ತುಮಕೂರು: ಕೊರೊನಾ ನಿರ್ವಹಣೆಯಲ್ಲಿ ದಾನಿಗಳ ನೆರವಿನ ಸೇವಾ ಕೊಡುಗೆ ಶ್ರೇಷ್ಠವಾದುದು ಎಂದು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಐಕ್ಯಾಟ್ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ಆಕ್ಸಿಜನ್ ಲೈನ್ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಐಕ್ಯಾಟ್ ಸಂಸ್ಥೆಯು ಕೊಡುಗೆ ರೂಪದಲ್ಲಿ ಜಿಲ್ಲಾಸ್ಪತ್ರೆಯ 75 ಹಾಸಿಗೆಗಳಿಗೆ ಆಮ್ಲಜನಕ ಕಲ್ಪಿಸಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಹಲವು ಸಂಕಷ್ಟದ ನಡುವೆಯೂ ವೈದ್ಯರು ಒಳಗೊಂಡಂತೆ ಎಲ್ಲರ ಸಹಕಾರದಿಂದ ಕೋವಿಡ್ ಎರಡನೇ ಅಲೆ ಗೆದ್ದಿದ್ದೇವೆ. ಈ ಗೆಲುವಿನ ಹಿಂದೆ ದಾನಿಗಳ ನೆರವಿನ ಫಲವೂ ಇದೆ. ಕೋವಿಡ್ ಎರಡನೇ ಅಲೆ ಅಪ್ಪಳಿಸಿದಾಗ ಆಮ್ಲಜನಕದ ಸಮಸ್ಯೆ ಎದುರಾದ ಸಂದರ್ಭದಲ್ಲಿ ಎನ್‌ಜಿಒಗಳು ಆಮ್ಲಜನಕ ಸೇರಿದಂತೆ ಇತರೆ ನೆರವು ನೀಡಿ ಕೊರೊನಾ ಎದುರಿಸುವಲ್ಲಿ ಸಹಕಾರಿಯಾಗಿದ್ದಾರೆ ಎಂದರು.
ಸೋಂಕಿತರ ಆರೈಕೆಗೆ ನಿಂತ ವೈದ್ಯರಂತೆಯೇ ಶುಶ್ರೂಕಿಯರ ಕಾರ್ಯವೂ ಅತ್ಯುತ್ತಮ, ಕಾಣದ ಕೊರೊನಾ ಎಂಬ ಮಹಾಮಾರಿ ವೈರಿ ವಿರುದ್ಧ ಯಾವುದೇ ಸಿದ್ಧತೆಗಳಿಲ್ಲದೆ ಯುದ್ಧ ಮಾಡಿದ್ದಾರೆ. ಆರೋಗ್ಯವಂತ ಸಮಾಜಕ್ಕೆ ಅವರ ಸೇವೆ ಅಕ್ಷರಶಃ ಸರ್ವ ಶ್ರೇಷ್ಠವಾದುದಾಗಿದೆ ಎಂದು ಹೇಳಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಕೊರೊನಾ ನಿರ್ವಹಣೆಗೆ ನೆರವಾಗುವ ಮೂಲಕ ದಾನಿಗಳು ವಾರಿಯರ್ಸ್ ಗಳಂತೆಯೇ ಸೇವೆ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಯ 75 ಹಾಸಿಗೆಗಳಿಗೆ ಆಮ್ಲಜನಕ ಪೈಪ್ ಲೈನ್ ಕಲ್ಪಿಸುವ ಮೂಲಕ ಐಕ್ಯಾಟ್ ಶ್ಲಾಘನೀಯ ಕೆಲಸ ಮಾಡಿದೆ ಎಂದರು.
ಎನ್‌ಜಿಓಗಳಲ್ಲಿ ಸೇವಾ ಮನೋಭಾವ ಮೂಡಿರುವುದು ಉತ್ತಮ ಬೆಳವಣಿಗೆ, ಆಮ್ಲಜನಕ ಸಾಂದ್ರಕ ಸೇರಿದಂತೆ ಆಮ್ಲಜನಕ ಘಟಕ ಸ್ಥಾಪನೆಗೂ ನೆರವು ನೀಡಿದ್ದಾರೆ. ಜೀವವನ್ನು ಉಳಿಸುವ ದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ, ಈ ನಿಟ್ಟಿನ ಕಾರ್ಯ ಮತ್ತಷ್ಟು ಮಾಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನೆರವಾಗಬೇಕು ಎಂದು ಹೇಳಿದರು.
ಐಕ್ಯಾಟ್ ಪೌಂಡೇಶನ್ ನ ನಿರ್ದೇಶಕಿ ಡಾ.ಶಾಲಿನಿ ನಲ್ವಾಡ್ ಮಾತನಾಡಿ, ಕೊರೊನಾ ಕಾಲಘಟ್ಟದಲ್ಲಿ ಪ್ರತಿಯೊಬ್ಬ ವೈದ್ಯರೂ ದೈಹಿಕ ರೋಗದ ಜೊತೆಗೆ ಮಾನಸಿಕ ಕಾಯಿಲೆಯನ್ನು ಗುಣ ಮಾಡುತ್ತಿದ್ದಾರೆ. ಕೋವಿಡ್ ಅಲೆ ಅಪ್ಪಳಿಸಿದಾಗ ಆರೋಗ್ಯ ಸಿಬ್ಬಂದಿ ಯುದ್ದೋಪಾಧಿಯಲ್ಲಿ ಸೇನಾನಿಯಂತೆ ಕರ್ತವ್ಯ ನಿರ್ವಹಿಸಿದ್ದಾರೆ. ಕಾಣದ ವೈರಸ್ ಶತ್ರು ವಿರುದ್ಧ ತಾನು, ತನ್ನದು, ತನ್ನ ಕುಟುಂಬವನ್ನೆಲ್ಲಾ ತೊರೆದು ಪ್ರಾಣದ ಹಂಗಿಲ್ಲದೆ ಜನರ ಜೀವಕ್ಕಾಗಿ ಹೋರಾಡಿದ್ದಾರೆ. ವೈದ್ಯಕೀಯ ಸೇವೆಯಂತೆಯೇ ಪೊಲೀಸ್ ಸೇರಿದಂತೆ ಇತರೆ ಎಲ್ಲಾ ಅಧಿಕಾರಿಗಳು ಹೋರಾಡಿದ್ದು, ಕೊರೊನಾ ನಿರ್ವಹಣೆಗೆ ದಾನಿಗಳು ಹೆಗಲಾಗಿದ್ದಾರೆ. ಅವರ ಸೇವೆಯೂ ಅವಿಸ್ಮರಣೀಯವಾಗಿದೆ ಎಂದರು. ಬಳಿಕ ತಮ್ಮ ಸಂಸ್ಥೆಯ ಸೇವಾ ಕಾರ್ಯಗಳ ಬಗ್ಗೆ ವಿವರಿಸಿದರು.
ಈ ವೇಳೆ ಜಿಲ್ಲಾ ಸರ್ಜನ್ ಡಾ.ಸುರೇಶ್ ಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಸ್ಥಾನಿಕ ವೈದ್ಯಾಧಿಕಾರಿ ಡಾ.ವೀಣಾ, ಕ್ಲೌಡ್‌ನೈನ್ ಕ್ಲಿನಕಲ್ ಮುಖ್ಯಸ್ಥ ಡಾ.ನಾಗನಿಶ್ಚಲ್ ಸೇರಿದಂತೆ ಅರ್ಜುನ್, ನಾಗಾರ್ಜುನ್, ಪ್ರತಾಪ್ ಇತರರಿದ್ದರು.
ಕೋವಿಡ್ ತಡೆಯುವಲ್ಲಿ ವೈದ್ಯರ ಕಾರ್ಯ ಶ್ಲಾಘನೀಯ: ಸಿದ್ದಲಿಂಗ ಶ್ರೀ
ಕೊರೊನಾ ತಡೆಗೆ ದಾನಿಗಳದ್ದು ಶ್ರೇಷ್ಠ ಕೊಡುಗೆ
Get real time updates directly on you device, subscribe now.
Prev Post
Comments are closed.