ಸಿದ್ದಿ ವಿನಾಯಕ ಮಾರುಕಟ್ಟೆಯಲ್ಲಿ ಶಾಪಿಂಗ್‌ ಮಾಲ್‌ ಕ್ಯಾನ್ಸಲ್

ಯೋಜನೆ ಕೈಬಿಡಲು ನಿರ್ಧಾರ: ಜ್ಯೋತಿಗಣೇಶ್

332

Get real time updates directly on you device, subscribe now.

ತುಮಕೂರು: ಬಹಳ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರದ ಶ್ರೀಸಿದ್ದಿವಿನಾಯಕ ಮಾರುಕಟ್ಟೆಯ ಜಾಗದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಬಹುಮಹಡಿ ಕಾರು ಪಾರ್ಕಿಂಗ್‌, ಬಹುಪಯೋಗಿ ಮಾಲ್‌ ಕಾಮಗಾರಿಯ ಯೋಜನೆಯನ್ನು ಕೈಬಿಡಲಾಗಿದೆ.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಪತ್ರಿಕಾ ಪ್ರಕಟಣೆ ಮೂಲಕ ಈ ವಿಷಯ ತಿಳಿಸಿದ್ದು, ಶ್ರೀಸಿದ್ದಿವಿನಾಯಕ ಮಾರುಕಟ್ಟೆಯ ಮೂಲ ಮಾಲೀಕತ್ವವು ತುಮಕೂರು ಮಹಾನಗರ ಪಾಲಿಕೆಯದ್ದಾಗಿದ್ದು, ತರಕಾರಿ ಮಾರುಕಟ್ಟೆ ಸ್ಥಾಪಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಹಸ್ತಾಂತರಿಸಲಾಗಿತ್ತು, ಈ ತರಕಾರಿ ಮಾರುಕಟ್ಟೆಯನ್ನು ಹೊಸದಾಗಿ ನಿರ್ಮಾಣವಾದ ಅಂತರಸನಹಳ್ಳಿ ಮಾರುಕಟ್ಟೆಗೆ ಸ್ಥಳಾಂತರಿಸಿದ ನಂತರ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಸದರಿ ಸ್ವತ್ತನ್ನು ತುಮಕೂರು ಮಹಾನಗರ ಪಾಲಿಕೆಗೆ ವರ್ಗಾಯಿಸಲು ನಿರ್ಧರಿಸಿ ಸ್ವತ್ತಿನ ಮೌಲ್ಯ ಪಾವತಿಸಲು ತಿಳಿಸಲಾಗಿತ್ತು, ಅದರಂತೆ ತುಮಕೂರು ಮಹಾನಗರ ಪಾಲಿಕೆಯು ಭಾಗಶಃ ಮೌಲ್ಯ ಪಾವತಿಸಿದ ನಂತರ ಮಾರುಕಟ್ಟೆ ಇಲಾಖೆ ಮತ್ತು ಮಹಾನಗರ ಪಾಲಿಕೆ ಮಧ್ಯೆ ತಕರಾರು ಉಂಟಾಗಿ ಕೋರ್ಟ್‌ ಮೆಟ್ಟಿಲೇರಿ ಈ ವಿವಾದ ನ್ಯಾಯಾಲಯದಲ್ಲಿತ್ತು. 2016 ರಲ್ಲಿ ಕೇಂದ್ರ ಸರ್ಕಾರ ತುಮಕೂರು ನಗರಕ್ಕೆ ಸ್ಮಾರ್ಟ್‌ಸಿಟಿ ಯೋಜನೆ ಮಂಜೂರು ಮಾಡಿದ ನಂತರ ಯೋಜನೆಯ ಭಾಗವಾಗಿ ಪಿಪಿಪಿ ಯೋಜನೆ ಅನುಷ್ಠಾನಗೊಳಿಸಬೇಕಾಗಿದ್ದು, ಅದರಂತೆ 23.02.2019 ರಂದು ಅಂದಿನ ಸಮ್ಮಿಶ್ರ ಸರ್ಕಾರದಲ್ಲಿ ಯು.ಟಿ.ಖಾದರ್‌ ಅವರು ನಗರಾಭಿವೃದ್ಧಿ ಸಚಿವರಾಗಿದ್ದ ಅವಧಿಯಲ್ಲಿ ಈ ಯೋಜನೆಗೆ ಆಡಳತಾತ್ಮಕ ಅನುಮೋದನೆ ನೀಡಲಾಯಿತು.
ಯೋಜನೆ ಸ್ಥಳವು ವಿವಾದದಲ್ಲಿದ್ದಿದ್ದರಿಂದ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೃಷಿ ಮಾರುಕಟ್ಟೆ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಪರಸ್ಪರ ಸಂಧಾನ ಮೂಲಕ ಸ್ಮಾರ್ಟ್‌ಸಿಟಿ ವತಿಯಿಂದ ಪಿಪಿಪಿ ಯೋಜನೆಯಡಿಯಲ್ಲಿ ನಿರ್ಮಿಸಲು ಪ್ರಸ್ತಾಪಿತ ಬಹುಮಹಡಿ ಕಾರು ಪಾರ್ಕಿಂಗ್ ಬಹುಪಯೋಗಿ ಮಾಲ್‌ ನಿಂದ ಬರುವ ಆದಾಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ತುಮಕೂರು ಮಹಾನಗರ ಪಾಲಿಕೆ ಶೇಖಡ 50ರ ಅನುಪಾತದಲ್ಲಿ ಆದಾಯ ಹಂಚಿಕೊಳ್ಳುವ ಒಡಂಬಡಿಕೆ ಮಾಡಿಕೊಂಡು ವಿವಾದಿತ ಸ್ಥಳವನ್ನು ಸ್ಮಾರ್ಟ್ ಸಿಟಿ ಇಲಾಖೆಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ. ಅದರಂತೆ ಸ್ಮಾರ್ಟ್ ಸಿಟಿ ಲಿಮಿಟೆಡ್ ನವರು ಎರಡು ಬಾರಿ ಟೆಂಡರ್‌ ಕರೆದರು ಯಾರು ಭಾಗವಹಿಸದೆ ಇದ್ದುದ್ದರಿಂದ ಮೂರನೆ ಬಾರಿ ಟೆಂಡರ್‌ ಕರೆದಾಗ ಏಕೈಕ ಬಿಡ್‌ ಸ್ವೀಕರಿಸಿದ್ದು, ಸ್ಮಾರ್ಟ್ ಸಿಟಿ ಲಿಮಿಟೆಡ್ ನವರು ಈ ಬಗ್ಗೆ ಮುಂದಿನ ಕ್ರಮ ವಹಿಸಲು ಪ್ರಕ್ರಿಯೆ ಪ್ರಾರಂಭಿಸಿದ ನಂತರ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದನ್ನು ಮನಗಂಡು ನಂತರ ಈ ಪ್ರಸ್ತಾವನೆ ಕೈಬಿಡುವಂತೆ ಜಿಲ್ಲಾ ಉಸ್ತವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಲ್ಲಿ ಮನವಿ ಮಾಡಲಾಗಿ ಸಚಿವರು ಈ ವಿಷಯವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ಸಿಂಗ್‌ ಅವರ ಗಮನಕ್ಕೆ ತಂದು ಈ ಯೋಜನೆ ಕೈ ಬಿಡಲಾಗುವುದೆಂದು ಭರವಸೆ ನೀಡಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!