ಗಂಡಸರು ಮನೆಯಲ್ಲಿರಿ, ರಾಜಕಾರಣ ಮಾಡಲು ಬರಬೇಡಿ

ಇಂದು ಸ್ತ್ರೀ ಶಕ್ತಿ ಪ್ರಬಲವಾಗಿದೆ: ಡಾ.ಜಿ.ಪರಮೇಶ್ವರ್

340

Get real time updates directly on you device, subscribe now.

ಮಧುಗಿರಿ: ಗಂಡಸರು ಮನೆಯಲ್ಲಿರಿ, ರಾಜಕಾರಣ ಮಾಡಲು ಬರಬೇಡಿ, ಸ್ತ್ರೀ ಶಕ್ತಿ ಪ್ರಬಲವಾಗಿದೆ ಎಂದು ಮಾಜಿ ಡಿಸಿಎಂ ಮತ್ತು ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್‌ ತಿಳಿಸಿದರು.
ತಾಲ್ಲೂಕಿನ ಬ್ಯಾಲ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಬ್ಯಾಲ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2 ಸಾವಿರ ಬಡ ಕುಟುಂಬಗಳಿಗೆ ಆಹಾರದ ಕಿಟ್‌ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುರವರ ಹೋಬಳಿಗೆ ಸೇರಿರುವ 6 ಗ್ರಾಮ ಪಂಚಾಯಿತಿಗಳಾದ ಕೋಡ್ಲಾಪುರ, ಬ್ಯಾಲ್ಯ, ಕೊಡಗದಾಲ, ಗೊಂದಿಹಳ್ಳಿ ಮತ್ತು ಕೊಂಡವಾಡಿ ಗ್ರಾಪಂಗಳಲ್ಲಿ ಮಹಿಳೆಯರೇ ಅಧ್ಯಕ್ಷರುಗಳಾಗಿದ್ದು, ಇನ್ನೂ ಪುರವರ ಜಿಪಂ ಕ್ಷೇತ್ರವು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ ಮತ್ತು ಕೆಲವು ತಾಪಂ ಕ್ಷೇತ್ರಗಳು ಮಹಿಳೆಗೆ ಮೀಸಲು ಆಗಿರುವುದರ ಬಗ್ಗೆ ಪ್ರಸ್ತಾಪಿಸಿ ಮಹಿಳೆಯರೇ ಸ್ಟ್ರಾಂಗು ಕಣೋ ಎಂದು ಹೇಳಿದ ಮಾತು ಎಲ್ಲರಿಗೂ ಹಾಸ್ಯ ಭರಿತವಾಗಿತ್ತು, ಅಭಿವೃದ್ಧಿ ವಿಚಾರವಾಗಿ ಗ್ರಾಪಂ ಅಧ್ಯಕ್ಷರು ಮಹಿಳೆಯರಾಗಿದ್ದರೂ ಮುಕ್ತವಾಗಿ ನನ್ನೊಡನೆ ಚರ್ಚಿಸಿ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು.
ಇಂದಿರಾ ಗಾಂಧಿಯವರು ಪ್ರಧಾನಮಂತ್ರಿಯಾಗಿದ್ದಾಗ ಇಡೀ ಪ್ರಪಂಚವೇ ಅವರ ಆಡಳಿತಕ್ಕೆ ಬೆಸ್ತು ಬಿದ್ದಿದ್ದು, ಅಂತಹ ದಿಟ್ಟ ಮಹಿಳೆ ದೇಶವನ್ನು 17 ವರ್ಷಗಳ ಕಾಲ ಮುನ್ನಡೆಸಿದಾಗ ಇನ್ನೂ ಗ್ರಾಮ ಪಂಚಾಯಿತಿಗಳ ನಿರ್ವಹಿಸುವುದು ಕಷ್ಟವೇನಲ್ಲ ಎಂದು ಮಹಿಳಾ ಅಧ್ಯಕ್ಷರು ರಾಜಕೀಯವಾಗಿ ಪ್ರೋತ್ಸಾಹಿಸಿದ ಘಟನೆ ನಡೆಯಿತು.
ಕೊರೊನಾ ಮೂರನೇ ಅಲೆ ಹರಡುವ ಮುನ್ನವೇ ಜನರು ಪರಸ್ಪರ ಎಚ್ಚರಿಕೆ ವಹಿಸುವುದು ಒಳಿತು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ದೈಹಿಕ ಅಂತರ ಕಾಪಾಡುವುದರ ಬಗ್ಗೆ ತಿಳಿಸಿ, ಪುರವರದಿಂದ ಬ್ಯಾಲ್ಯ ರಸ್ತೆ ಕಾಮಗಾರಿ ತಡವಾಗುತ್ತಿರುವುದರ ಬಗ್ಗೆ ಪ್ರಸ್ತಾಪಿಸಿ, ಈ ಭಾಗದ ಮುಖಂಡರು ಗುತ್ತಿಗೆದಾರ ಎಲ್ಲಿದ್ದರೂ ಕರೆತಂದು ಕೆಲಸ ಮಾಡಿಸಿಕೊಳ್ಳಿ, ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸಿ, ಇಲ್ಲವಾದರೆ ಆತನನ್ನು ಬ್ಲ್ಯಾಕ್‌ ಲಿಸ್ಟ್ ಗೆ ಸೇರಿಸುವುದಾಗಿ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಮೂವತ್ತು ಸಾವಿರದ ಆಹಾರದ ಕಿಟ್ ಗಳನ್ನು ವಿತರಿಸಿದ್ದು ಬ್ಯಾಲ್ಯ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಅತಿಹೆಚ್ಚು ಕಡು ಬಡವರು ಇರುವುದರಿಂದ ಆಹಾರ ಕಿಟ್‌ಗಳನ್ನು ವಿತರಿಸಲು ತಡವಾಯಿತು. ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯ ಹತ್ತು ವೈದ್ಯರ ತಂಡ ಕಳೆದ ಒಂದೂವರೆ ತಿಂಗಳು ಕೊರೊನಾ ಸೋಂಕಿತರ ಮನೆಗಳಿಗೆ ತೆರಳಿ ಆಹಾರ ಔಷಧ ಕಿಟ್‌ಗಳನ್ನು ನೀಡಿರೋದನ್ನು ಸಹ ಪ್ರಸ್ತಾಪಿಸಿದರು. ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣದ ಬಗ್ಗೆ ಭರವಸೆ ನೀಡಿ ರಸ್ತೆ ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗ ರತ್ನಮ್ಮ ಬೈರಪ್ಪ, ಉಪಾಧ್ಯಕ್ಷೆ ಅಮೃತಾ ನಾಗರಾಜ್‌, ಮುಖಂಡರಾದ ಭೈರಪ್ಪ, ರಮಾಬಾಯಿ, ಎಪಿಎಂಸಿ ಉಪಾಧ್ಯಕ್ಷ ಕೊಂಡವಾಡಿ ರಾಜ್‌ ಕುಮಾರ್‌, ಗ್ರಾಪಂ ಸದಸ್ಯರಾದ ಶಾರದಮ್ಮ, ಸತ್ಯನಾರಾಯಣ, ಸ್ವಾತಿ, ಎನ್‌.ಯೋಗೀಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶ್ವ್ಥ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಜಯಮ್ಮ, ಬ್ಯಾಲ್ಯ ಸುಮಾ ಪ್ರಕಾಶ್‌ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!