ತುಮಕೂರು: ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ನಗರದ 8ನೇ ವಾರ್ಡ್ ವ್ಯಾಪ್ತಿಯಲ್ಲಿ ಸುಮಾರು 110 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಾಸಕ ಜ್ಯೋತಿಗಣೇಶ್ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
8ನೇ ವಾರ್ಡ್ ವ್ಯಾಪ್ತಿಯ ಕೆ.ಹೆಚ್.ಬಿ.ರಸ್ತೆ, ಅಜಾದ್ ಮೈದಾನ ರಸ್ತೆ, ಬಾಂಬೆ ಬಿಲ್ಡಿಂಗ್ ರಸ್ತೆ ಹಾಗೂ ಪಿ.ಹೆಚ್.ಕಾಲೋನಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್, ಸರ್ಕಾರದ ವತಿಯಿಂದ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಪ್ರತಿ ಮಹಾನಗರ ಪಾಲಿಕೆಗೂ 125 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಈ ಯೋಜನೆಯಡಿ ತುಮಕೂರಿನಲ್ಲಿ ಈಗಾಗಲೇ 25ನೇ ವಾರ್ಡ್‌ನಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಇದೀಗ 8ನೇ ವಾರ್ಡ್ ನಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.
ನಗರದ ಎಲ್ಲ ವಾರ್ಡ್ ಗಳಲ್ಲೂ ಈ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು, ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಮಹಾನಗರ ಪಾಲಿಕೆಗೆ ನೀಡುವ 125 ಕೋಟಿ ಅನುದಾನದಲ್ಲಿ 125 ಕೋಟಿಯೂ ನಮಗೆ ಸಿಗುವುದಿಲ್ಲ, ವ್ಯವಸ್ಥಿತವಾಗಿ ಕಾಮಗಾರಿ ನಡೆದರೆ ಸುಮಾರು 40 ರಿಂದ 50 ಕೋಟಿ ರೂ. ಮಾತ್ರ ಅನುದಾನ ದೊರೆಯಲಿದೆ. ಇತರೆ ಕಾರ್ಯಗಳಿಗೂ ಈ ಅನುದಾನವನ್ನೆ ಬಳಕೆ ಮಾಡುವುದರಿಂದ ಮೊತ್ತ ಕಡಿಮೆಯಾಗಲಿದೆ ಎಂದರು.
8ನೇ ವಾರ್ಡ್ ವ್ಯಾಪ್ತಿಯ ಕೆಹೆಚ್‌ಬಿ ರಸ್ತೆ, ಅಜಾದ್ ಮೈದಾನ ರಸ್ತೆ, ಬಾಂಬೆ ಬಿಲ್ಡಿಂಗ್ ರಸ್ತೆ ಮತ್ತು ಪಿ.ಹೆಚ್. ಕಾಲೋನಿಗಳಲ್ಲಿ 2800 ಮೀಟರ್ ನಷ್ಟು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ 80 ಮೀಟರ್ ಕಾಂಕ್ರೀಟ್ ರಸ್ತೆ ಸಹ ಸೇರಿದೆ ಎಂದರು.
ನಗರದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಎಲ್ಲ ಕಡೆ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ಸಾರ್ವಜನಿಕರು ಬೇಸರಗೊಳ್ಳದೆ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ನೀಡಬೇಕು ಎಂದ ಅವರು, ನಾಗರಿಕರು ಸಮಾಧಾನದಿಂದ ನಡೆದುಕೊಳ್ಳದಿದ್ದರೆ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಳ್ಳುತ್ತವೆ. ಮುಂದೊಂದು ಈ ಕಾಮಗಾರಿ ಮಾಡಲೇಬೇಕಾಗುತ್ತದೆ. ಆದ್ದರಿಂದ ಯಾರೂ ಸಹ ಅಡ್ಡಿಪಡಿಸದೆ ಕಾಮಗಾರಿಗಳಿಗೆ ಸಹಕಾರ ಕೊಡಬೇಕು. ಆಗ ಮಾತ್ರ ಬಡಾವಣೆಗಳು ಅಚ್ಚುಕಟ್ಟಾಗಲಿವೆ ಎಂದರು.
ಮೇಯರ್ ಬಿ.ಜಿ. ಕೃಷ್ಣಪ್ಪ ಮಾತನಾಡಿ, ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ ಪ್ರವಾಹ ಬಂತು, ನಂತರ ಕೊರೊನಾ ಕಾಡುತ್ತಿದೆ. ಹಾಗಾಗಿ ನಮಗೆ ಯಾವುದೇ ಅನುದಾನ ಸರಿಯಾಗಿ ಬಂದಿಲ್ಲ. 125 ಕೋಟಿಯಲ್ಲಿ ಕೇವಲ 40 ಕೋಟಿ ರೂ. ಮಾತ್ರ ಬಂದಿದೆ, ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಶಾಸಕರು ಮುತುವರ್ಜಿ ವಹಿಸಿ ನಗರದ ಅಭಿವೃದ್ಧಿಗೆ ಅನುದಾನ ತಂದಿದ್ದಾರೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ವತಿಯಿಂದ ಉದ್ಯಾನವನಗಳ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ನಗರದಲ್ಲಿ ಎಲ್ಲ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ಜನರಿಗೆ ಬೇಸರವಾಗಿದೆ. ಆದರೂ ಅಭಿವೃದ್ಧಿ ಕಾರ್ಯ ಸಂಪೂರ್ಣಗೊಳ್ಳಲು ನಾಗರಿಕರು ಸಹಕರಿಸಿದರೆ ಮುಂದಿನ ದಿನಗಳಲ್ಲಿ ನಗರ ಸುಂದರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕ ಜೆ. ಕುಮಾರ್, ಸದಸ್ಯರಾದ ನಯಾಜ್ ಅಹಮದ್, ಧರಣೇಂದ್ರಕುಮಾರ್, ಆಯುಕ್ತೆ ರೇಣುಕಾ, ಇಂಜಿನಿಯರ್‌ಗಳಾದ ಆಶಾ, ಸುರೇಶ್, ನೇತ್ರಾವತಿ, ಮೋನಿಶಾ, ಮುಖಂಡರಾದ ಉಬೇದ್, ಮಂಜುನಾಥ್, ಪ್ರತಾಪ್ ಗುತ್ತಿಗೆದಾರ ಹರೀಶ್, ಶಹಬುದ್ದೀನ್ ಮತ್ತಿತರರು ಇದ್ದರು.
ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ
Get real time updates directly on you device, subscribe now.
Prev Post
Next Post
Comments are closed.