ತುಮಕೂರು: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಹೆಚ್ಚಿದ್ದು, ಗಣಿಗಾರಿಕೆಯ ನಿರಂತರ ಬ್ಲಾಸ್ಟ್ ನಿಂದ ಕೆಆರ್‌ಎಸ್ ಡ್ಯಾಂಗೆ ಅಪಾಯವಿದೆ ಎಂದು ಹೇಳಿಕೆ ನೀಡಿದ ಸಂಸದೆ ಸುಮಲತ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಖಂಡನೀಯ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಡಾ.ವೆಂಕಟಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿ, ತುಮಕೂರು ಸೇರಿದಂತೆ ರಾಜ್ಯದಲ್ಲಿ ಹಲವಾರು ಕಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಆದರೆ ಕನ್ನಡಿಗರ ಜೀವನಾಡಿಯಾದ ಕೃಷ್ಣರಾಜ ಸಾಗರ ಜಲಾಶಯದ ಸುತ್ತಮುತ್ತ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ. ಇದನ್ನು ಪ್ರಶ್ನಿಸಿದ ಸಂಸದರನ್ನು ಹೀನಾಯವಾಗಿ ನಡೆಸಿಕೊಳ್ಳುವ ಮೂಲಕ ಜೆಡಿಎಸ್ ಪಕ್ಷದ ಕಾರ್ಯಕರ್ತರು ವಿರೋಧಿ ನೀತಿ ತೋರಿಸುತ್ತಿದ್ದಾರೆ. ಇವರಿಗೆ ಬೆಂಬಲವಾಗಿ ಜುಲೈ 17 ರಂದು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಕ್ರಮ ಗಣಿಗಾರಿಕೆ ನಿಲ್ಲಿಸಿ, ಕೆಆರ್‌ಎಸ್ ಉಳಿಸಿ ಎಂಬ ಘೋಷಣೆಯೊಂದಿಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಕೆಆರ್‌ಎಸ್ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಪ್ರಮುಖ ಪಾತ್ರವಿದೆ. ಇದರ ವಿರುದ್ಧ ನ್ಯಾಯಾಂಗ ತನಿಖೆ ನಡೆಸಬೇಕೆಂಬುದು ನಮ್ಮ ಒತ್ತಾಯವಾಗಿದೆ. ಸರಿಯಾದ ತನಿಖೆ ನಡೆದರೆ ಮಂಡ್ಯ ಜಿಲ್ಲೆಯ ಅನೇಕ ರಾಜಕಾರಣಿಗಳು, ಮುಖಂಡರು ಜೈಲಿಗೆ ಹೋಗಲಿದ್ದಾರೆ, ಹಾಗಾಗಿ ನಾವು ಸಂಸದರನ್ನು ಬೆಂಬಲಿಸುತ್ತಿರುವುದಾಗಿ ಡಾ.ವೆಂಕಟಸ್ವಾಮಿ ತಿಳಿಸಿದರು.
ಸರಕಾರ 1978ರಲ್ಲಿ ದಲಿತರಿಗೆ ಮಂಜೂರಾಗಿದ್ದ ಸರಕಾರದ ದರಕಾಸ್ತು ಜಮೀನಿಗಳನ್ನು ಬೇರೆಯವರಿಗೆ ಪರಭಾರೆ ತಡೆಯುವ ಕಾಯ್ದೆಯನ್ನು ಜಾರಿಗೆ ತಂದಿದೆ. ಆದರೆ ಇದುವರೆಗೂ ಸರಿಯಾದ ರೀತಿ ಕಾಯ್ದೆ ಜಾರಿಗೆ ಬಂದಿಲ್ಲ. ತುಮಕೂರು ಜಿಲ್ಲೆಯಲ್ಲಿಯೇ ಸುಮಾರು 4,000 ಕೇಸು ಇತ್ಯರ್ಥವಾಗದೆ ಬಾಕಿ ಇವೆ. ದಲಿತರ ಭೂಮಿಯನ್ನು ದಲಿತರಿಗೆ ವಾಪಸ್ ಕೊಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಈಗಾಗಲೇ ಕರಡನ್ನು ತಯಾರಿಸಿ ಕೊಡಲಾಗಿದೆ. ಸರಕಾರ ಅದನ್ನು ಸಚಿವ ಸಂಪುಟದ ಮುಂದಿಟ್ಟು ಚರ್ಚಿಸಿ, ಅಂಗೀಕರಿಸಬೇಕೆಂದು ಒತ್ತಾಯಿಸಿದರು.
ಹಲವು ತಲೆಮಾರುಗಳಿಂದ ದಲಿತ ಸಮುದಾಯಕ್ಕೆ ಸೇರಿದ 10 ಸಾವಿರಕ್ಕೂ ಹೆಚ್ಚು ಜನ ಗ್ರಾಮ ಸಹಾಯಕರಾಗಿ ಹತ್ತಾರು ವರ್ಷಗಳಿಂದ ಅತಿ ಕಡಿಮೆ ಗೌರವಧನಕ್ಕೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ತಾತ, ತಂದೆಯವರು ತೋಟಿ, ತಳವಾರಿಕೆ ಯಂತಹ ಬಿಟ್ಟಿ ಚಾಕರಿ ಮಾಡಿದವರು, ಇಂದು ಅವರ ಮಕ್ಕಳು ಗ್ರಾಮ ಸಹಾಯಕರಾಗಿ ದುಡಿಯುತ್ತಿದ್ದಾರೆ. ಅವರನ್ನು ಸರಕಾರ ಖಾಯಂ ಮಾಡುವವಂತೆ ಹಲವಾರು ಹೋರಾಟಗಳು ನಡೆದರು, ಆಳವ ಸರಕಾರಗಳು ಗಮನ ಹರಿಸುತ್ತಿಲ್ಲ. ಈಗಲಾದರೂ ಸರಕಾರ ಅವರನ್ನು ಖಾಯಂ ಮಾಡುವ ಮೂಲಕ ಶೋಷಣೆ ತಪ್ಪಿಸುವಂತೆ ಡಾ.ವೆಂಕಟಸ್ವಾಮಿ ಒತ್ತಾಯಿಸಿದರು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಈ ಬಾರಿಯ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು, ತುಮಕೂರು ಜಿಲ್ಲೆಯ ಜವಾಬ್ದಾರಿಯನ್ನು ರಾಮಯ್ಯ ಅವರಿಗೆ ನೀಡಲಾಗಿದೆ. ಅವರು ಸಭೆ ನಡೆಸಿ, ಸ್ಪರ್ಧಿಸುವ ವ್ಯಕ್ತಿಗಳ ವಿವರ ಪಡೆದು, ನಮ್ಮ ಗಮನಕ್ಕೆ ತರಲಿದ್ದಾರೆ ಎಂದು ಡಾ.ವೆಂಕಟಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆರ್‌ಪಿಐನ ರಾಜ್ಯ ಮುಖಂಡರಾದ ಪಿಳ್ಳರಾಜು ಬೋಸಪ್ಪ, ಬಸವರಾಜು ಇಂಡ್ಲವಾಡಿ, ಭವಾನಿ ಪ್ರಸಾದ್, ತುಮಕೂರು ಜಿಲ್ಲಾ ಮುಖಂಡರಾದ ರಾಮಯ್ಯ, ನಟರಾಜು, ಚೇತನ್ ಲೋಕೇಶ್ ಇದ್ದರು.
ಆರ್‌ಪಿಐ ನಿಂದ ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಭಟನೆ
Get real time updates directly on you device, subscribe now.
Next Post
Comments are closed.