ಎತ್ತಿನಹೊಳೆಗೆ ಜಮೀನು ಕೊಟ್ಟವರಿಗೆ ಸಮಾನ ಪರಿಹಾರ ಕೊಡಿ

ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಆಗ್ರಹ

373

Get real time updates directly on you device, subscribe now.

ಕೊರಟಗೆರೆ: ಎತ್ತಿನಹೊಳೆ ಯೋಜನೆಯ ಬೈರಗೊಂಡ್ಲು ಬಫರ್ ಡ್ಯಾಂ ನಿರ್ಮಾಣಕ್ಕೆ ಭೂಸ್ವಾಧೀನ ಆಗುವ ಕೊರಟಗೆರೆಯ ರೈತರ ಪ್ರತಿ ಎಕರೆಗೆ 30 ಲಕ್ಷ ಪರಿಹಾರ ನೀಡಿದರೆ ಮಾತ್ರ ಜಮೀನು, ರಾಜ್ಯ ಸರಕಾರ ಸಮಾನ ಪರಿಹಾರಕ್ಕೆ ಒಪ್ಪದಿದ್ದರೆ ರೈತರ ಒಂದಿಚ್ಚು ಜಮೀನಿನನ್ನು ಕೊಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಖಡಕ್ ಎಚ್ಚರಿಕೆ ನೀಡಿದರು.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಯಲಚಿಗೆರೆ ಗ್ರಾಮದಲ್ಲಿ ಕಂದಾಯ, ಕೃಷಿ, ರೇಷ್ಮೆ, ಪಶು, ತೋಟಗಾರಿಕೆ, ಅರಣ್ಯ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಏರ್ಪಡಿಸಲಾಗಿದ್ದ 2021- 22ನೇ ಸಾಲಿನ ಕೃಷಿ ಅಭಿಯಾನದ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಸರಕಾರ ರೈತರಿಗೆ ವಿರೋಧವಾದ ಕಾನೂನು ಜಾರಿಗೆ ತಂದಿದೆ. ಎಪಿಎಂಸಿ ಖಾಯ್ದೆ, ಕೃಷಿ ಮಾರುಕಟ್ಟೆ ಮತ್ತು ರೈತರ ಬೆಳೆಗಳ ಬೆಲೆಯ ಖಾಯ್ದೆಯ ವಿರೋಧವಾಗಿ ರೈತಾಪಿ ವರ್ಗ ಕಳೆದ 8 ತಿಂಗಳಿಂದ ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಿದ್ದಾರೆ. ರೈತರಿಂದ ಆಯ್ಕೆಯಾದ ಸರಕಾರ ರೈತರ ಪರವಾಗಿ ಕೆಲಸ ಮಾಡಬೇಕಿದೆ. ಇಲ್ಲವಾದರೆ ರೈತರೆ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯದ ಚಿತ್ರದುರ್ಗ, ಕೋಲಾರ, ತುಮಕೂರು, ರಾಮನಗರ ಜಿಲ್ಲೆಯ ಬಯಲು ಸೀಮೆ ಪ್ರದೇಶವಾಗಿದೆ. ವರ್ಷದಿಂದ ವರ್ಷಕ್ಕೆ ಮುಂಗಾರು ಮಳೆ ಕುಂಠಿತವಾಗಿ ರೈತಾಪಿವರ್ಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಪ್ರಪಂಚವೇ ಸಂಕಷ್ಟಕ್ಕೆ ಸಿಲುಕಿದರೆ ರೈತಾಪಿ ವರ್ಗ ಮಾತ್ರ ವ್ಯವಸಾಯ ಮಾಡುವುದನ್ನು ಬೀಡದೆ ನಮಗೆಲ್ಲ ಅನ್ನ ಹಾಕುವ ಕೆಲಸ ಮಾಡ್ತಿದ್ದಾರೆ ಎಂದು ತಿಳಿಸಿದರು.
ಮುಂಗಾರು ಮಳೆಯ ಆಟದಿಂದ ಕೊರಟಗೆರೆ ಕ್ಷೇತ್ರದಲ್ಲಿ 29 ಸಾವಿರ ಹೆಕ್ಟೇರ್‌ ಜಮೀನಿನಲ್ಲಿ ಕೇವಲ 2,300 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದೆ. ಕೊರಟಗೆರೆ ಕ್ಷೇತ್ರದ ರೈತರಿಗೆ ಪೂರಕವಾಗಿ ಬಿತ್ತನೆಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡಲಾಗಿದೆ. ತೋಟಗಾರಿಕೆ, ಹೈನುಗಾರಿಕೆ ಮತ್ತು ರೇಷ್ಮೆ ಬೆಳೆಗಳಿಗೆ ಕೊರಟಗೆರೆ ರೈತರು ಹೆಚ್ಚಿನ ಆದ್ಯತೆ ನೀಡಿ ಲಾಭ ಗಳಿಸಬೇಕಿದೆ ಎಂದು ಮನವಿ ಮಾಡಿದರು.
ಕೋರಾ ಹೋಬಳಿ ಹೊಸಹಳ್ಳಿಯಲ್ಲಿ ಅಂಬೇಡ್ಕರ್‌ ಜಯಂತಿ ಮತ್ತು ಸಾವಿತ್ರಿಬಾಪುಲೆ ಮಹಿಳಾ ಸ್ವಸಹಾಯ ಸಂಘದ ಉದ್ಘಾಟನೆ, ಕೋಳಾಲ ಹೋಬಳಿಯ ಯಲಚಿಗೆರೆ ಕೃಷಿ ಅಭಿಯಾನ, ಎಂ.ಗೊಲ್ಲಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ಉದ್ಘಾಟನೆ, ಚಿಕ್ಕವಳಿ ಸಿಸಿ ರಸ್ತೆ, ಬಜ್ಜನಹಳ್ಳಿ ಸಿಸಿ ರಸ್ತೆ, ಕಾವಲಮ್ಮ ದೇವಾಲಯ ಸಿಸಿ ರಸ್ತೆ, ದೊಡ್ಡನರಸಯ್ಯಪಾಳ್ಯ ಸಿಸಿ ರಸ್ತೆ ಮತ್ತು ಚರಂಡಿಯ ಸುಮಾರು 2 ಕೋಟಿ ಕಾಮಗಾರಿಗೆ ಶಾಸಕ ಡಾ.ಜಿ.ಪರಮೇಶ್ವರ್‌ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಗೋವಿಂದರಾಜು, ಕೃಷಿ ನಿರ್ದೇಶಕ ನಾಗರಾಜು, ತಾಪಂ ಇಓ ಶಿವಪ್ರಕಾಶ್‌, ಸಿಡಿಪಿಓ ಅಂಬಿಕಾ, ತೋಟಗಾರಿಕೆ ನಿರ್ದೇಶಕ ನಾಗರಾಜು, ರೇಷ್ಮೆ ಇಲಾಖೆ ಲಕ್ಷ್ಮೀನರಸಯ್ಯ, ಪಶು ಇಲಾಖೆ ರಂಗೇಗೌಡ, ಅರಣ್ಯಾಧಿಕಾರಿ ಸುರೇಶ್‌, ಬೆಸ್ಕಾಂ ಎಇಇ ಮಲ್ಲಣ್ಣ, ಜಿಪಂ ಎಇಇ ಮಂಜುನಾಥ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಅರಕೆರೆಶಂಕರ್‌, ಅಶ್ವತ್ಥನಾರಾಯಣ್‌, ಯುವಧ್ಯಕ್ಷ ವಿನಯ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!