ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಜಯಚಂದ್ರ ಕಿಡಿ

ಅಧಿಕಾರದಲ್ಲಿರುವ ನೈತಿಕತೆ ಬಿಜೆಪಿಗೆ ಇಲ್ಲ

167

Get real time updates directly on you device, subscribe now.

ಶಿರಾ: ಬದಲಾವಣೆ ಮತ್ತು ಒಳ್ಳೆ ದಿನಗಳನ್ನು ತರುವ ಹೆಸರಿನಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ಬಡ ಜನರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಬಡವರ ಪರವಾಗಿ ಕೆಲಸ ಮಾಡಲು ಆಗದೆ ಹೋದಲ್ಲಿ, ಅಧಿಕಾರದಲ್ಲಿ ಉಳಿಯುವ ನೈತಿಕತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಜಯಚಂದ್ರ ಕಿಡಿಕಾರಿದರು.
ಕಾಂಗ್ರೆಸ್‌ ಪಕ್ಷದ ವತಿಯಿಂದ ಮಂಗಳವಾರ ನಗರದಲ್ಲಿ ಪೆಟ್ರೋಲ್‌, ಗ್ಯಾಸ್‌ ಮತ್ತಿತರೆ ಅವಶ್ಯಕ ವಸ್ತುಗಳ ಬೆಲೆ ಏರಿಕೆ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ವೇಳೆ ಮಾತನಾಡಿ, ಜಾತಿ, ಧರ್ಮ ಎತ್ತಿಕಟ್ಟಿ ಅಧಿಕಾರ ಹಿಡಿದಿದ್ದೀರಿ, ಜನರಿಗೆ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ ಮಾಜಿ ಸಚಿವರು, ಕಪ್ಪು ಹಣ ವಾಪಸ್‌ ತರುವ ನೆಪದಲ್ಲಿ ನೋಟು ಅಮಾನೀಕರಣ ಮಾಡಿದ ಪ್ರಧಾನಿ, ಈವರೆಗೆ ಒಂದು ಪೈಸೆಯಷ್ಟು ಕಪ್ಪು ಹಣ ವಾಪಸ್‌ ತಂದಿಲ್ಲ. ಬೆಲೆ ಏರಿಕೆ ನಿಯಂತ್ರಣ ಸಾಧ್ಯವಿಲ್ಲದೆ ಹೋದರೆ, ನೀವು ಏಕೆ ಅಧಿಕಾರದಲ್ಲಿ ಇರಬೇಕು ಎಂದು ಪ್ರಶ್ನಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ನಿಮ್ಮ ಕೈನಲ್ಲಿ ಇಲ್ಲದೇ ಇರಬಹುದು, ಆದರೆ ಟ್ಯಾಕ್ಸ್ ಕಡಿಮೆ ಮಾಡುವ ಮೂಲಕ ಬೆಲೆ ನಿಯಂತ್ರಿಸಲು ಸಾಧ್ಯವಿದೆ. ಆದರೆ ಅವೈಜ್ಞಾನಿಕ ಜಿಎಸ್‌ಟಿ ಹೇರುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ. ನೀರವ್‌ ಮೋದಿ, ಆದಾನಿ, ಅಂಬಾನಿ, ಮಲ್ಯ ರಂಥವರ ಸಾವಿರಾರು ಕೋಟಿ ಸಾಲ ಮಂಜೂರು ಮಾಡಿದ್ದೇ ಕೇಂದ್ರದ ಸಾಧನೆ, ಇಂಥ ಸರ್ಕಾರ ಬೇಕಾ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ವಿರುದ್ಧವೂ ಕಿಡಿಕಾರಿದ ಟಿಬಿಜೆ, ಕಾಂಗ್ರೆಸ್‌ ಪಕ್ಷ ಐದು ವರ್ಷದಲ್ಲಿ ಜಾರಿಗೆ ತಂದ ಜನಪ್ರಿಯ ಕಾರ್ಯಕ್ರಮ ಮುಚ್ಚುವ ಕೆಲಸ ಮಾಡಿದ್ದೀರಿ, ಬಡವರಿಗೆ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು 2 ಕೆಜಿಗೆ ಇಳಿಸಿದ್ದೀರಿ, ಅದನ್ನೇನು ನಿಮ್ಮಪ್ಪನ ಮನೆಯಿಂದ ಕೊಡ್ತೀರಾ? ಜನರ ಹಣದಲ್ಲಿ ಜನರಿಗಾಗಿ ಒಳ್ಳೆಯ ಕೆಲಸ ಮಾಡಿ, ಕೋವಿಡ್ ನಿಂದಾಗಿ ಸತ್ತವರಿಗೆ ಸರ್ಕಾರ ಪರಿಹಾರ ಕೊಡುತ್ತಿಲ್ಲ ಎಂದು ಆಪಾದಿಸಿದರು.
ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಕಾರ್ಯಕರ್ತರೇ ಪಕ್ಷದ ಶಕ್ತಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡಿ ಎಂದರು.
ಇದಕ್ಕೂ ಮುನ್ನ ಟಿಬಿಜೆ ಅವರ ನಿವಾಸದ ಬಳಿಯಿಂದ ಹೊರಟ ಸೈಕಲ್‌ ಮತ್ತು ಎತ್ತಿನ ಬಂಡಿ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬರಗೂರು ನಟರಾಜ್‌, ಪಿ.ಆರ್‌.ಮಂಜುನಾಥ್‌, ಸಂಜಯ ಜಯಚಂದ್ರ, ನಗರಸಭೆ ಮಾಜಿ ಅಧ್ಯಕ್ಷ ಅಮಾನುಲ್ಲಾಖಾನ್‌, ತಾಪಂ ಸದಸ್ಯ ಪುಟ್ಟರಾಜು, ಅಬ್ದುಲ್ಲಾಖಾನ್‌, ರೂಪೇಶ್‌ ಕೃಷ್ಣಯ್ಯ, ಅಜಯ್‌ ಕುಮಾರ್‌, ದಿವಾಕರ್‌, ವಾಜರಹಳ್ಳಿ ರಮೇಶ್‌, ಡಿ.ಸಿ.ಅಶೋಕ್‌, ಜಿ.ರಘು, ಷೇಕ್‌ ಅಹಮದಿ, ಗೋಣಿಹಳ್ಳಿ ದೇವರಾಜು, ಬಸವರಾಜು, ಮಹಿಳಾ ಅಧ್ಯಕ್ಷೆ ರೇಖಾ, ತಾಪಂ ಸದಸ್ಯೆ ಮಂಜುಳಾಬಾಯಿ, ತಿಪ್ಪೇಸ್ವಾಮಿ, ಶಿವಕುಮಾರ್‌, ಹಾರೋಗೆರೆ ಮಹೇಶ್‌, ಲಕ್ಷ್ಮೀಕಾಂತ್‌ ಮತ್ತಿತರರು ಇದ್ದರು.

ನಾಚಿಕೆ ಇಲ್ಲವೇ?
ಉಪ ಚುನಾವಣೆ ವೇಳೆ ಬಿಜೆಪಿ ಶಿರಾದ ಪ್ರವಾಸಿ ಮಂದಿರ ವೃತ್ತದಲ್ಲಿ ಮದಲೂರು ಕೆರೆಗೆ ನೀರು ಹರಿಸುವ ಭರವಸೆ ನೀಡಿ ಭಾಷಣ ಮಾಡಿತ್ತು, ಈಗ ಅದೇ ಜಾಗದಲ್ಲಿ ನಿಂತು ಮಾತನಾಡಬೇಕು ಎನಿಸುತ್ತಿದ್ದು, ಶಿರಾ ದೊಡ್ಡ ಕೆರೆಯಲ್ಲಿ ನೀರು ಇದ್ದ ಸಂದರ್ಭದಲ್ಲೂ ಮನೆಗಳಿಗೆ ಮಾತ್ರ ಕೊಚ್ಚೆ ನೀರು ಬರ್ತಿದೆ, ನೀರು ಶುದ್ಧೀಕರಣ ಸರಿಯಾಗಿ ಆಗುತ್ತಿಲ್ಲ, ಮಿಷನ್‌ ಕೆಟ್ಟಿದೆ ಎನ್ನುವ ಮಾಹಿತಿ ಇದೆ. ಶಾಸಕ ಮತ್ತು ಅಧಿಕಾರಿಗಳಿಗೆ ಈ ಬಗ್ಗೆ ನಾಚಿಕೆ ಆಗುತ್ತಿಲ್ಲವೇ ಎಂದು ಜಯಚಂದ್ರ ಪ್ರಶ್ನಿಸಿದರು.

Get real time updates directly on you device, subscribe now.

Comments are closed.

error: Content is protected !!