ಸ್ಮಾರ್ಟ್ ಸಿಟಿ, ಪಾಲಿಕೆ ಅಧಿಕಾರಿಗಳಿಂದ ಅಕ್ರಮ ಒಪ್ಪಂದ: ಸೊಗಡು ಶಿವಣ್ಣ

ಖಾಸಗಿ ವ್ಯಕ್ತಿಗಳಿಗೆ ಬೆಲೆ ಬಾಳುವ ಭೂಮಿ ಗುತ್ತಿಗೆ

71

Get real time updates directly on you device, subscribe now.

ತುಮಕೂರು: ನಗರಪಾಲಿಕೆ ಹಾಗೂ ಸ್ಮಾರ್ಟ್ ಸಿಟಿಗೆ ಸೇರದ ಹಳೆಯ ಸಿದ್ದಿವಿನಾಯಕ ಮಾರುಕಟ್ಟೆಯಲ್ಲಿ ವಿವಿಧೋದ್ದೇಶ ವಾಣಿಜ್ಯ ಮಳಿಗೆ ನಿರ್ಮಿಸಲು ಪಿಪಿಪಿ ಮಾಡಲ್ ನಲ್ಲಿ ಖಾಸಗಿ ವ್ಯಕ್ತಿಗಳಿಗೆ ಬೆಲೆ ಬಾಳುವ ಭೂಮಿಯನ್ನು 30 ವರ್ಷಕ್ಕೆ ಗುತ್ತಿಗೆ ನೀಡಲು ಹೊರಟಿರುವುದು ಕಾನೂನು ಬಾಹಿರವಾಗಿದ್ದು, ಇದರ ವಿರುದ್ಧ ಮುಖ್ಯಮಂತ್ರಿಗಳು ಗಮನಹರಿಸಿ, ತಡೆಯುವಂತೆ ಪತ್ರ ಬರೆದಿರುವುದಾಗಿ ಮಾಜಿ ಸಚಿವ ಎಸ್‌.ಶಿವಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1957ರಲ್ಲಿ ನಗರದ ಬಾಳನಕಟ್ಟೆ ಸಮೀಪದಲ್ಲಿದ್ದ ಹಳೆಯ ಸಿದ್ದಿವಿನಾಯಕ ಮಾರುಕಟ್ಟೆಯ 21,221 ಚದುರ ಅಡಿ ಜಾಗವನ್ನು 95,494 ರೂ. ಗಳಿಗೆ ಎಪಿಎಂಸಿ ಮಾರುಕಟ್ಟೆಯ ಮಾರಾಟ ಮಾಡಲಾಗಿದೆ. ಇಂದಿಗೂ ಕೂಡ ಸದರಿ ಆಸ್ತಿ ಎಪಿಎಂಸಿ ಇಲಾಖೆಯ ಅಡಿಯಲ್ಲಿಯೇ ಇದೆ, ಆದರೆ ಎಪಿಎಂಸಿ, ನಗರಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಅಧಿಕಾರಿಗಳು ನೂರಾರು ಕೋಟಿ ರೂ. ಬೆಲೆ ಬಾಳುವ ಜಾಗವನ್ನು ವಾಣಿಜ್ಯ ಮಳಿಗೆ ನಿರ್ಮಿಸಲು ಪಿಪಿಪಿ ಮಾಡಲ್ ನಲ್ಲಿ ಕೇರಳ ಮೂಲದ ಖಾಸಗಿ ಕಂಪನಿಯೊಂದಕ್ಕೆ 30 ವರ್ಷಗಳ ಕಾಲ ಲೀಸ್ ಗೆ ನೀಡಲು ಹೊರಟಿರುವುದು ಕಾನೂನು ಬಾಹಿರ ಒಪ್ಪಂದವಾಗಿದೆ ಎಂದರು.
ಹಳೆಯ ಮಾರುಕಟ್ಟೆಯ ಜಾಗ ಜನರಿಗೆ ಉಪಯೋಗವಾಗಬೇಕು ಎಂಬ ಆಶಯ ಸರಕಾರಕ್ಕೆ ಇದ್ದರೆ, ಸೂರತ್‌ ರೀತಿಯಲ್ಲಿ ಇಲಾಖೆಯ ಅಂಗಡಿ ಮಳಿಗೆ ನಿರ್ಮಿಸಿ, ರೈತರಿಗೆ, ತರಕಾರಿ ವರ್ತಕರಿಗೆ ದಿನದ ಬಾಡಿಗೆ ಆಧಾರದಲ್ಲಿ ನೀಡಲಿ ಎಂದು ಸಲಹೆ ನೀಡಿದ ಅವರು, ಸದರಿ ಜಾಗದಲ್ಲಿ ವಿವಿಧೋದ್ದೇಶ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಟೆಂಡರ್‌ ಕರೆದಿರುವ ಸ್ಮಾರ್ಟ್ ಸಿಟಿ ಕಂಪನಿಗಾಗಲಿ, ಅವರಿಗೆ ಜಾಗ ನೀಡಿರುವ ನಗರ ಪಾಲಿಕೆಯವರಿಗಾಗಲಿ ಸದರಿ ಜಾಗದ ಮೇಲೆ ಯಾವುದೇ ಹಕ್ಕಿಲ್ಲ, ಜಾಗ ತಮ್ಮ ಹೆಸರಿಗೆ ಖಾತೆಯೇ ಆಗದೆ ಹೇಗೆ ಬೇರೊಬ್ಬರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಸೊಗಡು ಶಿವಣ್ಣ ತಿಳಿಸಿದರು.
ತುಮಕೂರು ಸ್ಮಾರ್ಟ್ ಸಿಟಿ, ನಗರಪಾಲಿಕೆ ಹಾಗೂ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳ ನಡುವೆ ನಡೆದಿರುವ ಈ ಅಕ್ರಮ ಒಪ್ಪಂದದ ಕುರಿತು ಪತ್ರ ಬರೆದು ಮುಖ್ಯಮಂತ್ರಿಗಳು, ಜಿಲ್ಲಾಡಳಿತ, ನಗರಾಭಿವೃದ್ಧಿ ಇಲಾಖೆಯ ಗಮನಕ್ಕೆ ತರಲಾಗಿದೆ, ಒಂದು ವೇಳೆ ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಜಾಗವನ್ನು ಸಾರ್ವಜನಿಕರಿಗೆ ಉಳಿಸಿಕೊಡದ್ದಿರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಸ್‌.ಶಿವಣ್ಣ ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ದೇವಾಲಯ, ದರ್ಗಾಗಳನ್ನು ತೆರವುಗೊಳಿಸಬೇಕೆಂಬ ಸುಪ್ರಿಂಕೋರ್ಟ್‌ನ ಆದೇಶವಿದ್ದರೂ, ನಗರದಲ್ಲಿರುವ ಇಂತಹ ಕೇಂದ್ರಗಳನ್ನು ತೆರವುಗೊಳಿಸದೆ, ಯಾರಿಗೂ ತೊಂದರೆಯಾಗದಂತೆ ನಿರ್ಮಾಣವಾಗಿದ್ದ ಗಣಪತಿ ದೇವಾಲಯವನ್ನು ಕೆಡವಿ ಪಾಲಿಕೆಯ ಆಯುಕ್ತರು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದರೂ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದರು.
ಈ ವೇಳೆ ಜಯಸಿಂಹರಾವ್‌, ಅರ್ಚಕರಾದ ನಾಗರಾಜು, ಮಂಜು ಭಾರ್ಗವ್‌ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!