೊಂದಲ ಸೃಷ್ಟಿ ಬೇರೆ ಮಾಡುತ್ತಿರುವುದು ಯಾಕೆ ತಿಳಿಯುತ್ತಿಲ್ಲ, ಅವರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದರೆ ಸ್ವಾಗತ, ಆದರೆ ಅಲ್ಲಿ ರಾಜೀನಾಮೆ ನೀಡಿ ಬರಲಿ, ಡಬ್ಬಲ್‌ ಆಕ್ಟಿಂಗ್‌ ಕೆಲಸ ಮಾಡುವುದು ಬೇಡ ಎಂದು ಆಪಾದನೆ ಮಾಡಿದರು.
ಮುಖಂಡ ಚಿಕ್ಕರಂಗೇಗೌಡ ಮಾತನಾಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರ ಮಾಡಿದರೆ ಅವರೆ ನಮಗೆ ಒಂದು ದಿನ ಮುಳ್ಳು ಆಗುತ್ತಾರೆ ಎಂಬ ಭಯದಲ್ಲಿ ಮೀಸಲಾತಿ ವಿಚಾರದಲ್ಲಿ ದೊಡ್ಡ ನಾಯಕರು ತಲೆ ಕೆಡಿಸಿಕೊಂಡಿಲ್ಲ, ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ ಅಂತ ತಿಳಿದಿದ್ದರೂ ಕಾನೂನು ಹೋರಾಟಕ್ಕೆ ಮುಂದಾಗುತ್ತಿಲ್ಲ, ನಮ್ಮ ತಾಲೂಕಿನಲ್ಲಿ ಇದು ವಿಪರ್ಯಾಸವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಿಟ್ಟೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಿಂಬೇಕಟ್ಟೆ ಜಯಣ್ಣ, ಮುಖಂಡರಾದ ಶ್ರೀನಿವಾಸ್‌, ಭರತ್ ಗೌಡ, ಎಮ್ಮೆದೊಡ್ಡಿ ಜಯಣ್ಣ, ರಫಿ, ಮಾರಪ್ಪ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!