ಮಧುಗಿರಿ ಶಾಸಕ ನನಗೆ ಯಾವುದೇ ಸಹಕಾರ ನೀಡ್ತಿಲ್ಲ

ಅವರು ಯಾರಿಂದ ಶಾಸಕನಾಗಿದ್ದು ಎಂಬುದನ್ನು ಮರೆತಂತ್ತಿದೆ: ಜಿಎಸ್‌ಬಿ

486

Get real time updates directly on you device, subscribe now.

ಮಧುಗಿರಿ: ಜಿಲ್ಲೆಗೆ 7 ಸಾವಿರ ಕಿಟ್‌ ಬಂದಿದ್ದು, ಮಧುಗಿರಿ ತಾಲೂಕಿಗೆ 3 ಸಾವಿರ ಕಿಟ್‌ ನೀಡಿದ್ದೇನೆ ಎಂದು ಸಂಸದ ಜಿ.ಎಸ್‌.ಬಸವರಾಜ್‌ ತಿಳಿಸಿದರು.
ಪಟ್ಟಣದ ಪುರಸಭೆಯಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಹಾಗೂ ಅಸಂಘಟಿತ ಕಾರ್ಮಿಕರಿಗೆ ಆಹಾರದ ಕಿಟ್‌ ವಿತರಣೆ ಮಾಡಿ ಮಾತನಾಡಿ, ಮಧುಗಿರಿಯಲ್ಲಿ ನನ್ನ ಚುನಾವಣೆಗೆ ಅತಿ ಹೆಚ್ಚು ಮತ ನೀಡಿದ್ದು, ಹೀಗಾಗಿ ಮಧುಗಿರಿಗೆ 3 ಸಾವಿರ ಕಿಟ್‌ ಕಳುಹಿಸಲಾಗಿದೆ. ದೇಶದಲ್ಲಿನ 80 ಕೋಟಿ ಬಡವರಿಗಾಗಿ ಕಿಟ್‌ ವಿತರಣೆ ಮಾಡುತ್ತಿದ್ದು, 1 ಲಕ್ಷ ಕೋಟಿ ಅನುದಾನವನ್ನು ಪ್ರಧಾನಿಗಳು ನೀಡಿದ್ದಾರೆ. ಇಲಾಖೆಯಿಂದ ಗುರುತಿನ ಚೀಟಿ ಪಡೆದು ಮತ್ತಷ್ಟು ಸೌಲಭ್ಯ ಪಡೆಯಬೇಕು. ಮಧುಗಿರಿ ತಾಲ್ಲೂಕು ಅತ್ಯಂತ ಬರಪೀಡಿತ ತಾಲ್ಲೂಕಾಗಿದ್ದು ಉದ್ಯೋಗ ಹೆಚ್ಚಳಕ್ಕಾಗಿ ಜವಳಿ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿದ್ದು, ಅದಕ್ಕಾಗಿ 1 ಸಾವಿರ ಎಕರೆ ಭೂಪ್ರದೇಶದಲ್ಲಿ ಜವಳಿ ಪಾರ್ಕ್‌ ನಿರ್ಮಾಣ ಮಾಡಲಾಗುವುದು, ಇದರಿಂದ 50- 80 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ, ಎಲ್ಲರೂ 3ನೇ ಅಲೆ ತಡೆಯಲು ತಪ್ಪದೆ ಲಸಿಕೆ ಪಡೆಯುವಂತೆ ತಿಳಿಸಿದರು.
ನೀರಾವರಿಗೆ ಆದ್ಯತೆ: ತಾಲೂಕಿನ ಎತ್ತಿನಹೊಳೆ ನೀರಾವರಿ ಯೋಜನೆಗಾಗಿ ಮಾಜಿ ಶಾಸಕ ಕೆ.ಎನ್‌.ರಾಜಣ್ಣನ ಕಾಲದಲ್ಲಿ 1.5 ಟಿಎಂಸಿ ನೀರು ಲಭ್ಯವಿತ್ತು, ಈಗ ಅದನ್ನು 4.5 ಟಿಎಂಸಿಗೆ ಹೆಚ್ಚಿಸಲಾಗಿದ್ದು, ಇಲ್ಲಿನ ಶಾಸಕ ನನಗೆ ಯಾವುದೇ ಸಹಕಾರ ನೀಡುತ್ತಿಲ್ಲ, ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯ ಸರ್ಕಾರದೆಂದು ಪ್ರಚಾರ ಪಡೆಯುತ್ತಿದ್ದಾರೆ, ಅವರು ಯಾರಿಂದ ಶಾಸಕನಾಗಿದ್ದು ಎಂಬುದನ್ನು ಮರೆತಂತಿದೆ ಎಂದು ಶಾಸಕರನ್ನು ಏಕ ವಚನದಲ್ಲೇ ಮಾತನಾಡಿದ ಸಂಸದರು ವಿಧಾನಸಭೆ ಚುನಾವಣೆಯಲ್ಲಿ ತಾನು ಯಾರ ಸಹಕಾರದಿಂದ ಶಾಸಕರಾದರು ಎಂದು ನೆನಪಿಸಿಕೊಳ್ಳಲಿ ಎಂದರು.
ಹಾಗೆಯೇ ಇಲ್ಲಿನ ಬಿಜೆಪಿ ತಾಲೂಕು ಅಧ್ಯಕ್ಷನಿಗೆ ಯಾವುದೇ ಜವಾಬ್ದಾರಿಯಿಲ್ಲದಾಗಿದೆ, ಎಲ್ಲೆಲ್ಲೋ ಅಲೆದಾಡುತ್ತಿದ್ದು ನನಗೆ ಲೆಕ್ಕಕ್ಕಿಲ್ಲ ಎಂದು ಸಂಸದರು ಸಿಡಿಮಿಡಿಗೊಂಡರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್‌ ಎಂ. ಆಲದಕಟ್ಟೆ ಮಾತನಾಡಿ, ಕೋವಿಡ್‌ ಲಾಕ್ ಡೌನ್‌ ಹಿನ್ನಲೆಯಲ್ಲಿ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರು ಹಸಿವಿನಿಂದ ಪಾರಾಗಲು ಸರ್ಕಾರದಿಂದ ಈ ಆಹಾರದ ಕಿಟ್‌ ನೀಡಲಾಗುತ್ತಿದೆ, ಇದನ್ನು ಇಂದು ಸಾಂಕೇತಿಕವಾಗಿ ನೀಡಿದ್ದು, ಉಳಿದಂತೆ ಗುರುತಿನ ಚೀಟಿ ಹೊಂದಿರುವ ಕಾರ್ಮಿಕರಿಗೆ ವಿತರಣೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಕೇಂದ್ರ ರೇಷ್ಮೇ ನಿಗಮದ ನಿರ್ದೇಶಕ ಶಿವಪ್ರಸಾದ್‌ ಮಾತನಾಡಿದರು. ಜಿಲ್ಲಾ ಬಾಲ ಕಾರ್ಮಿಕ ಅಧಿಕಾರಿ ರವಿ, ಪುರಸಭೆ ಅಧ್ಯಕ್ಷ ತಿಮ್ಮರಾಜು, ಉಪಾಧ್ಯಕ್ಷೆ ರಾಧಿಕಾ ಆನಂದ್‌, ಸದಸ್ಯರಾದ ಲಾಲಪೇಟೆ ಮಂಜುನಾಥ್‌, ನಟರಾಜು, ಸುಜಾತ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸಮೂರ್ತಿ, ಮುಖಂಡರಾದ ಎಸ್‌ಬಿಟಿ ರಾಮು, ಶಂಕರನಾರಾಯಣ್‌, ಆನಂದ್‌, ಷಾಜೂ, ಉಮೇಶ್‌, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಹೆಬ್ಬಾಕ, ಗ್ರೇಡ್‌ 2 ತಹಶೀಲ್ದಾರ್‌ ವರದರಾಜು, ಕಮಲಮ್ಮ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!