ಮಧುಗಿರಿ: ಕ್ಷೇತ್ರದ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆಯಿದ್ದು, ಸಂಸದರು ರಾಜಕಾರಣ ಮಾಡುವುದನ್ನು ಬಿಟ್ಟು ಸತ್ಯ ನುಡಿಯಲಿ. ಸುಳ್ಳು ಹೇಳಿದರೆ ನಾಗರೀಕ ಸಮಾಜ ಕ್ಷಮಿಸಲ್ಲ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಸಂಸದರ ಆರೋಪಕ್ಕೆ ತಿರುಗೇಟು ನೀಡಿದರು.
ಪಟ್ಟಣದ ಸಿಪಿಸಿ ಸಭಾಂಗಣದಲ್ಲಿ ಯುವ ವಕೀಲರು ಹಾಗೂ ಪತ್ರಕರ್ತರಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿ, ಸಂಸದರು ಹಿರಿಯರು ಏಕವಚನದಲ್ಲಿ ಶಾಸಕನನ್ನು ಅವಹೇಳನ ಮಾಡುವುದು ಕ್ಷೇತ್ರಕ್ಕೆ ಮಾಡಿದ ಅವಮಾನದಂತೆ ಅವರನ್ನು ಗೆಲ್ಲಿಸಿದ ಜನರೇ ನನ್ನನ್ನು ಬಹುಮತದಿಂದ ಗೆಲ್ಲಿಸಿದ್ದು ಅಪವಿತ್ರ ಮೈತ್ರಿಯೊಂದಿಗೆ ತಾಲೂಕಿಗೆ ಬರುವುದು ನಿಲ್ಲಿಸಲಿ, ಇಲ್ಲಿಯವರೆಗೂ ನಾನು ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಯನ್ನೂ ಸಹ ಏಕವಚನದಲ್ಲಿ ನಿಂದಿಸಿಲ್ಲ, ಎಲ್ಲರನ್ನು ಗೌರವಿಸುವ ಸಂಸ್ಕಾರವನ್ನು ನನ್ನ ಹೆತ್ತವರು ಹಾಗೂ ನನ್ನ ಸಮಾಜ ನನಗೆ ಹೇಳಿಕೊಟ್ಟಿದೆ, ಕ್ಷೇತ್ರದ ಅಭಿವೃದ್ಧಿಗಾಗಿ ನಾನೂ ಯಾರ ಜೊತೆ ಬೇಕಾದರೂ ಹೊಂದಾಣಿಕೆಗೆ ಸಿದ್ಧ, ಸಂಸದರಾಗಲಿ ನಾನಾಗಲಿ ಧರ್ಮಕ್ಕೆ ಸೇವೆ ಮಾಡುತ್ತಿಲ್ಲ, ಜನತೆಯ ಋಣ ನಮ್ಮ ಮೇಲಿದ್ದು, ಅದನ್ನು ಕರ್ತವ್ಯದಂತೆ ಭಾವಿಸಿ ಕೆಲಸ ಮಾಡಬೇಕು, ರಾಜಕಾರಣ ಚುನಾವಣೆಯಲ್ಲಿ ಮಾಡೋಣ ಈಗ ಅವರು ಅಭಿವೃದ್ಧಿ ಬಯಸುವುದಾದರೆ ಅವರೊಂದಿಗೆ ತೆರಳಿ ಕೆಲಸ ಮಾಡಲು ಸಿದ್ಧ, ಸಂಸದರು ಸ್ವಂತಿಕೆಯಿಂದ ಮಾತಾನಾಡಲಿ, ಯಾರನ್ನೋ ಮೆಚ್ಚಿಸಲು ಇಂತಹ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ, ನಾನೆಂದೂ ಸಂಸದರನ್ನು ನಿಂದಿಸಿಲ್ಲ, ಆದರೆ ನೀವು ಏಕವಚನದಲ್ಲಿ ನಿಂದಿಸುವುದು, ವೃಥಾ ಆರೋಪ ಮಾಡುವುದು ಸರಿಯಲ್ಲ, ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೆ ಸರ್ಕಾರವಿದೆ.
ಕ್ಷೇತ್ರಕ್ಕೆ ಜಿಲ್ಲೆಯ ಸ್ಥಾನಮಾನ, ಕೆಟಿ ಹಳ್ಳಿಯ ಕೆರೆಗೆ 3 ಟಿಎಂಸಿ ನೀರು, ಬೆಟ್ಟಕ್ಕೆ ರೋಪ್‌ವೇ, ಜವಳಿ ಪಾರ್ಕ್ ಮಾಡುವಂತಹ ಅಭಿವೃದ್ಧಿ ಕೆಲಸ ಮಾಡುತ್ತೇನೆಂದು ಹೇಳಿದ್ದೀರಿ, ಈ ಕೆಲಸ ನೀವು ಮಾಡುವುದಾದರೆ ನಾನೂ ಸ್ವಾಗತಿಸಲಿದ್ದು, ಸಾರ್ವಜನಿಕವಾಗಿ ಸನ್ಮಾನಿಸಿ ಗೌರವಿಸುತ್ತೇನೆ, ಆದರೆ ಆಧಾರವಿಲ್ಲದೆ ನನ್ನನ್ನು ಇಂತಹ ಮಾತುಗಳಿಂದ ನಿಂದಿಸುವುದು ಸರಿಯಲ್ಲ, ಇದರಿಂದ ನನ್ನ ತೇಜೋವಧೆಗಿಂತ ನಿಮಗೆ ಹೆಚ್ಚು ಮುಖಭಂಗವಾಗುತ್ತದೆ, ಅದು ನನಗೂ ಇಷ್ಟವಿಲ್ಲ, ದಯಮಾಡಿ ಇಂತಹ ಸತ್ಯಕ್ಕೆ ದೂರವಾದ ಮಾತುಗಳು ಬೇಡ, ಕಳೆದ 3 ವರ್ಷದಿಂದ ಪಕ್ಷ ಹಾಗೂ ಜಾತಿ ಭೇದವಿಲ್ಲದೆ ಕಾಂಗ್ರೆಸ್, ಬಿಜೆಪಿ ಪಕ್ಷದವರು ಬಂದರೂ ಅಣ್ಣ ತಮ್ಮಂದಿರಂತೆ ಭಾವಿಸಿ ನಗುತ್ತಲೇ ಅವರ ಕೆಲಸ ಮಾಡಿಕೊಟ್ಟು ನನ್ನ ಇತಿಮಿತಿಯಲ್ಲಿ ಜನಸೇವೆ ಮಾಡುತ್ತಿದ್ದೇನೆ, ಆಯ್ಕೆಯಾದ ಜನಪ್ರತಿನಿಧಿಗಳು ತಮ್ಮದೇ ಕೊಡುಗೆಯನ್ನು ಕ್ಷೇತ್ರಕ್ಕೆ ನೀಡಿದ್ದಾರೆ, ಹೇಮಾವತಿ ಬಂದಿದ್ದು ಡಾ.ಜಿ.ಪರಮೇಶ್ವರ್ ಅವರಿಂದ, ನಾನೂ ಸಹ ಕೈಗಾರಿಕಾ ಕಾರಿಡಾರ್ ತಂದಿದ್ದೇನೆ, ಆದರೆ ನನ್ನದಲ್ಲದ ಕೆಲಸವನ್ನು ನನ್ನದು ಎನ್ನುವುದು ಸರಿಯಲ್ಲ, ಸಂಸದರ ಯಾವುದೇ ಆರೋಪಗಳು ಅವರ ಸ್ವಂತಿಕೆಯಿಂದ ಬಂದಿಲ್ಲ ಎಂಬುದು ನನಗೆ ತಿಳಿದಿದೆ, ಅವರಿಗೆ ದೇವರು ಒಳ್ಳೆಯ ಮನಸ್ಸು ಕೊಡಲಿ ಎಂದರು.
ಕಾಯಕವೇ ಕೈಲಾಸವೆನ್ನುವ ಬಸವಣ್ಣ, ಸಮಾನತೆ ಸಾರಿದ ಅಂಬೇಡ್ಕರ್ ತತ್ವದಿಂದ ಕ್ಷೇತ್ರದಲ್ಲಿ ಜನಸೇವೆ ಮಾಡುತ್ತಿದ್ದೇನೆ, ನಾನು ತಪ್ಪು ಮಾಡಿದರೆ ಸಂಸದರೆ ನೇರವಾಗಿ ತಿಳಿ ಹೇಳಬಹುದು, ನನ್ನ ತೇಜೋವಧೆಗೆ ಮುಂದಾದರೆ ಸಮಾಜ ಕ್ಷಮಿಸುವುದಿಲ್ಲ ಎಂದರು.
ಪುರಸಭೆ ಸದಸ್ಯ ಎಂ.ಆರ್.ಜಗನ್ನಾಥ್ ಮಾತನಾಡಿ, ಕುಮಾರಸ್ವಾಮಿ ಅಧಿಕಾರದಲ್ಲಿದ್ದರೆ ಸಂಸದರು, ವಿರೋಧಿಗಳು ಮೂಗಿನ ಮೇಲೆ ಬೆರಳಿಡುವಂತಹ ಅಭಿವೃದ್ಧಿಯಾಗುತ್ತಿತ್ತು, ಈಗ ಬಿಜೆಪಿಯೇ ಅಧಿಕಾರದಲ್ಲಿದ್ದು ಅವರೇ ಕ್ಷೇತ್ರದ ಅಭಿವೃದ್ಧಿಯ ಚುಕ್ಕಾಣಿ ಹಿಡಿದರೆ ನಾವೂ ಹಿಂಬಾಲಿಸುತ್ತೇವೆ, ಆದರೆ ಅಪವಿತ್ರ ಮೈತ್ರಿಯೊಂದಿಗೆ ಬಂದು ಶಾಸಕರನ್ನು ಏಕವಚನದಲ್ಲಿ ನಿಂದಿಸಿದರೆ ಸಮಾಜಕ್ಕೂ ನೋವಾಗಲಿದ್ದು, ಮತ್ತೆ ಈ ಘಟನೆ ಮರುಕಳಿಸಬಾರದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಂ.ಎಲ್.ಗಂಗರಾಜು, ನಾರಾಯಣ್, ವಕೀಲರ ಸಂಘದ ಕಾರ್ಯದರ್ಶಿ ದಯಾನಂದ್, ಮಾಜಿ ಕಾರ್ಯದರ್ಶಿ ಶಿವಣ್ಣ, ಅಶೋಕ್, ಜೆಡಿಎಸ್ ಎಸ್ಸಿ ಘಟನಕ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ಜೆಡಿಎಸ್ ಮುಖಂಡರು, ವಕೀಲರು ಇತರರಿದ್ದರು.
Get real time updates directly on you device, subscribe now.
Comments are closed.