ಹೈನುಗಾರಿಕೆ ನಂಬಿದವರ ಬದುಕಲ್ಲಿ ಆನಂದ

ಲಾಕ್‌ಡೌನ್‌ ಆದ್ರೂ ಸಮಸ್ಯೆ ಆಗಲಿಲ್ಲ- ಬಡವರ ಆರ್ಥಿಕ ಸಂಕಷ್ಟ ದೂರ- ಡಿ.ಕೃಷ್ಣಕುಮಾರ್‌ ಪರಿಶ್ರಮದ ಫಲ

165

Get real time updates directly on you device, subscribe now.

ಟಿ.ಎಚ್‌.ಆನಂದ್‌ ಸಿಂಗ್
ಕುಣಿಗಲ್‌:
ಕೋವಿಡ್‌ ಎರಡನೆ ಅಲೆಯ ಸತತ ಎರಡುವರೆ ತಿಂಗಳ ಲಾಕ್ ಡೌನ್‌ ಅವಧಿಯಲ್ಲಿ ಆರ್ಥಿಕ ಕಷ್ಟದಿಂದ ಬಳಲುತ್ತಿದ್ದ ಗ್ರಾಮಾಂತರ ಪ್ರದೇಶದ ಜನರಿಗೆ ಹೈನುಗಾರಿಕೆ ಕೈ ಹಿಡಿದಿದೆ. ಕಳೆದ ಲಾಕ್ ಡೌನ್‌ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಮೂಲಕ ಗ್ರಾಮಾಂತರ ಪ್ರದೇಶದ ಜನರು ತುಸು ನೆಮ್ಮದಿ ಕಂಡುಕೊಂಡಿದ್ದಾರೆ.
ತಾಲೂಕಿನಾದ್ಯಂತ ಹಲವು ರಾಜಕೀಯ ಏಳು ಬೀಳುಗಳ ನಡುವೆ ಹಾಲಿ ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿರುವ, ಪಿಎಲ್‌ಡಿ ಬ್ಯಾಂಕ್‌ ರಾಜ್ಯಾಧ್ಯಕ್ಷರಾಗಿರುವ ಡಿ.ಕೃಷ್ಣಕುಮಾರ್‌ ಕಳೆದ ಮೂರುವರೆ ದಶಕಗಳ ಸತತ ಪರಿಶ್ರಮದ ಫಲವಾಗಿ ಇಂದು 145 ಸಹಕಾರಿ ಹಾಲು ಉತ್ಪಾದಕರ ಸಂಘಗಳು, 25 ಉಪ ಸಂಘಗಳ ಮೂಲಕ ಒಟ್ಟಾರೆ 160 ಸಂಘಗಳು ಸಕ್ರಿಯವಾಗಿವೆ.
ಈ ಸಂಘಗಳಲ್ಲಿ ಹದಿಮೂರುವರೆ ಸಾವಿರ ಮಂದಿ ಹೈನುಗಾರರು ಸದಸ್ಯರಾಗಿದ್ದಾರೆ, ಸರಿ ಸುಮಾರು ಇಷ್ಟೆ ಕುಟುಂಬಗಳು ಹೈನುಗಾರಿಕೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಒಟ್ಟಾರೆ 45 ಸಾವಿರಕ್ಕೂ ಹಸು, ಎಮ್ಮೆಗಳಿಂದ ದಿನ ಒಂದಕ್ಕೆ ಒಂದುವರೆ ಲಕ್ಷ ಲೀಟರ್‌ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದೆ.
ಲಾಕ್ ಡೌನ್‌ ಅವಧಿಗಿಂತ ಹಿಂದೆ ಸುಮಾರು 1.10 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, ಲಾಕ್ ಡೌನ್‌ ಘೋಷಣೆಯಾದಾಗಿನಿಂದ ಉತ್ಪಾದನೆ ಪ್ರಮಾಣ 1.50 ಲಕ್ಷ ಲೀಟರ್ ಗೆ ಏರಿದೆ. 2021ರ ಏಪ್ರಿಲ್‌ ಮಾಹೆಯಲ್ಲಿ 12 ಕೋಟಿ ರೂ., ಮೇ ಮಾಹೆಯಲ್ಲಿ 11.90 ಕೋಟಿ ರೂ., ಜೂನ್‌ ಮಾಹೆಯಲ್ಲಿ ಸರಿ ಸುಮಾರು 11.90 ಕೋಟಿ ರೂ. ಗಳನ್ನು ಹೈನುಗಾರರಿಗೆ ಪಾವತಿ ಮಾಡಲಾಗಿದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 35.80 ಕೋಟಿ ರೂಪಾಯಿ ಹೈನುಗಾರರಿಗೆ ನೆರವಾಗಿದೆ. ಇದರ ಜೊತೆಯಲ್ಲಿ ರಾಸುಗಳಿಗೆ ವಿಮೆ, ಹೈನುಗಾರರು ಅನಾರೋಗ್ಯಕ್ಕೆ ಈಡಾದಾಗ ಶೇ.25 ರಷ್ಟು ಚಿಕಿತ್ಸಾವೆಚ್ಚ ಪಾವತಿಗೂ ಕ್ರಮ ಕೈಗೊಳ್ಳಲಾಗಿದೆ. ಹೈನುಗಾರಿಕೆಗೆ ಮುಖ್ಯವಾಗಿ 1200 ಟನ್‌ ಮೇವನ್ನು ಪೂರೈಕೆ ಮಾಡಲಾಗಿದೆ. ಲಾಕ್ ಡೌನ್‌ ಕಾರಣ ಹೈನುಗಾರರು ಬ್ಯಾಂಕ್ ಗೆ ಪಟ್ಟಣ ಸೇರಿದಂತೆ ಹೋಬಳಿ ಕೇಂದ್ರಕ್ಕೆ ಬರುವುದನ್ನು ತಪ್ಪಿಸಲು ಯಾವುದೇ ಅವ್ಯವಹಾರಕ್ಕೆ ಆಸ್ಪದೆ ನೀಡದೆ, ಒಕ್ಕೂಟವು ನಷ್ಟ ಅನುಭವಿಸಿದರೂ ಹೈನುಗಾರರ ಮನೆ ಬಾಗಿಲಲ್ಲೆ ಬಟವಾಡೆಗೆ ಅವಕಾಶ ಮಾಡಿಕೊಟ್ಟು ಹೈನುಗಾರರ ಹಿತ ಕಾಪಾಡಲಾಗಿದೆ.
ತಾಲೂಕಿನ ಹೈನುಗಾರರು ಉತ್ಪಾದಿಸುವ ಹಾಲು ಸಂಗ್ರಹಣೆಗೆ 4 ಬಲ್ಕ್ ಮಿಲ್ಕ್ ಕೂಲರ್‌ ಸ್ಥಾಪಿಸಿದ್ದು ಇನ್ನು 22 ಬಿಎಂಸಿಗಳ ಸ್ಥಾಪನೆಗೆ ಕ್ರಮಕೈಗೊಳ್ಳುಲಾಗುತ್ತಿದ್ದು, ಎಡೆಯೂರು ಸಮೀಪದದಲ್ಲಿ 5ಎಕರೆ ಪ್ರದೇಶದಲ್ಲಿ ಬೃಹತ್‌ ಶಿಥಲೀಕರಣ ಘಟಕ ಸ್ಥಾಪನೆಗೆ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಸಿದ್ದು ಪ್ರಕ್ರಿಯೆ ಪೂರ್ಣಗೊಂಡಲ್ಲಿ ತಾಲೂಕಿನ ಹೈನುಗಾರಿಕೆ ಚಟುವಟಿಕೆಗೆ ಮತ್ತಷ್ಟು ವೇಗ ಹೆಚ್ಚಲಿದೆ ಎನ್ನಲಾಗಿದೆ.

ರೈತರು ಸ್ವಾಭಿಮಾನಿಗಳು
ಕುಣಿಗಲ್‌ ತಾಲೂಕಿನಲ್ಲಿ ಕೊವಿಡ್‌ ಸೇರಿದಂತೆ ಸಂಕಷ್ಟದ ಸಮಯದಲ್ಲಿ ರೈತರ ಆರ್ಥಿಕ ಸ್ವಾವಲಂಬನೆ ನಿಟ್ಟಿನಲ್ಲಿ ಅವರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಹೈನುಗಾರಿಕೆ ಪೂರಕವಾಗಿದೆ. ಫುಡ್‌ ಕಿಟ್‌ ಏನೆ ವಿತರಿಸಿದರು ಅದು ತಾತ್ಕಾಲಿಕ, ರೈತರು ಸ್ವಾಭಿಮಾನಿಗಳು, ಅವರು ಸ್ವಾಭಿಮಾನದ ಜೀವನ ನಡೆಸಲು ಪೂರಕವಾಗಲು, ಖಾಯಂ ಆಗಿ ಸ್ವಾವಲಂಬನೆಯಾಗಲು ಶಾಶ್ವತ ಕಾರ್ಯಕ್ರಮ ರೂಪಿಸಬೇಕೆಂಬುದೆ ನಮ್ಮ ಆಶಯ, ಹೈನುಗಾರಿಕೆ ಒಂದು ಹಂತಕ್ಕೆ ಸಹಕಾರಿಯಾಗಿದೆ ಎಂದು ತುಮಕೂರು ಹಾಲು ಒಕ್ಕೂಟದ ತಾಲೂಕು ನಿರ್ದೇಶಕ, ಪಿಎಲ್‌ಡಿ ಬ್ಯಾಂಕ್‌ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್‌ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!