ತುಮಕೂರು: ನಗರಕ್ಕೆ ನೀಡಿದ್ದ 125 ಕೋಟಿ ರೂ. ಗಳ ವಿಶೇಷ ಅನುದಾನದಲ್ಲಿ ಲಭ್ಯವಾಗುವ 45 ಕೋಟಿ ರೂ. ಗಳನ್ನು ನಗರದ ಎಲ್ಲಾ ವಾರ್ಡ್ ಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ನಗರದ 26ನೇ ವಾರ್ಡಿನಲ್ಲಿ 280 ಲಕ್ಷ ರೂ ವೆಚ್ಚದಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಕೈಗೊಂಡಿರುವ ಚರಂಡಿ ಮತ್ತು ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ನೀಡಿದ 1,250 ಕೋಟಿ ರೂ.ಗಳ ವಿಶೇಷ ಅನುದಾನದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದು ತಡವಾಗಿತ್ತು, ತುಮಕೂರು ನಗರಕ್ಕೆ ಬಂದಿರುವ 125 ಕೋಟಿ ರೂಗಳಲ್ಲಿ 24*7 ಕುಡಿಯುವ ನೀರು ಯೋಜನೆ ಮತ್ತು ಯುಜಿಡಿ ಕಾಮಗಾರಿಯ ಮ್ಯಾಚಿಂಗ್ ಗ್ರಾಂಟ್ ಕಳೆದು ಲಭ್ಯವಾಗುವ 45 ಕೋಟಿ ರೂ.ಗಳಲ್ಲಿ 26ನೇ ವಾರ್ಡ್ ನಲ್ಲಿ ಬಿ.ಹೆಚ್.ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ತುಮಕೂರು ನಗರದ 26ನೇ ವಾರ್ಡ್ ಗೆ ಬೇರೆ ವಾರ್ಡುಗಳಿಗಿಂತ ಹೆಚ್ಚಿನ ಅನುದಾನ ನೀಡಲಾಗಿದೆ. ಆದರೆ ವಾರ್ಡ್ ದೊಡ್ಡದಿರುವ ಕಾರಣ ಅಭಿವೃದ್ಧಿ ಕೆಲಸ ಅಷ್ಟಾಗಿ ಕಾಣುತ್ತಿಲ್ಲ. ಪ್ರಸ್ತುತ ಈ ವಾರ್ಡ್ ನಲ್ಲಿ ವೆಂಡರ್ ಜ್ಹೋನ್ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಜೋತಿಗಣೇಶ್ ತಿಳಿಸಿದರು.
ಮೇಯರ್ ಬಿ.ಜಿ.ಕೃಷ್ಣಪ್ಪ ಮಾತನಾಡಿ, ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣ ಸಂಬಂಧ ಹಲವಾರು ಕಾಮಗಾರಿ ನಗರದಲ್ಲಿ ಕೈಗೊಳ್ಳಲಾಗಿದೆ. ಪಾಲಿಕೆಗೆ ಬರುವ ಎಲ್ಲಾ ಅನುದಾನವನ್ನು ಸಮಾನವಾಗಿ 35 ವಾರ್ಡ್ ಗಳಿಗೂ ಹಂಚಿಕೆ ಮಾಡಲಾಗಿದೆ. ಪಾಲಿಕೆಯ ಸದಸ್ಯರು ಮತ್ತು ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದರು.
26ನೇ ವಾರ್ಡ್ ನ ಪಾಲಿಕೆ ಸದಸ್ಯ ಮಲ್ಲಿಕಾರ್ಜುನಯ್ಯ ಮಾತನಾಡಿ, ಇಡೀ ನಗರದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಯಾಗುವುದು ನಮ್ಮ ವಾರ್ಡ್ ನಿಂದ, ಈ ಹಿನ್ನೆಲೆಯಲ್ಲಿ ನಗರಪಾಲಿಕೆಯ ಅನುದಾನದಲ್ಲಿ ಸಾಕಷ್ಟು ಹಣವನ್ನು ವಾರ್ಡ್ ನ ಅಭಿವೃದ್ಧಿಗೆ ಶಾಸಕರು ನೀಡಿದ್ದಾರೆ. ರಸ್ತೆ, ಚರಂಡಿ ಸೇರಿದಂತೆ ಸ್ಮಾರ್ಟ್ ಸಿಟಿ, 14ನೇ ಹಣಕಾಸು ಯೋಜನೆಯಲ್ಲಿ ಬಹುಪಾಲು ಕಾಮಗಾರಿ ನಮ್ಮ ವಾರ್ಡ್ ನಲ್ಲಿ ನಡೆದಿವೆ. ಇದಕ್ಕಾಗಿ ನಾನು ಶಾಸಕರಾದ ಜೋತಿಗಣೇಶ್, ಪಾಲಿಕೆಯ ಮೇಯರ್, ಆಯುಕ್ತರು ಸೇರಿದಂತೆ ಎಲ್ಲರನ್ನು ಅಭಿನಂದಿಸುತ್ತೇನೆ. ಇದೊಂದು ಮಾದರಿ ವಾರ್ಡಾಗಬೇಕು ಎಂಬುದು ನಾಗರಿಕರ ಕನಸಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದರು.
ಈ ವೇಳೆ ಪಾಲಿಕೆಯ ಉಪಮೇಯರ್ ನಾಜೀಮಾಭಿ, ಮಾಜಿ ಮೇಯರ್ ಕಮಲಮ್ಮ, ಮುಖಂಡರಾದ ಕೊಪ್ಪಲ್ ನಾಗರಾಜು, ವಕೀಲರ ಸಂಘದ ಅಧ್ಯಕ್ಷ ಬಿ.ಪಿ.ಗೋಪಾಲಗೌಡ, ಹೆಚ್.ಇ.ಬಸವರಾಜು, ಚಂದ್ರಮೌಳಿ, ನಿರಂಜನ್, ವಿಶ್ವಮೂರ್ತಿ, ನಾಗೇಶ್, ಇಇ ಆಶಾ, ಎಇಇ ರೂಪಶ್ರೀ, ಎಇ ರವಿ ಮತ್ತಿತರರು ಇದ್ದರು.
ರಸ್ತೆ, ಚರಂಡಿ ನಿರ್ಮಾಣಕ್ಕೆ ಅನುದಾನ ಬಳಕೆ: ಶಾಸಕ
Get real time updates directly on you device, subscribe now.
Next Post
Comments are closed.