ತಹಶೀಲ್ದಾರ್‌ ಕುಮ್ಮಕ್ಕಿಗೆ ರೈತ ಕುಟುಂಬಗಳು ಕಂಗಾಲು- ರೈತ ಸಂಘದಿಂದ ಪ್ರತಿಭಟನೆ

ಶ್ರೀಮಂತ ಕುಟುಂಬಕ್ಕೆ ಸರ್ಕಾರಿ ಗೋಮಾಳ ಜಾಗ

423

Get real time updates directly on you device, subscribe now.

ತುಮಕೂರು: ಸುಮಾರು 40 ವರ್ಷಗಳಿಂದ ಸರಕಾರಿ ಗೋಮಾಳ ಉಳುಮೆ ಮಾಡುತ್ತಾ ಜೀವನ ನಡೆಸುತ್ತಾ ಇದ್ದ ಕುಟುಂಬವನ್ನು ಒಕ್ಕಲೆಬ್ಬಿಸಿ, ಸದರಿ ಜಾಗವನ್ನು ಶ್ರೀಮಂತ ಕುಟುಂಬವೊಂದಕ್ಕೆ ಸಾಗುವಳಿ ಚೀಟಿ ಮಾಡಿಕೊಟ್ಟಿರುವ ಕೊರಟಗೆರೆ ತಹಶೀಲ್ದಾರರ ಕ್ರಮ ಖಂಡಿಸಿ ಸೋಮವಾರ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದಪಟೇಲ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಂತ್ರಸ್ತ ಕುಟುಂಬದೊಂದಿಗೆ ಸುರಿವ ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನಾನಿರತ ರೈತ ಸಂಘ ಮತ್ತು ಹಸಿರುಸೇನೆಯ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ ಪಟೇಲ್‌, ಕೊರಟಗೆರೆ ತಾಲೂಕು ಅಕ್ಕಾಜಿಹಳ್ಳಿ ಸರ್ವೆ ನಂ. 33 ರಲ್ಲಿ ಬರುವ 641 ಎಕರೆ ಸರಕಾರಿ ಗೋಮಾಳದಲ್ಲಿ ಕಾಮಣ್ಣ ಬಿನ್‌. ಲೇ.ಚಿಕ್ಕನರಸಪ್ಪ ಮತ್ತು ದಾಳಿ ನರಸಪ್ಪ ಬಿನ್‌ ಲೇ.ಚಿಕ್ಕನರಸಪ್ಪ ಎಂಬುವವರು ತಲಾ ಎರಡು ಎಕರೆಯಂತೆ ಕಳೆದ 35- 40 ವರ್ಷಗಳಿಂದ ಉಳುಮೆ ಮಾಡಿ, ಮೆಕ್ಕೇಜೋಳ, ರಾಗಿ ಇನ್ನಿತರ ದಿನಸಿ, ಕಾಳು, ಆಹಾರ ಧಾನ್ಯಗಳನ್ನು ಬೆಳೆದು ಜೀವನ ನಡೆಸುತ್ತಿದ್ದು, ಸದರಿ ಜಮೀನಿಗಾಗಿ ಸರಕಾರಕ್ಕೆ ಫಾರಂ ನಂ.50- 53 ಮತ್ತು 57 ರಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ತಾಲೂಕು ಆಡಳಿತವೂ ಇವರ ಅರ್ಜಿ ಸಂಖ್ಯೆ 11415 ರ ಅನ್ವಯ 2003ರ ಡಿಸೆಂಬರ್‌ 04 ರಂದು ಸರ್ವೆ ನಕಾಶೆ ತಯಾರಿಸಿ, ಜಮೀನು ಗುರುತಿಸಿಕೊಟ್ಟಿದೆ. ಇದಕ್ಕೆ ಮೇಲಿನವರು ಕಿಮ್ಮತ್ತನ್ನು ಸಹ ಕಟ್ಟಿದ್ದಾರೆ.
ಆದರೆ ಕೊರಟಗೆರೆ ತಹಶೀಲ್ದಾರರು ಏಕಾಏಕಿ ಕೊರಟಗೆರೆ ತಾಲೂಕಿನವರಲ್ಲದ ಬೆಂಗಳೂರಿನಲ್ಲಿ ವಾಸವಾಗಿರುವ ಸರಸ್ವತಿ ಕೋಂ ರಾಮಣ್ಣ, ಉಮೇಶ್‌ ಬಿನ್‌ ಕಾಮಯ್ಯ, ರಾಹುಲ್‌ ಬಿನ್‌ ಗಜೇಂದ್ರಕುಮಾರ್, ಕಲಾವತಿ ಕೋಂ ಸಿದ್ದರಾಮಯ್ಯ ಅವರಿಗೆ 2017ರಲ್ಲಿ ಸಾಗುವಳಿ ಚೀಟಿ ನೀಡಿ, ಸುಮಾರು 40 ವರ್ಷಗಳಿಂದ ಉಳುಮೆ ಮಾಡಿ, ಜೀವನ ನಡೆಸುತ್ತಿದ್ದ ಕಾಮಣ್ಣ ಮತ್ತು ನರಸಪ್ಪ ಅವರ ಕುಟುಂಬವನ್ನು ಪೊಲೀಸ್‌ ಬಲ ಬಳಸಿ ಒಕ್ಕಲೆಬ್ಬಿಸಿ ಅನುಭವದಲ್ಲಿದ್ದ ಭೂಮಿಯಿಂದ ಆಚೆಗೆ ಕಳುಹಿಸಿದ್ದಾರೆ. ಇದು ಅನ್ಯಾಯ ಮತ್ತು ಅಕ್ರಮ, ಕೊರಟಗೆರೆ ತಹಶೀಲ್ದಾರರು ಸರಕಾರದ ಗೋಮಾಳದ ಜಮೀನುಗಳನ್ನು ಖಾಸಗಿ ಭೂ ಮಾಫಿಯದವರಿಗೆ ಮಾರಾಟ ಮಾಡುವ ಮೂಲಕ ಹತ್ತಾರು ವರ್ಷಗಳ ಕಾಲ ಭೂಮಿ ಉಳುಮೆ ಮಾಡಿದವರನ್ನು ನಿರ್ಗತಿಕರನ್ನಾಗಿಸುತ್ತಿದ್ದಾರೆ. ಸರಕಾರ ಕೂಡಲೇ ಬೆಂಗಳೂರಿನ ವ್ಯಕ್ತಿಗಳಿಗೆ ನೀಡಿರುವ ಸಾಗುವಳಿ ಪತ್ರವನ್ನು ರದ್ದುಗೊಳಿಸಿ, ಕಾಮಣ್ಣ ಮತ್ತು ನರಸಪ್ಪ ಅವರಿಗೆ ಮರು ಮಂಜೂರು ಮಾಡಿಕೊಡಬೇಕೆಂಬುದು ರೈತ ಸಂಘ ಮತ್ತು ಹಸಿರು ಸೇನೆಯ ಒತ್ತಾಯವಾಗಿದೆ. ಜಿಲ್ಲಾಡಳಿತ ಈ ಬಗ್ಗೆ ನಿರ್ಲಕ್ಷ ತೋರಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಆನಂದ ಪಟೇಲ್‌ ತಿಳಿಸಿದರು.
ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಾಧ್ಯಕ್ಷ ಧನಂಜಯ್‌ ಆರಾಧ್ಯ ಮಾತನಾಡಿ, ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರರ ಕ್ಷೇತ್ರದಲ್ಲಿ ಬಡವರಿಗೆ, ರೈತರಿಗೆ ನ್ಯಾಯವಿಲ್ಲದಂತಾಗಿದೆ. ಅಧಿಕಾರಿಗಳು ತಮ್ಮ ಮನಸೋ ಇಚ್ಚೆ ಸರಕಾರಿ ಗೋಮಾಳಗಳನ್ನು ಯಾರಿಗೆಬೇಕು ಅವರಿಗೆ ಮಾರಾಟ ಮಾಡುತ್ತಿದ್ದಾರೆ. ಬಡವರು ಬದುಕುವುದೇ ಕಷ್ಟವಾಗಿದೆ, ಕೂಡಲೇ ಶಾಸಕರು ಗಮನಹರಿಸಿ ರೈತರಾದ ಕಾಮಣ್ಣ ಮತ್ತು ನರಸಪ್ಪ ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು, ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ನುಡಿದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಶಿರಾ ಅಧ್ಯಕ್ಷ ಸಣ್ಣದ್ಯಾಮಯ್ಯ, ಕೊರಟಗೆರೆ ಅಧ್ಯಕ್ಷ ಸಿದ್ದರಾಜು, ಶಿವಾನಂದ್‌, ಪುಟ್ಟರಾಜು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!